
ಸಾವು
(ಪ್ರಾತಿನಿಧಿಕ ಚಿತ್ರ)
ಹಾರೋಹಳ್ಳಿ: ಕೌಟುಂಬಿಕ ಕಲಹಕ್ಕೆ ಬೇಸತ್ತು ವ್ಯಕ್ತಿಯೊಬ್ಬರು ತನ್ನಿಬ್ಬರು ಮಕ್ಕಳಿಗೆ ಗುರುವಾರ ಸಂಜೆ ವಿಷ ಕುಡಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಲೂಕಿನ ಚಿಕ್ಕ ಸಾದೇನಹಳ್ಳಿ ನಿವಾಸಿ ಅಶ್ವಥ್ (38) ಆತ್ಮಹತ್ಯೆ ಮಾಡಿಕೊಂಡವರು. ಇಬ್ಬರು ಮಕ್ಕಳ ಪೈಕಿ ಒಬ್ಬರು ಚೇತರಿಸಿಕೊಂಡಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.
ಅಶ್ವಥ್ ಮತ್ತು ಪತ್ನಿ ನಡುವೆ ಎರಡ್ಮೂರು ದಿನದ ಹಿಂದೆ ಜಗಳವಾಗಿತ್ತು. ಆಗ ಪತಿ ಮನೆ ಬಿಟ್ಟು ಹೋಗಿದ್ದರು. ಇದರಿಂದ ಬೇಸತ್ತ ಅಶ್ವಥ್ ಅವರು ಇಬ್ಬರೂ ಮಕ್ಕಳಿಗೆ ವಿಷ ಕುಡಿಸಿದ್ದಾರೆ. ಬಳಿಕ, ತಾವೂ ಮದ್ಯದೊಂದಿಗೆ ವಿಷ ಸೇವಿಸಿದ್ದಾರೆ. ಪ್ರಜ್ಞಾಹೀನರಾಗಿ ಮನೆಯಲ್ಲಿ ಬಿದ್ದಿದ್ದ ಮೂವರನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಸಮೀಪದ ಆಸ್ಪತ್ರೆಗೆ ಸೇರಿಸಿದ್ದಾರೆ.
ಆದರೆ, ಅಷ್ಟೊತ್ತಿಗಾಗಲೇ ಅಶ್ವಥ್ ಅವರು ಕೊನೆಯುಸಿರೆಳೆದಿದ್ದರು. ಮಕ್ಕಳಿಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಶ್ವಥ್ ಅವರ ಶವವನ್ನು ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಾರೋಹಳ್ಳಿ ಪೊಲೀಸರು ತಿಳಿಸಿದರು.