ADVERTISEMENT

ನಿತ್ಯ 5 ಸಾವಿರ ಮಂದಿಗೆ ಆಹಾರ ಪೂರೈಕೆ

ಜೆಡಿಎಸ್‌ನಿಂದ ರಾಮನಗರದಲ್ಲಿ ಜನತಾ ದಾಸೋಹ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 8:59 IST
Last Updated 9 ಏಪ್ರಿಲ್ 2020, 8:59 IST
ರಾಮನಗರದಲ್ಲಿ ಬುಧವಾರ ಜನತಾ ದಾಸೋಹಕ್ಕಾಗಿ ಆಹಾರದ ಪ್ಯಾಕಿಂಗ್‌ ನಡೆದಿತ್ತು
ರಾಮನಗರದಲ್ಲಿ ಬುಧವಾರ ಜನತಾ ದಾಸೋಹಕ್ಕಾಗಿ ಆಹಾರದ ಪ್ಯಾಕಿಂಗ್‌ ನಡೆದಿತ್ತು   

ರಾಮನಗರ: ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ನಿರ್ಗತಿಕರು ಹಾಗೂ ನಿರಾಶ್ರಿತರ ಅನುಕೂಲಕ್ಕಾಗಿ ಶಾಸಕ ಎಚ್‌.ಡಿ. ಕುಮಾರಸ್ವಾಮಿ ‘ಜನತಾ ದಾಸೋಹ’ ಕಾರ್ಯಕ್ರಮ ಆರಂಭಿಸಿದ್ದು, ಜಿಲ್ಲೆಯಲ್ಲಿ ನಿತ್ಯ ಸುಮಾರು ಐದು ಸಾವಿರ ಮಂದಿಗೆ ಆಹಾರ ಪೂರೈಕೆ ಮಾಡಲಾಗುತ್ತಿದೆ.

ರಾಮನಗರ ವಿಧಾನಸಭಾ ಕ್ಷೇತ್ರದಾದ್ಯಂತ ಅಗತ್ಯ ಇರುವವರಿಗೆ ಬೆಳಗ್ಗಿನ ಉಪಾಹಾರ ಹಾಗೂ ಮಧ್ಯಾಹ್ನ, ರಾತ್ರಿಯ ಊಟವನ್ನು ಉಚಿತವಾಗಿ ನೀಡಲಾಗುತ್ತಿದೆ. ಇದೇ ತಿಂಗಳ ಆರಂಭದಿಂದಲೇ ಈ ಕಾರ್ಯಕ್ರಮ ಜಾರಿಯಲ್ಲಿದ್ದು, ಲಾಕ್‌ಡೌನ್ ಮುಗಿಯುವ ತನಕ ಈ ಯೋಜನೆ ಮುಂದುವರಿಯಲಿದೆ. ರಾಮನಗರದ ನಗರ ಪ್ರದೇಶ, ಕೈಲಾಂಚ, ಕಸಬಾ ಹೋಬಳಿ ಹಾಗೂ ಕನಕಪುರ ತಾಲ್ಲೂಕಿನ ಮರಳವಾಡಿ ಹೋಬಳಿಯಲ್ಲಿ ಊಟ ವಿತರಣೆ ನಡೆಸಿದೆ. ಬೆಳಿಗ್ಗೆ ಹಾಗೂ ಮಧ್ಯಾಹ್ನ 2,500 ಮಂದಿಗೆ ಊಟೋಪಚಾರ, ರಾತ್ರಿ ಊಟಕ್ಕೆ 2 ಸಾವಿರ ಮಂದಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

‘ಕುಮಾರಸ್ವಾಮಿ ಅವರ ಆಶಯದಂತೆ ಇದೇ ತಿಂಗಳ ೧ರಿಂದಲೇ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಲಾಕ್‌ಡೌನ್ ಪರಿಸ್ಥಿತಿ ಮುಗಿಯುವವರೆಗೂ ಈ ದಾಸೋಹ ನಿರಂತರವಾಗಿರಲಿದೆ’ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್‌ ತಿಳಿಸಿದರು.

ADVERTISEMENT

ಮಾಸ್ಕ್ ವಿತರಣೆಗೆ ಚಾಲನೆ: ಜಿಲ್ಲೆಯ ರಾಮನಗರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಮಾರಸ್ವಾಮಿ ಅವರಿಂದ ಜನರಿಗೆ 1 ಲಕ್ಷ ಮಾಸ್ಕ್‌ ವಿತರಿಸಲಾಗುತ್ತಿದ್ದು, ಬುಧವಾರ ಈ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.ಈ ಸಂದರ್ಭ ಜೆಡಿಎಸ್ ಪದಾಕಾರಿಗಳಾದ ಪ್ರಕಾಶ್, ಉಮೇಶ್, ಗೂಳಿ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.