ADVERTISEMENT

ರಾಮನಗರ | ಕಾಡಾನೆ ಕಾರ್ಯಾಚರಣೆಗೆ ಬಂತು ಡ್ರೋನ್

ನಾಗರಹೊಳೆಯಿಂದ ಬಂದ ತಂಡ; ಹಗಲು–ರಾತ್ರಿ ಕಾರ್ಯಾಚರಣೆ

ಓದೇಶ ಸಕಲೇಶಪುರ
Published 1 ಜುಲೈ 2023, 5:58 IST
Last Updated 1 ಜುಲೈ 2023, 5:58 IST
ಡ್ರೋನ್ ಕ್ಯಾಮೆರಾ ಸೆರೆ ಹಿಡಿದಿರುವ ಆನೆಗಳ ರಾತ್ರಿ ಚಲನವಲನದ ಚಿತ್ರ
ಡ್ರೋನ್ ಕ್ಯಾಮೆರಾ ಸೆರೆ ಹಿಡಿದಿರುವ ಆನೆಗಳ ರಾತ್ರಿ ಚಲನವಲನದ ಚಿತ್ರ   

ರಾಮನಗರ: ಜಿಲ್ಲೆಯಲ್ಲಿ ಹೆಚ್ಚಾಗಿರುವ ಕಾಡಾನೆಗಳನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆಯು ‘ಡ್ರೋನ್’ ಕ್ಯಾಮೆರಾದ ಮೊರೆ ಹೋಗಿದೆ. ಗುಡ್ಡಗಾಡಿನಿಂದ ಆವೃತವಾಗಿರುವ ಜಿಲ್ಲೆಯ ವಿವಿಧೆಡೆ ಇತ್ತೀಚೆಗೆ ಆನೆಗಳ ಹಾವಳಿ ಹೆಚ್ಚಾಗಿದೆ. ಪ್ರಾಣಹಾನಿ ಜೊತೆಗೆ, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ‘ಡ್ರೋನ್‌’ ಬಳಕೆಗೆ ಇಲಾಖೆ ಮುಂದಾಗಿದೆ.

ಹಗಲು ಮತ್ತು ರಾತ್ರಿ ಕಾಡಾನೆಗಳ ಚಲನವಲನಗಳನ್ನು ಸೆರೆ ಹಿಡಿಯಬಲ್ಲ ಸಾಮರ್ಥ್ಯವಿರುವ ಅತ್ಯಾಧುನಿಕ ‘ಥರ್ಮಲ್ ಡ್ರೋನ್’ ಕ್ಯಾಮೆರಾವನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ತರಿಸಲಾಗಿದೆ. ಆಪರೇಟ್ ಮಾಡುವುದಕ್ಕಾಗಿ ನುರಿತ ಮೂವರು ಸಿಬ್ಬಂದಿ ಸಹ ಬಂದಿದ್ದಾರೆ.

ಮೊದಲ ಸಲ ಬಳಕೆ: ‘ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದೆ. ಅವುಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ನಿರಂತರ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಆನೆಗಳ ಹಗಲು–ರಾತ್ರಿ ಚಲನವಲನ ಪತ್ತೆಯೇ ಸವಾಲು. ಹಾಗಾಗಿ, ಮೊದಲ ಸಲ ಡ್ರೋನ್ ಕ್ಯಾಮೆರಾ ಬಳಸಿ ಅವುಗಳ ಚಲನವಲನದ ಮೇಲೆ ನಿಗಾ ಇಡಲಾಗುತ್ತಿದೆ’ ಎಂದು ಡಿಸಿಎಫ್ ದೇವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ನಾಗರಹೊಳೆಯಿಂದ ಡ್ರೋನ್‌ನೊಂದಿಗೆ ಮೂವರ ತಂಡ ಇಲ್ಲಿಗೆ ಬಂದಿದೆ. ಆನೆಗಳು ಯಾವ ಪ್ರದೇಶದಲ್ಲಿವೆ ಇವೆ ಎಂಬ ಮಾಹಿತಿ ಆಧಾರದ ಮೇಲೆ, ತಂಡ ಡ್ರೋನ್ ಕಾರ್ಯಾಚರಣೆ ನಡೆಸುತ್ತದೆ’ ಎಂದರು.

9 ಆನೆಗಳಿವೆ: ‘ಕಾವೇರಿ ವನ್ಯಧಾಮ ಹಾಗೂ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಜಿಲ್ಲೆಯನ್ನು ಪ್ರವೇಶಿಸುವ ಆನೆಗಳು, ರೈತರ ಜಮೀನು ಹಾಗೂ ಜನವಸತಿ ಪ್ರದೇಶದಲ್ಲಿ ಓಡಾಡುತ್ತಿವೆ. ‘ಸದ್ಯ ಜಿಲ್ಲೆಯಲ್ಲಿ 9 ಕಾಡಾನೆಗಳಿವೆ. ತೆಂಗಿನಕಲ್ಲು, ಕಬ್ಬಾಳುವಿನಲ್ಲಿ ತಲಾ 3 ಹಾಗೂ ಉಳಿದೆಡೆ ಒಂಟಿಯಾನೆ ಸೇರಿದಂತೆ 3 ಇವೆ’ ಎಂದು ತಿಳಿಸಿದರು.

‘ಜನವಸತಿ ಪ್ರದೇಶಕ್ಕೆ ಹತ್ತಿರವಾಗಿರುವ ಹಾಗೂ ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿರುವ ಆನೆಗಳ ಮೇಲೆ ಮೊದಲಿಗೆ ಡ್ರೋನ್ ನಿಗಾ ಇಡಲಾಗಿದೆ. ಈಗಾಗಲೇ ಹಿಡಿದಿದ್ದ ಕೆಲ ಆನೆಗಳಿಗೆ ರೆಡಿಯೊ ಕಾಲರ್ ಕೂಡ ಅಳವಡಿಸಿರುವುದು, ಆನೆಗಳು ಇರುವ ಜಾಗ ಪತ್ತೆಗೆ ಸಹಕಾರಿಯಾಗಿದೆ’ ಎಂದು ಹೇಳಿದರು.

ಶೀಘ್ರ ಕಾರ್ಯಪಡೆ: ‘ಆನೆಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ಎಲ್ಲಾ ರೀತಿಯಿಂದಲೂ ಪ್ರಯತ್ನ ನಡೆಸುತ್ತಿದೆ. ಇಲಾಖೆಯ ಸಿಬ್ಬಂದಿ ಹಾಗೂ ಸ್ಥಳೀಯರನ್ನೊಳಗೊಂಡ ಆನೆ ಕಾರ್ಯಪಡೆ ಈಗಾಗಲೇ ಸಾತನೂರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ’ ಎಂದು ಹೇಳಿದರು.

‘ಉಳಿದೆಡೆಯೂ ಸದ್ಯದಲ್ಲೇ ಕಾರ್ಯಪಡೆ ರಚನೆಯಾಗಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. ಆನೆ ಹಾವಳಿ ಇರುವೆಡೆ ಜನರು ಬೆಳಿಗ್ಗೆ 7ರ ನಂತರ ಹಾಗೂ ಸಂಜೆ 6.30ರ ನಂತರ ಜಮೀನುಗಳಿಗೆ ಹೋಗಬಾರದು’ ಎಂದು ಸಲಹೆ ನೀಡಿದರು.

ದೇವರಾಜ್ ಡಿಸಿಎಫ್ ರಾಮನಗರ
ಸಿ. ಪುಟ್ಟಸ್ವಾಮಿ ರೈತ ಮುಖಂಡ
ಆನೆಗಳ ಕಾರ್ಯಾಚರಣೆಗಾಗಿ ಮೊದಲ ಸಲ ಅತ್ಯಾಧುನಿಕ ಥರ್ಮಲ್ ಡ್ರೋನ್ ಕ್ಯಾಮೆರಾ ಬಳಸುತ್ತಿದ್ದೇವೆ. ಆನೆಗಳನ್ನು ಶೀಘ್ರ ಹಚ್ಚಲು ಕ್ಯಾಮೆರಾ ಸಹಕಾರಿಯಾಗಿದೆ.
ದೇವರಾಜ್ ಡಿಸಿಎಫ್ ರಾಮನಗರ
ಜಿಲ್ಲೆಯ ಎಲ್ಲಾ ವಲಯದಲ್ಲೂ ಡ್ರೋನ್ ಕ್ಯಾಮೆರಾ ಬಳಸಿ ಆನೆಗಳ ಮೇಲೆ ನಿಗಾ ಇಡಬೇಕು. ಅಲ್ಲದೆ ಶೀಘ್ರ ಆನೆ ಕಾರ್ಯಪಡೆಯನ್ನು ರಚಿಸಬೇಕು.
ಸಿ. ಪುಟ್ಟಸ್ವಾಮಿ ರೈತ ಮುಖಂಡ ರಾಮನಗರ
ಡ್ರೋನ್ ವಿಶೇಷತೆ ಏನು?
ಥರ್ಮಲ್ ಡ್ರೋನ್ ಹಗಲು ಮತ್ತು ರಾತ್ರಿ ಕಾಡಾನೆಗಳ ಚಲನವಲನಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ. ₹24 ಲಕ್ಷ ವೆಚ್ಚದ ಇದು ಎಲ್ಲಾ ರೀತಿಯ ವಾತಾವರಣದಲ್ಲೂ ಕಾರ್ಯನಿರ್ವಹಿಸಬಲ್ಲದು. ಮೇಲಿನಿಂದ ಸುಮಾರು 2 ಕಿ.ಮೀ. ಸುತ್ತಮುತ್ತಲಿನ ಪ್ರದೇಶದ ವ್ಯಾಪ್ತಿಯಲ್ಲಿರುವ ಆನೆಗಳ ಚಿತ್ರವನ್ನು ಸ್ಪಷ್ಟವಾಗಿ ತೆಗೆಯುತ್ತದೆ. ಹಗಲು ಹೊತ್ತು ಮಾಮೂಲಿ ಚಿತ್ರ ಹಾಗೂ ರಾತ್ರಿ ನೆಗೆಟೀವ್ ಮಾದರಿಯ ಚಿತ್ರಗಳನ್ನು ತೆಗೆಯುತ್ತದೆ. ‘ಕ್ಯಾಮೆರಾಗೆ ಮೂರು ಬ್ಯಾಟರಿಗಳಿದ್ದು ತಲಾ 40 ನಿಮಿಷದವರೆಗೆ ಚಾರ್ಜ್ ಇರುತ್ತವೆ. ಆನೆಗಳ ಎಲ್ಲಿವೆ ಎಂಬುದರ ಆಧಾರದ ಮೇಲೆ ರಾತ್ರಿ ಮತ್ತು ಹಗಲು ಕ್ಯಾಮೆರಾ ಆಪರೇಟ್ ಮಾಡಲಾಗುತ್ತದೆ. ಆನೆಗಳು ಪತ್ತೆಯಾದ ತಕ್ಷಣ ಕ್ಯಾಮೆರಾದಲ್ಲಿ ಲೋಕೇಷನ್ ಸಮೇತ ಚಿತ್ರ ಸೆರೆ ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗೆ ಕಳಿಸಲಾಗುತ್ತದೆ. ಕೂಡಲೇ ಅವರು ಕಾರ್ಯಪ್ರವೃತ್ತರಾಗಿ ಆನೆಗಳನ್ನು ಮರಳಿಗೆ ಕಾಡಿಗಟ್ಟುತ್ತಾರೆ’ ಎಂದು ನಾಗರಹೊಳೆಯ ಡ್ರೋನ್ ಪೈಲಟ್ ಡಿಆರ್‌ಎಫ್‌ಒ ಯೋಗೇಶ್ವರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.