ADVERTISEMENT

ಬಸ್‌ ಟಾಪ್‌ ಮೇಲೆ ಪ್ರಯಾಣಿಸಲು ಅವಕಾಶ: ಚಾಲಕನ ವಿರುದ್ಧ ಕೇಸು, ದಂಡ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2019, 12:51 IST
Last Updated 28 ಸೆಪ್ಟೆಂಬರ್ 2019, 12:51 IST
ಮಾಗಡಿ ಖಾಸಗಿ ಬಸ್‌ ಮೇಲೆ ಕುಳಿತು ಪ್ರಯಾಣಿಸುತ್ತಿದ್ದ ಬಸ್‌ ಚಾಲಕನಿಗೆ ದಂಡದ ಬಳಿಕ ಪ್ರಯಾಣಿಕರು ಪೇಚಿಗೆ ಸಿಲುಕಿದರು
ಮಾಗಡಿ ಖಾಸಗಿ ಬಸ್‌ ಮೇಲೆ ಕುಳಿತು ಪ್ರಯಾಣಿಸುತ್ತಿದ್ದ ಬಸ್‌ ಚಾಲಕನಿಗೆ ದಂಡದ ಬಳಿಕ ಪ್ರಯಾಣಿಕರು ಪೇಚಿಗೆ ಸಿಲುಕಿದರು   

ಮಾಗಡಿ: ಅತಿಹೆಚ್ಚು ಪ್ರಯಾಣಿಕರನ್ನು ಟಾಪ್‌ ಮೇಲೆ ಕೂಡಿಸಿಕೊಂಡು ಚಲಿಸುತ್ತಿದ್ದ ಖಾಸಗಿ ಬಸ್‌ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು, ಪ್ರಕರಣ ದಾಖಲಿಸಿ, ದಂಡ ವಿಧಿಸಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ಬೆಂಗಳೂರಿನಿಂದ ಮಾಗಡಿ ಮಾರ್ಗವಾಗಿ ಹುಲಿಯೂರು ದುರ್ಗಕ್ಕೆ ಹೋಗುತ್ತಿದ್ದ ಭವಾನಿ ಬಸ್‌, ಒಳಗೆ ಮತ್ತು ಟಾಪ್‌ನಲ್ಲಿ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಂಡು ಚಲಿಸುತ್ತಿತ್ತು. ಗಮನಿಸಿದ ಸಬ್‌ ಇನ್‌ಸ್ಪೆಕ್ಟರ್‌ ಟಿ.ವೆಂಕಟೇಶ್‌ ಮತ್ತು ಸಿಬ್ಬಂದಿ ಬಸ್‌ ನಿಲ್ದಾಣಕ್ಕೆ ಬಂದ ಕೂಡಲೇ ಚಾಲಕನನ್ನು ವಶಕ್ಕೆ ಪಡೆದರು. ಪ್ರಕರಣ ದಾಖಲಿಸಿ, ₹3 ಸಾವಿರ ದಂಡ ವಿಧಿಸಿದರು.

ಬಸ್‌ನಲ್ಲಿದ್ದ ಪ್ರಯಾಣಿಕರೆಲ್ಲರೂ ಕೆಳಗೆ ಇಳಿದು ಬೇರೆ ವಾಹನದ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು. ಮಹಿಳೆಯರು ಮತ್ತು ಮಕ್ಕಳು ಪರದಾಡಿದರು. ಕೆಲವು ಪ್ರಯಾಣಿಕರು ಹಣ ಹಿಂತಿರುಗಿಸುವಂತೆ ಕಂಡಕ್ಟರ್‌ ಗೆ ಒತ್ತಾಯಿಸಿದರು. ಅದೇ ಮಾರ್ಗವಾಗಿ ಚಲಿಸುವ ಮತ್ತೊಂದು ಖಾಸಗಿ ಬಸ್‌ಗೆ ಕೆಲವು ಪ್ರಯಾಣಿಕರನ್ನು ಹತ್ತಿಸಿ ಕಳುಹಿಸಿದರು. ಹಬ್ಬಗಳ ದಿನಗಳಲ್ಲಿ ಪ್ರಯಾಣಿಕರಿಗೆ ಇನ್ನಿಲ್ಲದ ತೊಂದರೆಯಾಗುತ್ತಿದೆ ಎಂದು ವರಮಹಾಲಕ್ಷ್ಮಿ ತಿಳಿಸಿದರು.

ADVERTISEMENT

ಕಹಿನೆನಪು: 10 ವರ್ಷಗಳ ಹಿಂದೆ ಮಹಾಲಯ ಅಮಾವಾಸ್ಯೆಯ ದಿನ ಇದೇ ಮಾರ್ಗವಾಗಿ ಅತಿಹೆಚ್ಚು ಪ್ರಯಾಣಿಕರನ್ನು ತುಂಬಿಕೊಂಡು ವೇಗವಾಗಿ ಚಲಿಸುತ್ತಿದ್ದ ಖಾಸಗಿ ಬಸ್ಸೊಂದು ಜಮಾಲ್‌ ಪಾಳ್ಯ ಬಳಿ ಉರುಳಿಬಿದ್ದು 4 ಜನರು ಸ್ಥಳದಲ್ಲಿ ಮೃತಪಟ್ಟಿದ್ದರು. ಹಲವಾರು ಪ್ರಯಾಣಿಕರು ಗಾಯಗೊಂಡಿದ್ದರು ಎಂದು ಹುಲಿಕಟ್ಟೆ ಗೋವಿಂದರಾಜು ನೆನಪಿಸಿಕೊಂಡರು.

ಹುಲಿಯೂರು ಮಾರ್ಗವಾಗಿ ಸರ್ಕಾರಿ ಬಸ್‌ಗಳ ಸಂಚಾರ ಕಡಿಮೆ ಇದೆ. ಪ್ರಯಾಣಿಕರು ಖಾಸಗಿ ಬಸ್‌ಗಳಲ್ಲೇ ಪ್ರಯಾಣಿಸಬೇಕಿದೆ. ಮಾಗಡಿಯಲ್ಲಿ ಸರ್ಕಾರಿ ಬಸ್‌ ಡಿಪೊ ಆರಂಭವಾದರೂ ಸಕಾಲಕ್ಕೆ ಸರ್ಕಾರಿ ಬಸ್‌ಗಳು ಸಂಚರಿಸದಿರುವುದೇ ಎಲ್ಲಾ ಸಮಸ್ಯೆಗಳಿಗೆ ಮೂಲವಾಗಿದೆ ಎಂದು ಕೃಷ್ಣಪ್ಪ, ಬೆಸ್ತರ ಪಾಳ್ಯದ ಹೊನ್ನಪ್ಪ ತಿಳಿಸಿದರು.

‘ಖಾಸಗಿ ಬಸ್‌ಗಳೇ ನಮಗೆ ನರನಾಡಿಗಳಿದ್ದಂತೆ’ ಎಂದು ಹನುಮಂತೇಗೌಡ ಕತ್ತರಿಘಟ್ಟ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.