
ರಾಮನಗರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಆರಂಭಿಸಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಪೊಲೀಸ್ ಠಾಣೆಯ ಡಿವೈಎಸ್ಪಿ ರಮೇಶ್ ಮತ್ತು ಪಿಎಸ್‌ಐ ಯೋಗೇಶ್, ದೌರ್ಜನ್ಯ ಸಂತ್ರಸ್ತರಿಗೆ ಬೆದರಿಕೆ ಹಾಕಿ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ದಲಿತ ಸಂಘಟನೆಗಳು, ಡಿವೈಎಸ್ಪಿ ವರ್ಗಾವಣೆಗೆ ಆಗ್ರಹಿಸಿವೆ.
ಕಂದಾಯ ಭವನದ ಆವರಣದಲ್ಲಿ ಸೋಮವಾರ ಸಮತಾ ಸೈನಿಕ ದಳದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಮುಖಂಡರು, ಡಿವೈಎಸ್ಪಿ ಹಾಗೂ ಪಿಎಸ್‌ಐ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಳೆಯನ್ನೂ ಲೆಕ್ಕಿಸದೆ ಕಂದಾಯ ಭವನದ ಮೆಟ್ಟಲುಗಳ ಮೇಲೆ ಪ್ರತಿಭಟನೆ ನಡೆಸಿದರು.
ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನ್ಯಾಯ ವಿಳಂಬ ತಪ್ಪಿಸಲು ರಾಜ್ಯ ಸರ್ಕಾರವು, ಪ್ರಕರಣಗಳ ಪ್ರತ್ಯೇಕ ನಿರ್ವಹಣೆಗೆ ಡಿಸಿಆರ್‌ಇ ಠಾಣೆಗಳನ್ನು ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸಿದೆ. ಆದರೆ, ರಾಮನಗರ ಠಾಣೆಯಲ್ಲಿರುವ ಡಿವೈಎಸ್ಪಿ ಮತ್ತು ಪಿಎಸ್‌ಐ ಸಂತ್ರಸ್ತರ ಕಣ್ಣೀರು ಒರೆಸದೆ ದರ್ಪ ತೋರುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ದೂರು ಕೊಟ್ಟರೂ ಪ್ರಕರಣ ದಾಖಲಿಸದ ಡಿವೈಎಸ್ಪಿ, ದೌರ್ಜನ್ಯ ಎಸಗಿದವರ ಪರವಾಗಿಯೇ ವಕಾಲತ್ತು ಮಾಡಿ ಸಂತ್ರಸ್ತರಿಗೆ ಬೆದರಿಕೆ ಹಾಕುತ್ತಾರೆ. ದುಡ್ಡಿದ್ದವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ದಲಿತ ಸಂಘಟನೆಗಳ ಮುಖಂಡರು ನ್ಯಾಯ ಕೇಳಲು ಬಂದರೆ ಅವರಿಗೂ ಧಮ್ಕಿ ಹಾಕುತ್ತಾರೆ. ಠಾಣೆಗೆ ಬರುವ ಸಂತ್ರಸ್ತರು ಹಾಗೂ ಸಂಘಟನೆಗಳ ಅಹವಾಲು ಆಲಿಸದೆ ದುರಹಂಕಾರ ಪ್ರದರ್ಶಿಸುತ್ತಾರೆ ಎಂದು ದೂರಿದರು.
ಬಿಸಿಎಂ ಅಧಿಕಾರಿ ಮತ್ತು ವಾರ್ಡನ್‌ನಿಂದ ಹಲ್ಲೆಗೊಳಗಾದ ಹಾಸ್ಟೆಲ್ ಅಡುಗೆ ಕೆಲಸದಾಕೆ ನೀಡಿದ ದೂರು ದಾಖಲಿಸಲು ಒಂದು ವಾರ ತೆಗೆದುಕೊಂಡಿದ್ದಾರೆ. ಪ್ರಶ್ನಿಸಲು ಹೋದ ಸಂಘಟನೆ ಮುಖಂಡರ ಮೇಲೆ ಎನ್‌ಸಿಆರ್ ಮಾಡಿದ್ದಾರೆ. ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿ ಧಮ್ಕಿ ಹಾಕಿದ್ದಾರೆ. ದಲಿತನಾಗಿದ್ದೂ ದಲಿತ ವಿರೋಧಿಯಾಗಿರುವ ಡಿವೈಎಸ್ಪಿ ರಮೇಶ್ ಅವರನ್ನು ಕೂಡಲೇ ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಎಂದು ಏಕವಚನದಲ್ಲೇ ಮುಖಂಡರು ಹರಿಹಾಯ್ದರು.
ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಲೇ ಇವೆ. ಸಂತ್ರಸ್ತರಿಗೆ ನ್ಯಾಯ ಸಿಗುತ್ತಿಲ್ಲ. ಡಿಸಿಆರ್‌ಇ ಠಾಣೆ ಸ್ಥಾಪನೆಯಾಗಿ ಮೂರು ತಿಂಗಳಾದರೂ ಕೇವಲ ಎರಡು ಪ್ರಕರಣ ದಾಖಲಾಗಿವೆ. ಹೆಚ್ಚುತ್ತಿರುವ ದೌರ್ಜನ್ಯಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಕೂಡಲೇ ದಲಿತರ ಕುಂದುಕೊರತೆ ಸಭೆ ನಡೆಸಬೇಕು ಎಂದು ಆಗ್ರಹಿಸಿದರು.
ಡಿಸಿಆರ್‌ಇ ಬೆಂಗಳೂರು ಕೇಂದ್ರ ವಲಯದ ಎಸ್‌ಪಿ ಕರಿಬಸವೇಗೌಡ ಅವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್ ಜೊತೆಗಿದ್ದರು. ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.
ಸಮತಾ ಸೈನಿಕ ದಳದ ಕಾರ್ಯಾಧ್ಯಕ್ಷ ಡಾ. ಜಿ. ಗೋವಿಂದಯ್ಯ, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರಸ್ವಾಮಿ, ಧಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ, ಬಿಎಸ್‌ಪಿ ಜಿಲ್ಲಾಧ್ಯಕ್ಷ ರಾಜು ಮೌರ್ಯ, ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಹರೀಶ್ ಬಾಲು, ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಗೋಪಾಲಯ್ಯ, ಡಿಎಸ್ಎಸ್ ಮುಖಂಡ ಶಿವಶಂಕರ್, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿವಿಎಸ್ ವೆಂಕಟೇಶ್, ಮುಖಂಡರಾದ ಗುಡ್ಡೆ ವೆಂಕಟೇಶ್, ಪಟ್ಲು ಗೋವಿಂದರಾಜು, ನಿಖಿಲ್ ಸಜ್ಜೆನಿಂಗಯ್ಯ, ಎಸ್‌ಎಸ್‌ಡಿ ಸುರೇಶ್, ಬನಶಂಕರಿ ನಾಗು, ಬಿವಿಎಸ್ ಕುಮಾರ್, ಲಕ್ಷ್ಮಣ ಕಲ್‌ಬಾಳ್, ಮರಳವಾಡಿ ಮಂಜು, ಯಡವನಹಳ್ಳಿ ಚಂದ್ರು, ಕೆಬ್ಬೆದೊಡ್ಡಿ ಗೋವಿಮದ್, ಅಪ್ಪಗೆರೆ ಶ್ರೀನಿವಾಸ್ ಹಾಗೂ ಇತರರು ಇದ್ದರು.
ಸೌಜನ್ಯದಿಂದ ವರ್ತಿಸಲು ಸೂಚಿಸಿರುವೆ: ಎಸ್‌ಪಿ
ಪ್ರತಿಭಟನಾ ಸ್ಥಳಕ್ಕೆ ಬಂದ ಡಿಸಿಆರ್‌ಇ ಬೆಂಗಳೂರು ವಿಭಾಗದ ಎಸ್‌ಪಿ ಕರಿಬಸವೇಗೌಡ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ‘ನೀವು ಮಾಡಿರುವ ಆರೋಪಗಳ ಕುರಿತು ಡಿವೈಎಸ್ಪಿ ಮತ್ತು ಎಸ್‌ಐ ಜೊತೆ ಮಾತನಾಡಿದ್ದೇನೆ. ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ದೂರು ಕೊಡಲು ಠಾಣೆಗೆ ಬರುವ ಸಂತ್ರಸ್ತರ ಜೊತೆ ಸೌಜನ್ಯದೊಂದಿಗೆ ಮಾತನಾಡಿ ವರ್ತಿಸುವ ಮೂಲಕ ಅವರಲ್ಲಿ ನ್ಯಾಯ ಸಿಗುವ ಭರವಸೆ ಮೂಡಿಸಬೇಕು. ಮೇಲ್ನೋಟಕ್ಕೆ ನಿಜ ಎಂದು ಕಂಡುಬರುವ ಹಲ್ಲೆ ಪ್ರಕರಣಗಳಲ್ಲಿ ನಿರ್ಲಕ್ಷ್ಯ ತೋರದೆ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಸೂಚನೆ ನೀಡಿದ್ದೇನೆ. ನನ್ನ ಸೂಚನೆ ಮೇರೆಗೆ ಠಾಣೆಯಲ್ಲಿ ಕಳೆದ 10 ದಿನಗಳಲ್ಲಿ 3 ಪ್ರಕರಣಗಳು ದಾಖಲಾಗಿವೆ. ನಿಮ್ಮ ಮನವಿಯನ್ನು ಡಿಜಿಪಿ ಗಮನಕ್ಕೆ ತರಲಾಗುವುದು. ಸಂಘಟನೆಗಳ ಮುಖಂಡರ ವಿರುದ್ಧ ರಾಮನಗರ ಟೌನ್ ಠಾಣೆಯಲ್ಲಿ ಮಾಡಿಕೊಂಡಿರುವ ಎನ್‌ಸಿಆರ್ ಕೈ ಬಿಡಲು ಸೂಚಿಸಿರುವೆ’ ಎಂದು ಡಿಸಿಆರ್‌ಇ ಬೆಂಗಳೂರು ಕೇಂದ್ರ ವಿಭಾಗದ ಎಸ್‌ಪಿ ಕರಿಬಸವೇಗೌಡ ಪ್ರತಿಭಟನಾಕಾರರಿಗೆ ತಿಳಿಸಿದರು. ಬಳಿಕ ಮುಖಂಡರು ಪ್ರತಿಭಟನೆ ಕೈ ಬಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.