ADVERTISEMENT

ಡಿಕೆಶಿಗೆ ಶಾಸಕರ ಬೆಂಬಲವಿದೆ, ಈ ಅವಧಿಯಲ್ಲೇ ಮುಖ್ಯಮಂತ್ರಿ ಆಗಲಿ: ಶಾಸಕ ಹುಸೇನ್

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 10:23 IST
Last Updated 1 ಜುಲೈ 2025, 10:23 IST
   

ರಾಮನಗರ: ‘ನಮ್ಮ ನಾಯಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಅವಧಿಯಲ್ಲೇ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಬೇಕು. ಅದಕ್ಕೆ ಪಕ್ಷದಲ್ಲಿರುವ ಶಾಸಕರ ಬೆಂಬಲವೂ ಇದೆ. ಈ ಕುರಿತು, ಹೈಕಮಾಂಡ್ ತೀರ್ಮಾನ ಕೈಗೊಳ್ಳಬೇಕಷ್ಟೆ’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಹೇಳಿದರು.

ಮುಖ್ಯಮಂತ್ರಿ ಬದಲಾವಣೆ ಚರ್ಚೆ ಕುರಿತು ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕು ಎಂಬುದು ನಾನು ಸೇರಿದಂತೆ ಹಲವರ ಅಭಿಲಾಷೆಯಾಗಿದೆ. ಪಕ್ಷದ ಹೈಕಮಾಂಡ್ ಅವರಿಗೂ ಒಂದು ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

‘ಶಿವಕುಮಾರ್ ಅವರು ತಮ್ಮ ಅಧ್ಯಕ್ಷತೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ್ದಾರೆ. ಪೂರ್ಣ ಬಹುಮತದೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ಬರಲು ಕಾರಣಕರ್ತರಾಗಿದ್ದಾರೆ. ಮೇಕೆದಾಟು, ಭಾರತ್ ಜೋಡೊ ಪಾದಯಾತ್ರೆ ಸೇರಿದಂತೆ ಪಕ್ಷದ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅವರನ್ನು ಸಿಎಂ ಮಾಡುವುದರಿಂದ ಉತ್ತಮ ಸಂಘಟನೆಕಾರ ಮತ್ತು ಹೋರಾಟಗಾರನಿಗೆ ಗೌರವ ಕೊಟ್ಟಂತಾಗುತ್ತದೆ’ ಎಂದರು.

ADVERTISEMENT

‘ಮುಖ್ಯಮಂತ್ರಿ ಬದಲಾವಣೆಯಾಗುವುದು ಕ್ರಾಂತಿಯಲ್ಲ. ಬದಲಿಗೆ, ಅದೊಂದು ಬದಲಾವಣೆಯಷ್ಟೆ. ಸಚಿವ ರಾಜಣ್ಣ ಅವರು ಹೇಳುವಂತೆ ಇಲ್ಲಿ ಯಾವುದೇ ಕ್ರಾಂತಿಯಾಗುವುದಿಲ್ಲ. ಕೇವಲ ಮುಖ್ಯಮಂತ್ರಿ ಬದಲಾಗುತ್ತಾರೆ. ಇಲ್ಲಿ ಕ್ರಾಂತಿಯಾಗುವಂತಹದ್ದು ಏನೂ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಪಕ್ಷದ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರು ಶಾಸಕರೊಂದಿಗೆ ಸಭೆ ನಡೆಸಿ ಕ್ಷೇತ್ರದ ಅಭಿವೃದ್ಧಿ, ಕಾಮಗಾರಿಗಳು ಹಾಗೂ ಅನುದಾನ ಕುರಿತು ಕೇಳುತ್ತಾರೆ. ನಾನೂ ಅವರನ್ನು ಭೇಟಿ ಮಾಡಿ ಮಾಹಿತಿ ನೀಡುವೆ. ಇತ್ತೀಚಿಗಿನ ಅಲ್ಪಸಂಖ್ಯಾತ ಶಾಸಕರ ಸಭೆಯಲ್ಲೂ ಇದನ್ನೇ ಚರ್ಚಿಸಲಾಗಿದೆ. ‌ನನ್ನ ಕ್ಷೇತ್ರಕ್ಕೂ ₹50 ಕೋಟಿ ಅನುದಾನ ಕೊಟ್ಟಿದ್ದಾರೆ. ಅದರಲ್ಲಿ ರಸ್ತೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.