ರಾಮನಗರ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯು ಬಿಳಿ ಹದ್ದು ಸೇರಿದಂತೆ ಕೆಲವು ಅಪರೂಪದ ಪಕ್ಷಿಗಳ ಜೀವಕ್ಕೆ ಕಂಟಕವಾಗುತ್ತಿದೆ.
ಪ್ರತಿ ತಿಂಗಳು 15–20 ಪಕ್ಷಿಗಳು, ಹದ್ದುಗಳು ಹೆದ್ದಾರಿಯಲ್ಲಿ ವಾಹನಗಳ ಚಕ್ರಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿವೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಕೆಲವೇ ವರ್ಷಗಳಲ್ಲಿ ಈ ಪ್ರದೇಶದಲ್ಲಿರುವ ಕೆಲವು ಅಪರೂಪದ ಹದ್ದುಗಳ ಸಂತತಿ ವಿನಾಶದ ಅಂಚಿಗೆ ತಲುಪಲಿದೆ ಎನ್ನುತ್ತಾರೆ ಪಶು, ಪಕ್ಷಿಗಳ ಸಂರಕ್ಷಕಿ ಬೆಂಗಳೂರಿನ ಗೌರಿ ಶಿವಯೋಗಿ.
ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಹದ್ದು ಮತ್ತು ಇತರ ಪಕ್ಷಿಗಳ ಸಾವಿನ ಬಗ್ಗೆ ಅಧ್ಯಯನದಲ್ಲಿ ತೊಡಗಿರುವ ಗೌರಿ ಅವರು ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್.
ಹೆದ್ದಾರಿಯಲ್ಲಿ ಸತ್ತು ಬಿದ್ದ ನಾಯಿ, ಬೆಕ್ಕುಗಳ ಕಳೇಬರ ಮತ್ತು ಅಕ್ಕಪಕ್ಕದ ಜಮೀನುಗಳಲ್ಲಿ ಆಹಾರ ಹುಡುಕಿಕೊಂಡು ಬರುವ ಹದ್ದುಗಳು ತಮ್ಮ ಭಾರವಾದ ದೇಹದಿಂದ ಏಕಾಏಕಿ ಮೇಲಕ್ಕೆ ಹಾರಲಾಗದೆ ವೇಗವಾಗಿ ಚಲಿಸುವ ವಾಹನಗಳ ಚಕ್ರಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿವೆ ಎನ್ನುವುದು ಅವರ ವಾದ.
‘ಒಮ್ಮೆ ಹೆದ್ದಾರಿಯಲ್ಲಿ ಬಿದ್ದಿದ ನಾಯಿ ಕಳೇಬರವನ್ನು ಹದ್ದು ತಿನ್ನುತ್ತಿತ್ತು. ಅದೇ ಮಾರ್ಗದಲ್ಲಿ ಬಂದ ಕಾರು ಡಿಕ್ಕಿ ಹೊಡೆದು ಹದ್ದು ಕೂಡ ಸತ್ತು ಬಿತ್ತು. ರಸ್ತೆ ಬದಿ ಕಾರು ನಿಲ್ಲಿಸಿ ಹದ್ದಿನ ಕಳೇಬರವನ್ನು ಗುಂಡಿ ತೋಡಿ ಹೂತು ಹಾಕಿದೆ. ಅಂದಿನಿಂದ ಹೆದ್ದಾರಿಯಲ್ಲಿ ಈ ರೀತಿ ಸಾಯುತ್ತಿರುವ ಹದ್ದು ಹಾಗೂ ಇತರ ಪಕ್ಷಿಗಳ ಕುರಿತು ಅಧ್ಯಯನ ಶುರು ಮಾಡಿದೆ’ ಎಂದು ಗೌರಿ ‘ಪ್ರಜಾವಾಣಿ’ಗೆ ತಿಳಿಸಿದರು.
‘2023ರ ಡಿಸೆಂಬರ್‌ನಿಂದ ಇಲ್ಲಿಯವರೆಗೆ ಹೆದ್ದಾರಿಯಲ್ಲಿ ಬಲಿಯಾಗುತ್ತಿರುವ ಹದ್ದು ಮತ್ತು ಇತರ ಪಕ್ಷಿಗಳ ಕುರಿತು ಮಾಹಿತಿ ಸಂಗ್ರಹಿಸಲು ಆರಂಭಿಸಿದೆ. ಅದಕ್ಕಾಗಿ, ತಿಂಗಳಿಗೆ ಎರಡರಿಂದ ಮೂರು ಸಲ ವಾರಾಂತ್ಯದಲ್ಲಿ ಈ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದೇನೆ. ಇದುವರೆಗೆ 40ಕ್ಕೂ ಹೆಚ್ಚು ಹದ್ದು (ಕಪ್ಪು ಮತ್ತು ಬಿಳಿಹದ್ದು) ಸೇರಿದಂತೆ ಕಾಗೆ, ಗೂಬೆ, ಕೋಗಿಲೆ ಹಾಗೂ ಇತರ ಪಕ್ಷಿಗಳ ಕಳೇಬರಗಳನ್ನು ಹೂತಿದ್ದೇನೆ. ಕೆಲವೊಮ್ಮೆ ಹಲವು ವಾಹನ ಓಡಾಡಿ ಪಕ್ಷಿಗಳ ಕಳೇಬರ ರಸ್ತೆಗೆ ಅಂಟಿಕೊಂಡು ಅಪ್ಪಚ್ಚಿಯಾಗಿರುತ್ತವೆ’ ಎಂದು ಹೇಳಿದರು.
ಹಾಟ್‌ಸ್ಪಾಟ್‌ಗಳು:
ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಪಕ್ಷಿಗಳಿಗೆ ಪ್ರಾಣಕ್ಕೆ ಸಂಚಕಾರ ತಂದೊಡ್ಡುವ ಹಲವು ಅಪಾಯಕಾರಿ ಅಪಘಾತ ಸ್ಥಳಗಳನ್ನು(ಹಾಟ್‌ಸ್ಪಾಟ್) ಅವರು ಗುರುತಿಸಿದ್ದಾರೆ.
ಬಿಡದಿ, ಚನ್ನಪಟ್ಟಣ (ಮಸೀದಿ ಸಮೀಪ), ಮದ್ದೂರು ಮೇಲ್ಸೇತುವೆ (ಮದ್ದೂರು ಟಿಫಾನೀಸ್ ಬಳಿ) ಹಾಗೂ ಮಂಡ್ಯ (ತಿರುವು ಹಾಗೂ ಮೇಲ್ಸೇತುವೆ) ಹೆದ್ದಾರಿಯ ಪ್ರಮುಖ ಅಪಾಯಕಾರಿ ಹಾಟ್‌ಸ್ಪಾಟ್‌ಗಳು. ಅಪರೂಪದ ಬಿಳಿ ಹದ್ದುಗಳು ಹೆಚ್ಚಾಗಿರುವ ಜಾಗಗಳು ಇವು.
‘ಹೆದ್ದಾರಿಯಲ್ಲಿ ಹದ್ದು, ಬಿಳಿ ಹದ್ದು ಸೇರಿದಂತೆ ಕೆಲ ಪಕ್ಷಿಗಳು ಬಲಿಯಾಗುತ್ತಿರುವುದನ್ನು ತಡೆಯಲು ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಇ–ಮೇಲ್ ಕೂಡ ಮಾಡಿರುವೆ. ಕೆಲ ಸಚಿವರ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ. ಅವರಿಗೆ ಪಕ್ಷಿಗಳ ಸಾವಿನ ಗಂಭೀರತೆ ಅರ್ಥವಾಗುತ್ತಿಲ್ಲ’ ಎಂದು ಗೌರಿ ಬೇಸರ ವ್ಯಕ್ತಪಡಿಸಿದರು.
ಪರಿಹಾರ ಏನು?
* ಹೆದ್ದಾರಿಯಲ್ಲಿ ಅಪಘಾತದ ಹಾಟ್‌ಸ್ಪಾಟ್ ಗುರುತಿಸಿ, ವಾಹನಗಳು ನಿಧಾನವಾಗಿ ಚಲಿಸುವಂತೆ ಸೂಚನಾ ಫಲಕ ಅಳವಡಿಸಬೇಕು
* ಹೆದ್ದಾರಿಯ ಎರಡೂ ಬದಿಯಲ್ಲಿ ಅಳವಡಿಸಿರುವ ತಂತಿಬೇಲಿ ದುರಸ್ತಿ ಮಾಡಬೇಕು
* ಪಕ್ಷಿಗಳ ಜೀವ ಅಮೂಲ್ಯ ಎಂದು ಸಾರುವ ಫಲಕ ಅವಳಡಿಸಬೇಕು
* ಅತಿ ವೇಗದಿಂದ ಪಕ್ಷಿಗಳ ಮೇಲೆ ಹರಿಯುವ ವಾಹನಗಳಿಗೆ ದಂಡ ವಿಧಿಸಬೇಕು
ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಬಲಿಯಾಗುತ್ತಿರುವ ಪಕ್ಷಿಗಳ ಸಾವು ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಹೆದ್ದಾರಿ ಪ್ರಾಧಿಕಾರದವರು ಸೂಚನಾ ಫಲಕ ಅಳವಡಿಸಿ ಜಾಗೃತಿ ಮೂಡಿಸಬೇಕುಗೌರಿ ಶಿವಯೋಗಿ ಪಕ್ಷಿಪ್ರಿಯೆ ಬೆಂಗಳೂರು
ತಿಂಗಳಿಗೆ 15–20 ಪಕ್ಷಿ ಸಾವು
ಪ್ರತಿ ದಿನ ಬೆಳಗ್ಗೆ 6ರಿಂದ 8ರ ಅವಧಿಯಲ್ಲಿ ಬಹುತೇಕ ಪಕ್ಷಿಗಳು ಬಲಿಯಾಗುತ್ತಿವೆ. ವಾರಾಂತ್ಯದಲ್ಲಿ ಸಾವಿನ ಸಂಖ್ಯೆ ಹೆಚ್ಚು. ತಿಂಗಳಿಗೆ ಕನಿಷ್ಠ ಏನಿಲ್ಲವೆಂದರೂ 15 ಪಕ್ಷಿಗಳು ಹೆದ್ದಾರಿಯಲ್ಲಿ ಅಪಘಾತಕ್ಕೆ ಬಲಿಯಾಗುತ್ತಿವೆ. ಇದರಲ್ಲಿ ಹದ್ದುಗಳೇ ಹೆಚ್ಚು. ಜನವರಿ ಫೆಬ್ರುವರಿ ಮಾರ್ಚ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಈ ಪ್ರಮಾಣ ಹೆಚ್ಚು. ಜನವರಿಯಿಂದ ಮಾರ್ಚ್ ಹದ್ದುಗಳ ಸಂತಾನೋತ್ಪತ್ತಿ ಅವಧಿ ಎಂಬುದು ಇಲ್ಲಿ ಗಮನಾರ್ಹ. ಹೆದ್ದಾರಿಯಲ್ಲಿ ಅತಿ ವೇಗವಾಗಿ ಸಂಚರಿಸುವ ವಾಹನಗಳಿಗೆ ಪಕ್ಷಿಗಳು ಸಿಲುಕಿ ಸತ್ತಾಗ ಬಹುತೇಕ ಸವಾರರು ವಾಹನ ನಿಲ್ಲಿಸದೆ ಹೋಗುತ್ತಾರೆ ಎನ್ನುತ್ತಾರೆ ಗೌರಿ.
ಪ್ರಾಣಕ್ಕೆ ಕಂಟಕವಾಗುತ್ತಿದೆ ಭಾರದ ದೇಹ!
ಬಿಡದಿಯಿಂದ ಶ್ರೀರಂಗಪಟ್ಟಣದವರೆಗೆ ಹೆದ್ದಾರಿಯಲ್ಲಿ ಜನ ಹಾಗೂ ಜಾನುವಾರು ದಾಟಲು ಪಾದಚಾರಿ ಮೇಲ್ಸೇತುವೆ ವ್ಯವಸ್ಥೆ ಇಲ್ಲ. ಹೆದ್ದಾರಿಗೆ ಹಾಕಿರುವ ತಂತಿಬೇಲಿ ಕತ್ತರಿಸಿ ದಾರಿ ಮಾಡಿಕೊಂಡು ಜನರು ಓಡಾಡುತ್ತಾರೆ. ಇಲ್ಲಿಯೇ ನಾಯಿ ಹಾಗೂ ಇತರ ಪ್ರಾಣಿಗಳು ರಸ್ತೆ ದಾಟುವಾಗ ವಾಹನಗಳಿಗೆ ಸಿಲುಕಿ ಸಾಯುತ್ತವೆ. ಅವುಗಳ ಕಳೇಬರ ತಿನ್ನಲು ಮುಖ್ಯವಾಗಿ ಹದ್ದು ಕಾಗೆ ಗೂಬೆ ಬರುತ್ತವೆ. ಆಗ ವೇಗವಾಗಿ ಬರುವ ವಾಹನಗಳಿಂದ ತಪ್ಪಿಸಿಕೊಳ್ಳಲಾಗದೆ ಬಲಿಯಾಗುತ್ತಿವೆ. ಹಗುರಾಗಿರುವ ಉಳಿದ ಪಕ್ಷಿಗಳು ಏಕಾಏಕಿ ಮೇಲಕ್ಕೆ ಹಾರಿ ಪ್ರಾಣ ಉಳಿಸಿಕೊಳ್ಳುತ್ತವೆ. ಭಾರವಾದ ದೇಹದ ಹದ್ದುಗಳಿಗೆ ಒಮ್ಮೆಲೆ ಹಾರಲು ಆಗುವುದಿಲ್ಲ. ಹಾಗಾಗಿ ಹದ್ದುಗಳೇ ಹೆಚ್ಚಾಗಿ ವಾಹನಗಳ ಅಡಿ ಸಿಲುಕಿ ಸಾಯುತ್ತಿವೆ. ಹೆದ್ದಾರಿಯುದ್ದಕ್ಕೂ 42 ಮೇಲ್ಸೇತುವೆಗಳಿದ್ದು ಬಹುತೇಕ ಹದ್ದುಗಳು ಮೇಲ್ಸೇತುವೆಗಳ ಆರಂಭ ಮತ್ತು ಅಂತ್ಯದಲ್ಲೇ ಸತ್ತಿರುವುದು ಗಮನಕ್ಕೆ ಬಂದಿದೆ ಎಂದು ಗೌರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.