ADVERTISEMENT

ರಾಮನಗರ: 4 ಗ್ರಾ.ಪಂ.ಗಳಿಗೆ ಗಾಂಧಿ ಗ್ರಾಮ ಪುರಸ್ಕಾರ

ಪಂಚಾಯಿತಿ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳ ಮೌಲ್ಯಮಾಪನ: ಇತರರಿಗೂ ಪ್ರೇರಣೆ

ಆರ್.ಜಿತೇಂದ್ರ
Published 2 ಅಕ್ಟೋಬರ್ 2020, 0:47 IST
Last Updated 2 ಅಕ್ಟೋಬರ್ 2020, 0:47 IST
ಮಾಗಡಿ ತಾಲ್ಲೂಕಿನ ಬೆಳಗುಂಬ ಗ್ರಾ.ಪಂ. ಕಾಯಾರ್ಲಯ
ಮಾಗಡಿ ತಾಲ್ಲೂಕಿನ ಬೆಳಗುಂಬ ಗ್ರಾ.ಪಂ. ಕಾಯಾರ್ಲಯ   

ರಾಮನಗರ: ಗಾಂಧಿ ಜಯಂತಿಯಂದು ರಾಜ್ಯ ಸರ್ಕಾರ ನೀಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಈ ಬಾರಿಯೂ ಜಿಲ್ಲೆಯ ನಾಲ್ಕು ಗ್ರಾ.ಪಂ.ಗಳ ಹೆಸರು ಅಂತಿಮಗೊಂಡಿದ್ದು, ಶುಕ್ರವಾರ ಅಧಿಕೃತವಾಗಿ ಪ್ರಕಟವಾಗಲಿದೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರ್ಕಾರದ ಯೋಜನೆಗಳ ಅನುಷ್ಠಾನ, ನೈರ್ಮಲ್ಯ, ನರೇಗಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ತೋರುವ ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ಪ್ರತಿ ವರ್ಷ ಈ ಪುರಸ್ಕಾರ ನೀಡುತ್ತಾ ಬಂದಿದೆ. ಹಲವು ಮಾನದಂಡಗಳನ್ನು ಆಧರಿಸಿ ತಜ್ಞರ ತಂಡ ಈ ಪ್ರಶಸ್ತಿಗೆ ಗ್ರಾ.ಪಂ.ಗಳನ್ನು ಆಯ್ಕೆ ಮಾಡುತ್ತದೆ. ಸಂಬಂಧಿಸಿದ ಜಿಲ್ಲಾ ಪಂಚಾಯಿತಿಗಳಿಂದ ಶಿಫಾರಸು ಮಾಡಲಾದ ಗ್ರಾ.ಪಂ.ಗಳ ಪೈಕಿ ಅರ್ಹ ಗ್ರಾಮಗಳನ್ನು ಸರ್ಕಾರ ಆಯ್ಕೆ ಮಾಡುತ್ತದೆ.

ಮಾನದಂಡವೇನು?: ಮೊದಲಿಗೆ ಆನ್‌ಲೈನ್‌ನಲ್ಲಿ ಪ್ರಶಸ್ತಿಗಾಗಿ ಗ್ರಾ.ಪಂ.ಗಳಿಂದ ಅರ್ಜಿ ಆಹ್ವಾನಿಸಲಾಗುತ್ತದೆ. ಹೀಗೆ ಬಂದ ಅರ್ಜಿಗಳನ್ನು ಪರಿಶೀಲನೆಗಾಗಿ ಸರ್ಕಾರವು ಆಯಾ ಜಿಲ್ಲಾ ಪಂಚಾಯಿತಿಗಳಿಗೆ ಕಳುಹಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಅರ್ಹ ಅಧಿಕಾರಿಗಳನ್ನು ಒಳಗೊಂಡ ತಂಡವು ಸಂಬಂಧಿಸಿದ ಗ್ರಾ.ಪಂಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಲ್ಲಿನ ಅಭಿವೃದ್ಧಿ ಮತ್ತು ನೈರ್ಮಲ್ಯ ಕಾರ್ಯಗಳ ಮೌಲ್ಯಮಾಪನ ಮಾಡಿ ಸೂಕ್ತ ಶಿಫಾರಸಿನೊಂದಿಗೆ ಸರ್ಕಾರಕ್ಕೆ ವರದಿ ನೀಡುತ್ತದೆ. ಸರ್ಕಾರವು ಈ ಶಿಫಾರಸ್ಸನ್ನು ಪರಿಗಣಿಸಿ ಅರ್ಹ ಗ್ರಾ.ಪಂ.ಗಳಿಗೆ ಪ್ರಶಸ್ತಿ ನೀಡುತ್ತದೆ.

ADVERTISEMENT

ಒಟ್ಟು 200 ಅಂಕಗಳಿಗೆ ಗ್ರಾ.ಪಂ.ಗಳ ಮೌಲ್ಯಮಾಪನ ಇರುತ್ತದೆ. ಇದರಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳನ್ನು ಹೇಗೆ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲಾಗಿದೆ ಎಂಬುದನ್ನು ಅಳೆಯಲಾಗುತ್ತದೆ. ನರೇಗಾ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ಪ್ರಗತಿ ವೈಯಕ್ತಿಕ ಸ್ವಚ್ಚತೆ ಹಾಗೂ ಶೌಚಾಲಯಗಳ ನಿರ್ಮಾಣ ಮತ್ತು ನಿರ್ವಹಣೆ, ಗ್ರಾಮದಲ್ಲಿನ ನೈರ್ಮಲ್ಯ, ತ್ಯಾಜ್ಯ ನಿರ್ವಹಣೆಯ ವಿಧಾನಗಳು, ಜನರ ಆರೋಗ್ಯ ಗುಣಮಟ್ಟ ಮತ್ತು ಜನನ-ಮರಣಗಳ ಪ್ರಮಾಣ, ಎನ್‌ಎಂಆರ್‍.... ಹೀಗೆ ಪ್ರತಿ ಅಂಶವನ್ನೂ ಪರಿಗಣಿಸಿ ಪ್ರಶಸ್ತಿಗೆ ಶಿಫಾರಸು ಮಾಡಲಾಗುತ್ತದೆ.

ಗಾಂಧಿ ಗ್ರಾಮ ಪುರಸ್ಕಾರ ಪಡೆಯುವುದು ಪ್ರತಿ ಪಂಚಾಯಿತಿಗೂ ಹೆಮ್ಮೆಯ ವಿಚಾರ. ಇದರಿಂದಾಗಿ ಇನ್ನಷ್ಟು ಅಭಿವೃದ್ಧಿ ಕಾರ್ಯ ನಡೆಸಲು ಉತ್ತೇಜನ ಸಿಕ್ಕಂತೆ ಆಗುತ್ತದೆ. ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿಯ ಉತ್ಸಾಹ ಹೆಚ್ಚಿಸುತ್ತದೆ. ಉಳಿದ ಗ್ರಾ.ಪಂ.ಗಳೂ ಅದೇ ನಿರೀಕ್ಷೆಯೊಂದಿಗೆ ಕೆಲಸ ಮಾಡಲು ಪ್ರೇರಣೆ ಆಗುತ್ತದೆ ಎನ್ನುತ್ತಾರೆ ಅಧಿಕಾರಿಗಳು. ಪ್ರತಿ ವರ್ಷ ಈ ಪುರಸ್ಕಾರ ಪಡೆಯುವ ಗ್ರಾ.ಪಂ.ಗಳಿಗೆ ಸರ್ಕಾರ ತಲಾ ₨ 5 ಲಕ್ಷ ನಗದು ಪುರಸ್ಕಾರವನ್ನೂ ನೀಡುತ್ತಿತ್ತು. ಆದರೆ ಕೋವಿಡ್ ಕಾರಣಕ್ಕೆ ಈ ಬಾರಿಯ ಪ್ರಶಸ್ತಿಯ ಮೊತ್ತ ಇನ್ನೂ ಅಂತಿಮಗೊಂಡಿಲ್ಲ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸಹ ಸರಳವಾಗಿ ನಡೆಯುವ ಸಾಧ್ಯತೆ ಇದೆ.

ಪುರಸ್ಕೃತ ಗ್ರಾ.ಪಂ.ಗಳು
ರಾಮನಗರ- ಗೋಪಹಳ್ಳಿ
ಚನ್ನಪಟ್ಟಣ- ಎಂ.ಬಿ.ಹಳ್ಳಿ (ಬೊಮ್ಮನಾಯಕನಹಳ್ಳಿ)
ಕನಕಪುರ- ಕೋಡಿಹಳ್ಳಿ
ಮಾಗಡಿ- ಬೆಳಗುಂಬ

*
ಜಿಲ್ಲೆಯ ಬಹುತೇಕ ಗ್ರಾ.ಪಂ.ಗಳು ಉತ್ತಮ ಕೆಲಸ ಮಾಡುತ್ತಿವೆ. ಪುರಸ್ಕಾರದಿಂದಾಗಿ ಅವು ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲು ಪ್ರೇರಣೆ ಸಿಗಲಿದೆ
-ಇಕ್ರಂ, ಜಿ.ಪಂ. ಸಿಇಒ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.