
ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವಲ್ಲಿ ವಿಫಲರಾಗಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಳು ರಾಮನಗರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅವರಿಗೆ ಮನವಿ ಸಲ್ಲಿಸಿದರು.
ರಾಮನಗರ: ಮಾನವ ಮತ್ತು ವನ್ಯಜೀವಿ ಸಂಘರ್ಷ ರಾಜ್ಯದಾದ್ಯಂತ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದರಿಂದಾಗಿ ಅಮಾಯಕರು ಸೇರಿದಂತೆ ಪ್ರಾಣಿಗಳು ಸಹ ಜೀವ ಕಳೆದುಕೊಳ್ಳುತ್ತಿವೆ. ಈ ಸಂಘರ್ಷ ತಡೆಯುವಲ್ಲಿ ವಿಫಲರಾಗಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿದೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತ ಸಂಘದ ಪದಾಧಿಕಾರಿಗಳು ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಕನಕಪುರ ತಾಲ್ಲೂಕಿನ ಕೂನೂರು ಬಳಿ ಎರಡು ಕಾಡಾನೆಗಳು ಹಾರೋಬೆಲೆ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟರೂ ಸಚಿವರು ಸ್ಥಳಕ್ಕೆ ಭೇಟಿ ನೀಡಿಲ್ಲ. ಘಟನೆ ಕುರಿತು ಉನ್ನತ ಮಟ್ಟದ ತನಿಖೆಗೂ ಆದೇಶಿಸಿಲ್ಲ. ಕೂಡಲೇ ಕಾಡಾನೆಗಳ ಸಾವಿನ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.
ಸಂಘದ ರಾಜ್ಯ ಉಪಾದ್ಯಕ್ಷ ಕೆ. ಮಲ್ಲಯ್ಯ ಮಾತನಾಡಿ, ‘ಕಾಡಾನೆಗಳ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಆನೆ ಕಾರ್ಯಪಡೆ ಸಿಬ್ಬಂದಿಯ ಬೇಜವಾಬ್ದಾರಿತನವೂ ಕಾರಣವಾಗಿದೆ. ಆನೆಗಳನ್ನು ನಾಡಿನಿಂದ ಕಾಡಿಗೆ ಓಡಿಸಲು ಬಳಸುವ ಅವೈಜ್ಞಾನಿಕ ಕ್ರಮಗಳಿಂದಾಗಿ ಆನೆಗಳು ಕೊನೆಯುಸಿರೆಳೆದಿವೆ’ ಎಂದು ದೂರಿದರು.
‘ಜಿಲ್ಲೆಯಲ್ಲಿ ವನ್ಯಜೀವಿಗಳ ಹಾವಳಿಯಿಂದಾಗಿ ಜನ ಬೇಸತ್ತಿದ್ದಾರೆ. ಕಾಡಾನೆ, ಚಿರತೆ, ಕರಡಿ, ಕಾಡುಹಂದಿಗಳಿಂದಾಗಿ ಜೀವಹಾನಿ ಮತ್ತು ಬೆಳೆಹಾನಿಯಾಗುತ್ತಿದೆ. ಕಾಡಾನೆ ಹಾಗೂ ಚಿರತೆಗಳಿಂದಾಗಿ ಜನ ಒಂಟಿಯಾಗಿ ತಮ್ಮ ಜಮೀನುಗಳಿಗೆ ಹೋಗುವುದಕ್ಕೆ ಭಯಪಡುವಂತಹ ಪರಿಸ್ಥಿತಿ ಇದೆ. ವನ್ಯಜೀವಿಗಳ ಹಾವಳಿ ತಡೆಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ’ ಎಂದರು ಆರೋಪಿಸಿದರು.
‘ಹಾರೊಬೆಲೆ ಜಲಾಶಯದ ಕುನೂರು ಸಮೀಪದ ಹಿನ್ನೀರಿನಲ್ಲಿ ಕಳೆ ವಿಪರೀತವಾಗಿ ಬೆಳೆದಿದೆ. ಆನೆಗಳ ಸಾವಿಗೆ ಪ್ರಮುಖವಾಗಿ ಈ ಕಳೆಯೇ ಕಾರಣವಾಗಿದೆ. ಆದ್ದರಿಂದ ಕಾವೇರಿ ನೀರಾವರಿ ನಿಗಮವು ಹಿನ್ನೀರಿನಲ್ಲಿರುವ ಕಳೆ ತೆರವಿಗೆ ಕ್ರಮ ಕೈಗೊಳ್ಳಬೇಕು’ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ಆಗ್ರಹಿಸಿದರು.
‘ಅರಣ್ಯದಂಚಿನಲ್ಲಿ ಅಕ್ರಮವಾಗಿ ನಿರ್ಮಾಣವಾಗುತ್ತಿರುವ ಹೋಂ ಸ್ಟೇಗಳು, ಫಾರ್ಮ್‌ಹೌಸ್‌ಗಳು ಹಾಗೂ ರೆಸಾರ್ಟ್‌ಗಳಿಂದಾಗಿ ಕಾಡು ಪ್ರಾಣಿಗಳು ನಾಡಿಗೆ ಬರುವಂತಾಗಿದೆ. ಅಲ್ಲಿ ಬಳಸುವ ಡಿ.ಜೆ ಸೌಂಡ್ ಹಾಗೂ ಅತಿ ಹೆಚ್ಚು ಜನರ ಓಡಾಟದಿಂದ ಕಾಡು ಪ್ರಾಣಿಗಳಿಗೆ ತೊಂದರೆಯಾಗುತ್ತಿದೆ. ಜಿಲ್ಲಾಡಳಿತ ಇದಕ್ಕೆ ಕಡಿವಾಣ ಹಾಕಬೇಕು’ ಎಂದು ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಹೇಳಿದರು.
ರೈತ ಸಂಘದ ಪದಾಧಿಕಾರಿಗಳಾದ ವಿಜಯ್ ಕುಮಾರ್, ತಿಮ್ಮೇಗೌಡ, ವೆಂಕಟೇಶ್, ಕುಮಾರ್, ರವಿ, ಶಂಭುಗೌಡ, ಕಿರಣ್ ಸಾಗರ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.