ಚನ್ನಪಟ್ಟಣ (ರಾಮನಗರ): ‘ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಯಾದ ಬಳಿಕ, ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಬದಲು ಬಿಜೆಪಿ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದಾರೆ. ಬಿಜೆಪಿಯವರು ಕುಮಾರಸ್ವಾಮಿ ಅವರನ್ನು ತಮ್ಮ ಪಕ್ಷದ ವಕ್ತಾರರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ. ಜೆಡಿಎಸ್ ಈಗ ಇಲ್ಲವಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.
ಪಟ್ಟಣದಲ್ಲಿ ಶನಿವಾರ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುಮಾರಸ್ವಾಮಿ ಅವರು ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಬೇಕು ಎಂದು ಹೇಳುತ್ತಿದ್ದಾರೆಯೇ ಹೊರತು, ತಮ್ಮ ಪಕ್ಷವನ್ನು ಬಲಪಡಿಸಿ ಎಂದು ಹೇಳುತ್ತಿಲ್ಲ. ತೆನೆ ಹೊತ್ತ ಮಹಿಳೆ ಅದನ್ನು ಬಿಸಾಕಿ ಹೋಗುವಂತೆ ಬಿಜೆಪಿಯವರು ಮಾಡಿದ್ದಾರೆ’ ಎಂದರು.
‘ಲೋಕಸಭಾ ಚುನಾವಣೆ ಬಳಿಕ ಆ ಪಕ್ಷದ ಪರಿಸ್ಥಿತಿ ಏನಾಗುತ್ತದೆ ಎಂದು ಕುಮಾರಸ್ವಾಮಿ ಹೇಳಬೇಕು. ಗೌಡರು ಕಷ್ಟಪಟ್ಟು ಕಟ್ಟಿದ ಪಕ್ಷದ ಸ್ಥಿತಿ ನೋಡಿ ನನಗೂ ನೋವಾಗುತ್ತದೆ. ನಾವು, ಜೆಡಿಎಸ್‌ನವರೇ ಜಗಳವಾಡುತ್ತಿದ್ದೆವೇ ಹೊರತು ಬಿಜೆಪಿಯವರಲ್ಲ. ಅವರ ಈಗಿನ ಸ್ಥಿತಿ ಕಂಡು ವ್ಯಥೆಯಾಗುತ್ತಿದೆ’ ಎಂದು ಹೇಳಿದರು.
ನಟ–ನಿರ್ಮಾಪಕ ಒಂದಾಗಿದ್ದಾರೆ: ‘ಸಂಕ್ರಾಂತಿ ಬಳಿಕ ಸರ್ಕಾರ ಬೀಳುತ್ತದೆ ಎಂದಿದ್ದ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಜ್ಯೋತಿಷ ಕಲಿತಿದ್ದಾರೆ. ನಟರಾದ ಅವರು ಸಿನಿಮಾ ಸಹ ತೆಗೆದಿದ್ದಾರೆ. ಈಗ ನಟ ಮತ್ತು ನಿರ್ಮಾಪಕ (ಎಚ್‌ಡಿಕೆ) ಒಂದಾಗಿದ್ದು, ಇಬ್ಬರೂ ಚೆನ್ನಾಗಿರಲಿ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಜಿಲ್ಲೆಯ ಜೆಡಿಎಸ್–ಬಿಜೆಪಿ ಕಾರ್ಯಕರ್ತರು ಲೋಕಸಭಾ, ಜಿ.ಪಂ ಹಾಗೂ ತಾ.ಪಂ. ಚುನಾವಣೆಗಳನ್ನು ಒಗ್ಗಟ್ಟಿನಿಂದ ಮಾಡಲು ಸಾಧ್ಯವಿಲ್ಲ. ಅವರಿಬ್ಬರೂ ಸ್ಟಂಟ್ ಮಾಡಿ (ಎಚ್‌ಡಿಕೆ–ಯೋಗೇಶ್ವರ್) ತಬ್ಬಿಕೊಳ್ಳುತ್ತಿದ್ದಾರೆ. ಕಾರ್ಯಕರ್ತರು ಈಗಲಾದರೂ ಅವರನ್ನು ಬಿಟ್ಟು ಬದಲಾಗಿ ಬುದ್ಧಿವಂತರಾಗಬೇಕು. ಕೈನ ಒಂದೊಂದು ಬೆರಳು ಸೇರಿ ಮುಷ್ಠಿಯಾಗಿದ್ದು, ನೀವು ನಮ್ಮ ಜೊತೆ ಬಂದು ಸೇರಿಕೊಳ್ಳಿ. ನಾವು ಎಲ್ಲರನ್ನೂ ಒಟ್ಟಾಗಿ ಮುಂದಕ್ಕೆ ತೆಗೆದುಕೊಂಡು ಹೋಗುತ್ತೇವೆ. ನಿಮ್ಮ ಬದುಕು ಸಹ ಸಮೃದ್ಧಿಯಾಗುತ್ತದೆ’ ಎಂದು ಶಿವಕುಮಾರ್ ಕಾಂಗ್ರೆಸ್‌ಗೆ ಆಹ್ವಾನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.