ADVERTISEMENT

ಮದ್ಯ ಮುಕ್ತ ಗ್ರಾಮ ಘೋಷಣೆ ನಿರ್ಣಯ

ಬರಡನಹಳ್ಳಿ ಕೃಷ್ಣಮೂರ್ತಿ
Published 3 ಮೇ 2020, 13:10 IST
Last Updated 3 ಮೇ 2020, 13:10 IST
ಐ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಮಾಡದಂತೆ ಗ್ರಾಮದ ಮುಖಂಡರು, ಪಂಚಾಯಿತಿ ಸದಸ್ಯರು ಸಭೆ ನಡೆಸಿ ತೀರ್ಮಾನಿಸಿದರು
ಐ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಮಾಡದಂತೆ ಗ್ರಾಮದ ಮುಖಂಡರು, ಪಂಚಾಯಿತಿ ಸದಸ್ಯರು ಸಭೆ ನಡೆಸಿ ತೀರ್ಮಾನಿಸಿದರು   

ಕನಕಪುರ: ಲಾಕ್‌ಡೌನ್‌ ಸಂದರ್ಭದಲ್ಲಿ ಸರ್ಕಾರ ಮದ್ಯ ನಿಷೇಧಿಸಿತ್ತು. ಈಗ ಸಡಿಲ ಹಿನ್ನೆಲೆಯಲ್ಲಿ ಕೆಲವು ವಲಯಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ.

ಮದ್ಯಪಾನ ಮರೆತಿರುವ ಕೆಲವರು ಇದರಿಂದ ದೂರ ಉಳಿದಿದ್ದಾರೆ. ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಐ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮದ್ಯ ಮಾರಾಟ ಮಾಡದಂತೆ ಮದ್ಯ ಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡಲು ಗ್ರಾಮಸ್ಥರು ನಿರ್ಣಯ ಕೈಗೊಂಡಿದ್ದಾರೆ.

ಸರ್ಕಾರ ಮೇ.4ರಿಂದ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವುದರಿಂದ ಐ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಮುಖಂಡರು ಶನಿವಾರ ಸಭೆ ನಡೆಸಿ ಅಬಕಾರಿ ಇಲಾಖೆಯಿಂದ ಲೈಸನ್ಸ್‌ ಪಡೆದವರು ಮಾತ್ರ ಮದ್ಯ ಮಾರಾಟ ಮಾಡಬೇಕು. ಗ್ರಾಮಗಳಲ್ಲಿ ಮಾರಾಟ ಮಾಡುವಂತಿಲ್ಲ. ಪ್ರತಿ ಗ್ರಾಮಗಳಲ್ಲೂ ಅನಧಿಕೃತ ವೈನ್‌ ಸ್ಟೋರ್‌ಗಳಿವೆ. ಎಲ್ಲಾ ಬ್ರಾಂಡ್‌ನ ಮದ್ಯ ಮಾರಾಟ ಆಗುತ್ತದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ನಿರ್ಣಯ ಕೈಗೊಂಡಿದ್ದಾರೆ.

ADVERTISEMENT

ಗ್ರಾಮಗಳಲ್ಲಿ ಅಂಗಡಿ ನಡೆಸುವವರು ಕಡ್ಡಾಯವಾಗಿ ಗ್ರಾಮ ಪಂಚಾಯಿತಿಯಿಂದ ಲೈಸನ್ಸ್‌ ಪಡೆಯಬೇಕು. ಅದನ್ನು ಮೀರಿ ಮಾರಾಟ ಮಾಡಿದರೆ ಅವರಿಗೆ ದಂಡ ವಿಧಿಸುವುದರ ಜತೆಗೆ ಅಂಗಡಿಗೆ ನೀಡಿರುವ ಲೈಸನ್ಸ್‌ ರದ್ದುಪಡಿಸಲು ಸಭೆ ತೀರ್ಮಾನಿಸಿತು. ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಮಂದಿ ಮದ್ಯ ಸೇವನೆ ಬಿಟ್ಟಿದ್ದಾರೆ. ಮುಂದೆಯೂ ಮದ್ಯ ಸೇವನೆ ಮಾಡಬಾರದು ಎಂಬುದು ನಮ್ಮ ಆಶಯ. ಮದ್ಯ ಮಾರಾಟ ಸಂಪೂರ್ಣ ಬಂದ್‌ ಮಾಡಿದರೆ ಎಲ್ಲರಿಗೂ ಒಳಿತು ಎನ್ನುತ್ತಾರೆ ತಾ.ಪಂ. ಮಾಜಿ ಅಧ್ಯಕ್ಷ ಉಮೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.