ರಾಮನಗರ: ಬೆಳಕಿನ ಹಬ್ಬವಾದ ದೀಪಾವಳಿ ಪ್ರಯುಕ್ತ ನಗರದಲ್ಲಿ ಪಟಾಕಿಗಳ ಖರೀದಿ ಭರಾಟೆಯೂ ಜೋರಾಗಿದೆ. ನಗರದ ಬೆಂಗಳೂರು–ಮೈಸೂರು ಹಳೆ ಹೆದ್ದಾರಿಯ ಆಂಜನೇಯ ಗೋಪುರದ ಎದುರಿನ ಖಾಲಿ ಜಾಗ ಸೇರಿದಂತೆ ಕೆಲ ಆಯ್ದ ಸ್ಥಳಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಇಲ್ಲಿರುವ ಏಳೆಂಟು ಮಳಿಗೆಗಳಲ್ಲಿ ಜನ ಪಟಾಕಿ ಖರೀದಿಸಿದರು.
ಮಕ್ಕಳು, ವಯಸ್ಕರು ಸೇರಿದಂತೆ ವಿವಿಧ ವಯೋಮಾನದವರು ಮಳಿಗೆಗಳಿಗೆ ಭೇಟಿ ನೀಡಿದ ಬಗೆಬಗೆಯ ಪಟಾಕಿಗಳನ್ನು ಖರೀದಿ ಮಾಡಿದರು. ಆಗೊಮ್ಮೆ ಹೀಗೊಮ್ಮೆ ಸುರಿಯುವ ಮಳೆಯು ಪಟಾಕಿ ಮಾರಾಟಗಾರರಿಗೆ ಆತಂಕ ತಂದರೂ, ಮಾರಾಟ ಸರಾಗವಾಗಿ ನಡೆಯಿತು. ಪರಿಸರಕ್ಕೆ ಅತಿ ಹೆಚ್ಚು ಮಾಲಿನ್ಯ ಉಂಟುಮಾಡುವ ಪಟಾಕಿಗಳ ಬದಲು ಹಸಿರು ಪಟಾಕಿ ಮಾರಾಟಕ್ಕೆ ಒತ್ತು ನೀಡುವಂತೆ ಮಾರಾಟಗಾರರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಹಿಂದಿನ ವರ್ಷವೂ ಆಂಜನೇಯ ಗೋಪುರದ ಎದುರಿನ ಜಾಗದಲ್ಲೇ ಪಟಾಕಿ ಮಾರಾಟ ಮಾಡಿದ್ದೆವು. ಈ ಸಲವೂ ಮಳಿಗೆ ಹಾಕಿದ್ದೇವೆ. ಹಬ್ಬಕ್ಕೆ ಕ್ಷಣಗಣನೆ ಶುರುವಾಗಿರುವುದರಿಂದ ವ್ಯಾಪಾರ ಮಂದಗತಿಯಲ್ಲಿ ನಡೆಯುತ್ತಿದೆ. ಸೋಮವಾರದಿಂದ ವ್ಯಾಪಾರ ಮತ್ತಷ್ಟು ಚೇತರಿಕೆ ಕಾಣುವ ನಿರೀಕ್ಷೆ ಎಂದು ಪಟಾಕಿ ಮಳಿಗೆ ಮಾಲೀಕರೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.