
ಚನ್ನಪಟ್ಟಣ: ತಾಲ್ಲೂಕಿನ ಸೋಗಾಲ ಗ್ರಾಮದಲ್ಲಿ ಶನಿವಾರ ಬೆಳಗಿನ ಜಾವ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಹೊತ್ತಿಕೊಂಡು ಬೆಂಕಿಯಲ್ಲಿ ಶಾಮಿಯಾನ ಅಂಗಡಿಯಲ್ಲಿದ್ದ ಸಾಮಗ್ರಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.
ಗ್ರಾಮದ ಅರುಣ್ ಕುಮಾರ್ ಎಂಬುವರಿಗೆ ಸೇರಿದ ಶಾಮಿಯಾನ ಅಂಗಡಿಯಲ್ಲಿದ್ದ ₹20 ಲಕ್ಷ ಮೌಲ್ಯದ ಶಾಮಿಯಾನ, ಕುರ್ಚಿ, ಪಾತ್ರೆ, ಸೋಫಾ, ಟೇಬಲ್, ಕವರ್, ಬಟ್ಟೆ, ಮ್ಯಾಟು, ಫ್ಯಾನು ಮುಂತಾದವು ಭಸ್ಮವಾಗಿವೆ. ಪಕ್ಕದಲ್ಲಿದ್ದ ಕ್ಲಿನಿಕ್, ಔಷಧ ಅಂಗಡಿ ಮತ್ತು ಪಾತ್ರೆ ಅಂಗಡಿಗೂ ಬೆಂಕಿ ತಾಗಿದೆ. ಅಲ್ಲಿದ್ದ ಕೆಲವು ವಸ್ತುಗಳಿಗೂ ಹಾನಿಯಾಗಿದೆ.
ಅಂಗಡಿಯಿಂದ ದಟ್ಟ ಹೊಗೆ ಬರುವುದನ್ನು ಕಂಡ ಸ್ಥಳೀಯರು ಅಂಗಡಿ ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಸ್ಥಳೀಯರ ನೆರವಿನಿಂದ ಅಂಗಡಿ ಬಾಗಿಲು ತೆಗೆಸಿ ನೀರಿನ ಟ್ಯಾಂಕರ್ ಮೂಲಕ ಬೆಂಕಿ ನಂದಿಸಲಾಗಿದೆ. ಅಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆಗೆ ವಸ್ತುಗಳೆಲ್ಲಾ ಸುಟ್ಟು ಕರಕಲಾಗಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.