
‘ಪ್ರಜಾವಾಣಿ’–‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗವು ನಗರದ ಜಿ.ಪಂ. ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಶುಕ್ರವಾರ ಹಮ್ಮಿಕೊಂಡಿದ್ದ ‘ಪರೀಕ್ಷಾ ಮಾರ್ಗದರ್ಶಿ ಕಾರ್ಯಾಗಾರ’ವನ್ನು ಗಣ್ಯರು ಉದ್ಘಾಟಿಸಿದರು.
ರಾಮನಗರ: ‘ಪರೀಕ್ಷೆಗೆ ಯಾವ ರೀತಿ ಓದಬೇಕು? ವೇಳಾಪಟ್ಟಿ ಹೇಗಿರಬೇಕು? ಮನಸ್ಥಿತಿಯನ್ನು ಹೇಗೆ ಸಜ್ಜುಗೊಳಿಸಿಕೊಳ್ಳಬೇಕು? ಆರೋಗ್ಯ ಕಾಳಜಿ ಹೇಗಿರಬೇಕು? ಏಕಾಗ್ರತೆ ವೃದ್ಧಿ ಹಾಗೂ ಓದಿದ್ದನ್ನು ಸುಲಭವಾಗಿ ನೆನಪಿಟ್ಟುಕೊಳ್ಳುವ ತಂತ್ರಗಳ ಬಗ್ಗೆ ಒಳ್ಳೆಯ ಟಿಪ್ಸ್‌ಗಳು ಕಾರ್ಯಾಗಾರದಲ್ಲಿ ಸಿಕ್ಕವು. ಇದೀಗ ಪರೀಕ್ಷೆಯ ಆತಂಕ ಮತ್ತು ಒತ್ತಡ ದೂರವಾಗಿ ಆತ್ಮವಿಶ್ವಾಸ ಹೆಚ್ಚಿದೆ...’
‘ಪ್ರಜಾವಾಣಿ’–‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗವು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಬಿಡದಿಯ ಜ್ಞಾನ ವಿಕಾಸ್ ವಿದ್ಯಾಸಂಘ (ರಿ) ಸಹಯೋಗದಲ್ಲಿ ನಗರದ ಜಿ.ಪಂ. ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಶುಕ್ರವಾರ ಹಮ್ಮಿಕೊಂಡಿದ್ದ ‘ಪರೀಕ್ಷಾ ಮಾರ್ಗದರ್ಶಿ ಕಾರ್ಯಾಗಾರ’ದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳ ಬಹುತೇಕ ವಿದ್ಯಾರ್ಥಿಗಳ ಅನಿಸಿಕೆ ಇದು.
ಬೆಳಿಗ್ಗೆ 10.30ರಿಂದ ಮಧ್ಯಾಹ್ನ 2ರವರೆಗೆ ನಡೆದ ಕಾರ್ಯಾಗಾರದಲ್ಲಿ ಅತಿಥಿಗಳ ಅನುಭವದ ನುಡಿಗಳು, ಸಂಪನ್ಮೂಲ ವ್ಯಕ್ತಿಗಳ ಸ್ಪೂರ್ತಿದಾಯಕ ಮಾತುಗಳು ಹಾಗೂ ವಿಷಯವಾರು ಉಪನ್ಯಾಸಕರ ಉಪನ್ಯಾಸವು ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಆತಂಕ– ಒತ್ತಡ ನಿವಾರಿಸಿ, ಆತ್ಮವಿಶ್ವಾಸದ ಕಿಡಿ ಹೊತ್ತಿಸಿತು. ‘ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಸಾಧನೆ ಮಾಡಬಲ್ಲೆ’ ಎಂಬ ಸ್ಫೂರ್ತಿಯನ್ನು ತುಂಬಿತು.
ಸ್ಪೂರ್ತಿಯ ಮಾತು: ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಸ್ನೇಹ ಪಿ.ವಿ ಅವರು ಸ್ಫೂರ್ತಿಯ ಮಾತುಗಳನ್ನಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್ ಪರೀಕ್ಷಾ ಸಾಧನೆಗೆ ಸಲಹೆಗಳನ್ನು ನೀಡಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪ ನಿರ್ದೇಶಕ ಎಂ. ಮರಿಸ್ವಾಮಿ ಅವರು ಶಿಸ್ತು ಬದ್ಧ ಅಧ್ಯಯನ ಮಹತ್ವ ತಿಳಿಸಿ ಕೊಟ್ಟರು.
‘ಪ್ರಜಾವಾಣಿ’ಯು ಸುದ್ದಿ ನೀಡುವ ಕಾಯಕಕಷ್ಟೇ ಸೀಮಿತವಾಗದೆ, ವಿದ್ಯಾರ್ಥಿಗಳ ಪರೀಕ್ಷಾ ಸಾಧನೆಗೆ ಪೂರಕವಾಗುವಂತಹ ಕೆಲಸಗಳನ್ನು ಮಾಡುತ್ತಿರುವುದಕ್ಕೆ ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ‘ಪ್ರಜಾವಾಣಿ’ ಓದಿನ ನಂಟನ್ನು ಮೆಲುಕು ಹಾಕುತ್ತಾ ಸುದ್ದಿ, ಮಾಹಿತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳು ‘ಪ್ರಜಾವಾಣಿ’ ಓದಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು, ‘ಪ್ರಜಾವಾಣಿಯು ವಿದ್ಯಾರ್ಥಿಗಳ ಪರೀಕ್ಷಾ ಸಾಧನೆಗಾಗಿ ಪರೀಕ್ಷಾ ದಿಕ್ಸೂಚಿ ಅಂಕಣವನ್ನು ವಾರದಲ್ಲಿ ನಾಲ್ಕು ದಿನ ಪ್ರಕಟಿಸುತ್ತಿದೆ. ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಿ ಶಿಕ್ಷಣಕ್ಕೆ ಪ್ರೋತ್ಸಾಹಿಸುತ್ತಿದೆ. ಮುಂದುವರಿದ ಭಾಗವಾಗಿ ಪರೀಕ್ಷಾ ಮಾರ್ಗದರ್ಶಿ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ. ಇಲ್ಲಿರುವ ವಿದ್ಯಾರ್ಥಿಗಳ ಭಾವಚಿತ್ರ ನಮ್ಮ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗುವ ಮಟ್ಟದ ಸಾಧನೆಯನ್ನು ನೀವೆಲ್ಲರೂ ಮಾಡಬೇಕು’ ಎಂದು ಶುಭ ಹಾರೈಸಿದರು.
ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಕೊತ್ತಿಪುರ ಜಿ. ಶಿವಣ್ಣ, ರಾಮನಗರ ತಾಲ್ಲೂಕಿನ ಸುಗ್ಗನಹಳ್ಳಿಯ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಎನ್. ಪ್ರದೀಪ್ ಹಾಗೂ ‘ಪ್ರಜಾವಾಣಿ’–‘ಡೆಕ್ಕನ್ ಹೆರಾಲ್ಡ್’ ಬಳಗದ ಪ್ರಸರಣ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಜಗನ್ನಾಥ ಜೋಯಿಸ್, ಹಿರಿಯ ವ್ಯವಸ್ಥಾಪಕ ಶಂಕರ ಹಿರೇಮಠ ಇದ್ದರು. ರಾಮನಗರದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಿವಸ್ವಾಮಿ ಅವರು ನಿರೂಪಣೆ ಮಾಡಿದರು.
ಪ್ರಜಾವಾಣಿ ‘ದಿನಪತ್ರಿಕೆ ಓದುವಿಕೆ
ಸಾಧನೆಗೆ ಜೊತೆಯಾದ ಪ್ರಜಾವಾಣಿ ‘ದಿನಪತ್ರಿಕೆ ಓದುವಿಕೆ ನಮ್ಮ ಜ್ಞಾನವನ್ನು ವಿಸ್ತರಿಸುತ್ತದೆ. ನಾನಿಂದು ನಿಮ್ಮ ಮುಂದೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಂತಿರುವುದಕ್ಕೆ ಪ್ರಜಾವಾಣಿ ಕೊಡುಗೆಯೂ ಇದೆ. ಪ್ರೌಢಶಾಲಾ ಶಿಕ್ಷಕಿಯಾಗಲು ಉಪನ್ಯಾಸಕಿಯಾಗಲು ಹಾಗೂ ಪೊಲೀಸ್ ಹುದ್ದೆಗೇರಲು ನಾನು ಎದುರಿಸಿದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವಾಗ ತಪ್ಪದೆ ಪ್ರಜಾವಾಣಿ ಓದುತ್ತಿದ್ದೆ. ಶಾಲಾ ದಿನಗಳಿಂದಲೇ ನನ್ನ ತಂದೆ ಪ್ರಜಾವಾಣಿ ಓದಿಸುತ್ತಿದ್ದರು. ಜ್ಞಾನ ವೃದ್ಧಿಗಾಗಿ ವಿದ್ಯಾರ್ಥಿಗಳು ಈಗಿನಿಂದಲೇ ದಿನಪತ್ರಿಕೆ ಓದಬೇಕು. ಪಿಯುಸಿ ಪರೀಕ್ಷೆ ಫಲಿತಾಂಶವು ನಿಮ್ಮ ಭವಿಷ್ಯಕ್ಕೆ ಮೆಟ್ಟಿಲಾಗುತ್ತದೆ. ಹಾಗಾಗಿ ಮೈ ಮರೆಯದೆ ತಯಾರಿ ನಡೆಸಿ ಪರೀಕ್ಷೆ ಎದುರಿಸಬೇಕು. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮುಂದೇನಾಗಬೇಕೆಂಬುದನ್ನು ನಿರ್ಧರಿಸಿಕೊಂಡು ಪರಿಶ್ರಮ ಹಾಕಿ. ಯಾವುದೇ ಕೆಲಸಕ್ಕೆ ಹೋದರೂ ಅದರಲ್ಲಿ ತೃಪ್ತಿ ಇರಬೇಕು. ಅದುವೇ ಬದುಕಿನ ಸಾರ್ಥಕತೆ. ಭಯವಿಲ್ಲದೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ’ ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಪಿ.ವಿ. ಸ್ನೇಹ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸ್ಪರ್ಧಾತ್ಮಕ ಪರೀಕ್ಷೆಯತ್ತ ಗಮನವಿರಲಿ ‘ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳತ್ತಲೂ ಗಮನ ಹರಿಸಬೇಕು. ಪಿಯುಸಿ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳ ಜಗತ್ತಿಗೆ ತೆರೆದುಕೊಳ್ಳುತ್ತಾರೆ. ಈಗಿನಿಂದಲೇ ನಿತ್ಯ ದಿನಪತ್ರಿಕೆ ಮತ್ತು ಸ್ಪರ್ಧಾತ್ಮಕ ನಿಯತಕಾಲಿಕೆಗಳನ್ನು ಓದುವ ಮೂಲಕ ತಯಾರಿ ಆರಂಭಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ನಿತ್ಯ ಕನಿಷ್ಠ 8 ತಾಸು ಓದಬೇಕು. ಬೆಳಿಗ್ಗೆ 5 ಗಂಟೆ ಏಳುವ ಅಭ್ಯಾಸದ ಜೊತೆಗೆ ವ್ಯಾಯಾಮ ಮಾಡಬೇಕು. ಪಠ್ಯದ ಜೊತೆಗೆ ಪಠ್ಯೇತರ ವಿಷಯಗಳಿಗೆ ಆದ್ಯತೆ ನೀಡಬೇಕು. ಕಷ್ಟವೆನಿಸುವ ವಿಷಯಗಳಿಗೆ ಹೆಚ್ಚಿನ ಸಮಯ ಕೊಟ್ಟು ತಯಾರಿ ನಡೆಸಬೇಕು. ಆಗ ಪರೀಕ್ಷೆಯಲ್ಲಿ ಸಾಧನೆ ಮಾಡುವುದು ದೊಡ್ಡ ವಿಷಯವೇನಲ್ಲ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.
- ಆತಂಕ ಬಿಡಿ; ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ ‘
ಪರೀಕ್ಷೆ ಬಂತೆಂದರೆ ಬಹುತೇಕ ವಿದ್ಯಾರ್ಥಿಗಳು ಆತಂಕದ ಜೊತೆಗೆ ಒತ್ತಡ ಅನುಭವಿಸುತ್ತಾರೆ. ಕ್ರಮಬದ್ಧವಲ್ಲದ ಪರೀಕ್ಷಾ ತಯಾರಿಯೂ ಇದಕ್ಕೆ ಕಾರಣ. ವಿದ್ಯಾರ್ಥಿಗಳು ಕ್ರಮಬದ್ಧ ಓದು ಮತ್ತು ಸಮಯ ನಿರ್ವಹಣೆಗೆ ಒತ್ತು ನೀಡಬೇಕು. ಆಗ ಆತಂಕ ದೂರವಾಗಿ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ.
ವಿದ್ಯಾರ್ಥಿಗಳಲ್ಲಿ ಮೊಬೈಲ್ ಸೇರಿದಂತೆ ವಿವಿಧ ಕಾರಣಳಿಗಾಗಿ ಏಕಾಗ್ರತೆ ಕೊರತೆ ಇದೆ. ಅದಕ್ಕಾಗಿ ಓದು ಶುರುವಿಗೆ ಮುಂಚೆ ಒಂದೆರಡು ನಿಮಿಷ ಧ್ಯಾನ ಮಾಡಿದರೆ ಏಕಾಗ್ರತೆ ವೃದ್ಧಿಸುತ್ತದೆ. ಕಷ್ಟವೆನಿಸುವ ವಿಷಯಗಳಿಗೆ ಹೆಚ್ಚು ಒತ್ತು ನೀಡಿ ಪುನರಾವರ್ತನೆ ಮಾಡಬೇಕು. ಮುಖ್ಯಾಂಶಗಳನ್ನು ಬರೆದಿಟ್ಟುಕೊಂಡು ಸಮಯ ಸಿಕ್ಕಾಗಲೆಲ್ಲಾ ಕಣ್ಣಾಡಿಸಬೇಕು. ಪರೀಕ್ಷೆ ಮುಗಿಯುವವರೆಗೆ ಮೊಬೈಲ್ ಮತ್ತು ಟಿ.ವಿ.ಯಿಂದ ಆದಷ್ಟು ಅಂತರ ಕಾಯ್ದುಕೊಳ್ಳಬೇಕು’ ಎಂದು ಕಲಿಕಾ ಕೌಶಲ್ಯದ ಕುರಿತು ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರದ ಸಹ ಪ್ರಾಧ್ಯಾಪಕ ಹಾಗೂ ವೃತ್ತಿ ಮಾರ್ಗದರ್ಶಕ ಡಾ. ಮೋಹನ್ ದಾಸ್ ತಿಳಿ ಹೇಳಿದರು.
ಆರೋಗ್ಯಕರ ಅಭ್ಯಾಸದಿಂದ ಒತ್ತಡ ನಿವಾರಣೆ ‘ವಿದ್ಯಾರ್ಥಿಗಳು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಂಡಾಗ ಪರೀಕ್ಷಾ ಆತಂಕ ಭಯ ಹಾಗೂ ಒತ್ತಡ ತಾನಾಗೇ ದೂರವಾಗುತ್ತದೆ. ಓದು ನಿದ್ರೆ ಆಹಾರ ವಿಶ್ರಾಂತಿ ಟಿ.ವಿ–ಮೊಬೈಲ್ ವೀಕ್ಷಣೆ ಕ್ರೀಡೆ ಸೇರಿದಂತೆ ನಮ್ಮ ದೈನಂದಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅನುಕೂಲಕರ ವೇಳಾಪಟ್ಟಿ ಅನುರಿಸಬೇಕು. ಇದರಿಂದ ಒತ್ತಡ ತಗ್ಗಿ ಆತ್ಮವಿಶ್ವಾಸ ವೃದ್ಧಿಸುತ್ತದೆ. ಪರೀಕ್ಷೆ ಬಂದರೆ ಸಹಜವಾದ ಒತ್ತಡವಿರುತ್ತದೆ. ಆದರೆ ಅದು ನಮ್ಮನ್ನು ಕುಗ್ಗಿಸುಷ್ಟು ಬೆಳೆಯಲು ಬಿಡಬಾರದು. ನಕಾರಾತ್ಮಕ ಆಲೋಚನೆಗಳಿಂದ ದೂರವಿರಬೇಕು. ಬೇರೆಯವರಿಗೆ ಹೋಲಿಸಿಕೊಂಡು ತಮ್ಮ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳಬಾರದು’ ಎಂದು ‘ಪರೀಕ್ಷೆ ಎದುರಿಸಲು ಮಾನಸಿಕ ಸಿದ್ಧತೆ’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಪದ್ಮರೇಖಾ ಎಸ್. ಅವರು ಸಲಹೆ ನೀಡಿದರು.
ಸಮಯ ಪಾಲನೆ ಶ್ರಮದಿಂದ ಯಶಸ್ಸು
‘ಹುಟ್ಟಿನಿಂದಲೇ ಯಾರೂ ಜಾಣರಲ್ಲ ದಡ್ಡರೂ ಅಲ್ಲ. ಎಲ್ಲವೂ ನಮ್ಮ ಪರಿಶ್ರಮವನ್ನು ಅವಲಂಬಿಸಿರುತ್ತದೆ. ವಿದ್ಯಾರ್ಥಿಗಳು ಸಮಯ ಪಾಲನೆಯೊಂದಿಗೆ ನಿರಂತರ ಶ್ರಮ ಹಾಕಿದರೆ ಪರೀಕ್ಷೆಯಲ್ಲಿ ನಮ್ಮ ಜಿಲ್ಲೆಯ ಫಲಿತಾಂಶವು ಅಗ್ರ 10 ಜಿಲ್ಲೆಗಳ ಸಾಲಿನಲ್ಲಿ ನಿಲ್ಲುತ್ತದೆ.
ಅದಕ್ಕಾಗಿ ಈಗಿನಿಂದಲೇ ಮನಸ್ಸು ಮಾಡಿ ಓದಬೇಕು. ಪರೀಕ್ಷಾ ಸಾಧನೆ ಮಾಡಿದ ನಿಮ್ಮ ಭಾವಚಿತ್ರವು ಪ್ರಜಾವಾಣಿ ಪತ್ರಿಕೆಯಲ್ಲಿ ಬರುವಂತಾಗಬೇಕು. ಆಗ ಈ ಕಾರ್ಯಾಗಾರ ಸಾರ್ಥಕವಾಗುತ್ತದೆ’ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕ ಎಂ. ಮರಿಸ್ವಾಮಿ ಶುಭ ಹಾರೈಸಿದರು. ಬದುಕಿಗೆ ದಿಕ್ಸೂಚಿಯಾಗುವ ಪರೀಕ್ಷೆ ದ್ವಿತೀಯ ಪಿಯುಸಿ ಪರೀಕ್ಷೆಯು ವಿದ್ಯಾರ್ಥಿಗಳ ಮುಂದಿನ ಬದುಕಿಗೆ ದಿಕ್ಸೂಚಿಯಾಗುತ್ತದೆ.
ಎಷ್ಟು ಅಂಕ ಪಡೆಯುತ್ತೀರಿ ಎಂಬುದರ ಆಧಾರದ ಮೇಲೆ ನಿಮ್ಮ ಬದುಕು ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದು ನಿರ್ಧಾರವಾಗಲಿದೆ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಪರೀಕ್ಷೆಗೆ ತಯಾರಿ ನಡೆಸಿ ಚನ್ನಾಗಿ ಬರೆಯಬೇಕು. ನಮ್ಮ ಕಲಿಕಾಮಟ್ಟ ಹಾಗೂ ವಿದ್ವತ್ತು ಪ್ರಸ್ತುತಪಡಿಸುವ ಸಾಮರ್ಥ್ಯವನ್ನು ಅಳೆಯುವ ಈ ಪರೀಕ್ಷೆಯಲ್ಲಿ ಎಲ್ಲರೂ ಉತ್ತಮ ಸಾಧನೆ ಮಾಡಬೇಕು ಎಂದು ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಕೊತ್ತಿಪುರ ಜಿ. ಶಿವಣ್ಣ ಸಲಹೆ ನೀಡಿದರು.
- ವಿಭಾಗವಾರು ಉಪನ್ಯಾಸ
ಕಲಾ ವಿಭಾಗದ ಕುರಿತು ಕನಕಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ದೊಡ್ಡಬೋರಯ್ಯ ವಿಜ್ಞಾನ ವಿಭಾಗದ ಕುರಿತು ಚನ್ನಪಟ್ಟಣ ತಾಲ್ಲೂಕಿನ ಮೈಲನಾಯ್ಕನಹಳ್ಳಿಯ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಬಿ. ಮಹೇಶ್ ವಾಣಿಜ್ಯ ವಿಭಾಗದ ಕುರಿತು ರಾಮನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅನ್ಸರ್ ಉಲ್‌ಹಕ್ ಹಾಗೂ ಇಂಗ್ಲಿಷ್ ವಿಷಯ ಕುರಿತು ಹಾರೋಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಅಶ್ವಿನಿ ಅವರು ಉಪನ್ಯಾಸ ನೀಡಿ ಸುಲಭವಾಗಿ ಅಂಕ ಗಳಿಸುವ ಟಿಪ್ಸ್‌ಗಳನ್ನು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.