ರಾಮನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಇಬ್ಬರ ಭಾವಚಿತ್ರಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಹಾಗೂ ಗಣ್ಯರು ಪುಷ್ಪನಮನ ಸಲ್ಲಿಸಿದರು
ರಾಮನಗರ: ‘ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಗಾಂಧೀಜಿ ಅವರು, ತಮ್ಮ ಹೋರಾಟಕ್ಕೆ ಅಹಿಂಸೆಯನ್ನೇ ಪ್ರಧಾನ ಅಸ್ತ್ರವಾಗಿ ಬಳಸಿದರು. ಸರಳವಾಗಿ ಬದುಕಿದ ಅವರು, ಸೌಹಾರ್ದ ಹಾಗೂ ಸರಳ ಬದುಕಿನ ಮಾರ್ಗ ತೋರಿದರು. ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಪರಿಚಯಿಸಿದರು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಅವರ 156ನೇ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 121ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ನಾವು ನಮ್ಮ ಕುಟುಂಬದ ಶ್ರೇಯೋಭಿವೃದ್ದಿಗೆ ಯೋಚಿಸುತ್ತೇವೆ. ಆದರೆ, ಗಾಂಧೀಜಿ ಅವರು ಬದುಕಿನದ್ದಕ್ಕೂ ದೇಶದ ಕುರಿತು ಚಿಂತನೆ ನಡೆಸಿದರು. ಕಲ್ಯಾಣ ರಾಜ್ಯದ ನಿರ್ಮಾಣಕ್ಕೆ ತಮ್ಮದೇ ಆದ ಚಿಂತನೆಗಳನ್ನು ಕೊಟ್ಟರು. ಅವರೊಬ್ಬ ತತ್ವಜ್ಞಾನಿ, ಅರ್ಥಶಾಸ್ತ್ರಜ್ಞ ಹಾಗೂ ರಾಜಕೀಯ ತಜ್ಞರೂ ಆಗಿದ್ದರು’ ಎಂದು ಅಭಿಪ್ರಾಯಪಟ್ಟರು.
‘ಗಾಂಧೀಜಿ ಅವರ ಜೀವನ ಚರಿತ್ರೆಯೇ ನಮಗೆ ಮಾರ್ಗದರ್ಶಕವಾಗಿದೆ. ಅವರ ಜನ್ಮದಿನವನ್ನು ಅಂತರರಾಷ್ಟ್ರೀಯ ಅಹಿಂಸಾ ದಿನವೆಂದು ಆಚರಿಸಲಾಗುತ್ತಿದೆ. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸಹ ಗಾಂಧಿ ಮಾರ್ಗದಲ್ಲಿ ಆಡಳಿತ ನಡೆಸುವ ಮೂಲಕ ಅವ ಕನಸು ಸಾಕಾರಗೊಳಿಸಲು ಪ್ರಯತ್ನಿಸಿದರು. ಇವರಿಬ್ಬರ ತತ್ವಾದರ್ಶಗಳನ್ನು ಜನ ಅಳವಡಿಸಿಕೊಳ್ಳಬೇಕು’ ಎಂದರು.
ಉಪನ್ಯಾಸ ನೀಡಿದ ಚನ್ನಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಉಮೇಶ್, ‘ಗಾಂಧೀಜಿ ಅವರದ್ದು ದೇಶದ ಚರಿತ್ರೆಯಲ್ಲಿ ಅಳಿಸಲಾಗದ ಹೆಜ್ಜೆ ಗುರುತು. ಗಾಂಧೀಜಿ ಅವರು 1869 ಅ. 2ರಂದು ಜನಿಸಿದರೆ, ಸರಳತೆಗೆ ಹೆಸರಾದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು 1904 ಅ. 2ರಂದು ಜನಿಸಿದರು’ ಎಂದು ತಿಳಿಸಿದರು.
‘1891ರಲ್ಲಿ ಬ್ಯಾರಿಸ್ಟರ್ ಪಡೆದ ಗಾಂಧೀಜಿ, 1893ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬಾನ್‌ನಿಂದ ಪ್ರಿಟೋರಿಯಾಗೆ ರೈಲಿನ ಮೊದಲ ದರ್ಜೆ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದಾಗ, ಪೀಟರ್ಸ್‌ಬರ್ಗ್‌ನಲ್ಲಿ ಬಿಳಿಯ ವ್ಯಕ್ತಿಯೊಬ್ಬ ಕಪ್ಪು ವರ್ಣದ ವ್ಯಕ್ತಿಗೆ ಮೂರನೇ ದರ್ಜೆ ಬೋಗಿಯಲ್ಲಿ ಪ್ರಯಾಣಿಸುವಂತೆ ಆತನ ಸಾಮಗ್ರಿಗಳನ್ನು ಹೊರಗೆಸೆದು ಅವಮಾನಿಸುತ್ತಾನೆ’ ಎಂದು ನೆನೆದರು.
‘ಗಾಂಧೀಜಿಗೆ ಮೊದಲ ಸಲ ವರ್ಣಭೇದ ನೀತಿಯ ಬಿಸಿ ತಟ್ಟುತ್ತದೆ. ಅವರ ಮನಸ್ಸಿಗೆ ನಾಟುವ ಈ ಘಟನೆಗೆ ಸಂಬಂಧಿಸಿದಂತೆ, ಗಾಂಧೀಜಿ ಅವರು ವರ್ಣಬೇಧ ನೀತಿ ವಿರುದ್ಧ ದಕ್ಷಿಣ ಆಫ್ರಿಕಾದಲ್ಲಿ ಹೋರಾಟ ನಡೆಸುತ್ತಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ ನಂತರ ಗೋಪಾಲಕೃಷ್ಣ ಗೋಖಲೆ ಕಾಲದಲ್ಲಿ ಗಾಂಧೀಜಿ ಭಾರತಕ್ಕೆ ಬರುತ್ತಾರೆ’ ಎಂದು ಹೇಳಿದರು.
‘ದೇಶದಲ್ಲಿ ನಡೆಯುತ್ತಿದ್ದ ಸ್ವದೇಶಿ ಹಾಗೂ ಸ್ವಾತಂತ್ರ್ಯ ಚಳವಳಿಯ ಭಾಗವಾಗಿ, ಅದರ ನೇತೃತ್ವ ವಹಿಸಿಕೊಂಡು ಇಡೀ ದೇಶವನ್ನು ಹೋರಾಟಕ್ಕೆ ಒಗ್ಗೂಡಿಸುತ್ತಾರೆ. ಮೊದಲ ಬಾರಿಗೆ 1917ರಲ್ಲಿ ಚಂಪಾರಣ್ಯ ಸತ್ಯಾಗ್ರಹದ ಮೂಲಕ ನೀಲಿ ಬೆಳೆಗಾರರ ಪರವಾಗಿ ಬ್ರಿಟಿಷ್ ವಿರೋಧಿ ನೀತಿಗಳನ್ನು ತಿರಸ್ಕರಿಸಿ ಆ ಹೋರಾಟದಲ್ಲಿ ಯಶಸ್ವಿಯಾಗುತ್ತಾರೆ’ ಎಂದು ತಿಳಿಸಿದರು.
‘ಆನಂತರ ಸತತವಾಗಿ ವಿವಿಧ ಹೋರಾಟಗಳನ್ನು ನಡೆಸಿ 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುತ್ತಾರೆ. 1948 ಜ. 30ರಂದು ನಾಥೂರಾಮ್ ಗೋಡ್ಸೆಯ ಗುಂಡಿಗೆ ಬಲಿಯಾಗುತ್ತಾರೆ. ಗಾಂಧೀಜಿ ಅವರ ಹತ್ಯೆಯೊಂದಿಗೆ ಗಾಂಧಿ ಯುಗವು ಅಂತ್ಯವಾಗುತ್ತದೆ. ಅವರ ಅಂತ್ಯಕ್ರಿಯೆಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ಮೂಲಕ ಮಹಾತ್ಮನಿಗೆ ನಮನ ಸಲ್ಲಿಸಿದ್ದರು’ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಂಜುನಾಥ್, ಆರೋಗ್ಯ ಇಲಾಖೆಯ ಡಾ. ಕುಮಾರ್ ಸೇರಿದಂತೆ ಗಣ್ಯರು ಗಾಂಧೀಜಿ ಹಾಗೂ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ವಿದುಷಿ ಎಸ್.ಎನ್. ರಮಣಿ, ವಿದ್ವಾನ್ ಎಸ್.ಎನ್. ಶ್ರೀನಿವಾಸ ಪ್ರಸನ್ನ, ಪ್ರಣವ, ವಿದ್ಯಾ, ಜಯಲಕ್ಷ್ಮಿ ಹಾಗೂ ಜಗದೀಶ್ ಅವರ ತಂಡ ಸರ್ವಧರ್ಮ ಪ್ರಾರ್ಥನೆ ಮಾಡಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ ಎಚ್.ಜಿ ಗಣ್ಯರನ್ನು ಸ್ವಾಗತಿಸಿದರು. ಶ್ರೀನಿವಾಸ್ ನಿರೂಪಣೆ ಮಾಡಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ
ಗಾಂಧೀಜಿ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರವನ್ನು ಗಣ್ಯರು ವಿತರಿಸಿದರು. ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಮಾಗಡಿ ತಾಲ್ಲೂಕಿನ ಸಂಕೀಘಟ್ಟದ ಸರ್ಕಾರಿ ಪ್ರೌಢಶಾಲೆಯ ಯಶಸ್ವಿನಿ ಎಸ್.ಎಲ್ ದ್ವಿತೀಯ ಸ್ಥಾನ ಪಡೆದ ಮಾಗಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾಶ್ರೀ ಎಚ್.ಎನ್ ಹಾಗೂ ತೃತೀಯ ಸ್ಥಾನ ಪಡೆದ ರಾಮನಗರ ಟೌನಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹೇಮಶ್ರೀ ಅವರು ಬಹುಮಾನ ಪಡೆದರು. ಪದವಿ ಪೂರ್ವ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಚನ್ನಪಟ್ಟಣ ತಾಲ್ಲೂಕಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಲಿಖಿತ ಎಸ್. ದ್ವಿತೀಯ ಸ್ಥಾನ ಪಡೆದ ಹಾರೋಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಲೇಖನಗಂಗ ತೃತೀಯ ಸ್ಥಾನ ಪಡೆದ ಬಿಡದಿಯ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಿಂಚನ ಹಾಗೂ ಪದವಿ/ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ರಾಮನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನ ದೇವಿಕಾ ಎಚ್.ಕೆ. ದ್ವಿತೀಯ ಸ್ಥಾನ ಪಡೆದ ರಾಮನಗರದ ಗೌಸಿಯಾ ಇಂಜಿನಿಯರಿಂಗ್ ಕಾಲೇಜಿನ ವರ್ಷಿತಾ ಹಾಗೂ ತೃತೀಯ ಸ್ಥಾನ ಪಡೆದ ರಾಮನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿಶ್ರುತ ಅವರಿಗೆ ಗಣ್ಯರು ಬಹುಮಾನ ವಿತರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
‘ಅಹಿಂಸಾ ಮಾರ್ಗದಲ್ಲಿ ಸಾಗಬೇಕು’
ರಾಮನಗರ: ನಗರದ ಮಾಗಡಿ ರಸ್ತೆಯಲ್ಲಿರುವ ಪಟೇಲ್ ಆಂಗ್ಲ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನವನ್ನು ಆಚರಿಸಲಾಯಿತು. ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಪಟೇಲ್ ಸಿ. ರಾಜು ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕರು ಹಾಗೂ ಸಿಬ್ಬಂದಿ ಇಬ್ಬರೂ ಮಹನೀಯರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಬಳಿಕ ಮಾತನಾಡಿದ ರಾಜು ‘ಗಾಂಧೀಜಿ ಅವರು ಇಡೀ ಜಗತ್ತಿಗೆ ಅಹಿಂಸೆಯ ಮಾರ್ಗವನ್ನು ತೋರಿದರು. ಆ ಮೂಲಕ ಸಂಘರ್ಷವಿಲ್ಲದ ಶಾಂತಿಯುತ ಸಮಾಜದ ಕನಸು ಕಂಡರು. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸರಳ ಜೀವಿಯಾಗಿದ್ದ ಅವರು ದೇಶ ಕಂಡ ಪ್ರಾಮಾಣಿಕ ಪ್ರಧಾನಿಗಳಲ್ಲಿ ಒಬ್ಬರು. ಜೈ ಜವಾನ್ ಜೈ ಕಿಸಾನ್ ಎಂದು ಕರೆ ಕೊಟ್ಟರು. ಇಬ್ಬರ ಆದರ್ಶಗಳನ್ನು ನಾವು ಅಳವಡಿಸಿಕೊಂಡು ಸಮೃದ್ದ ದೇಶ ನಿರ್ಮಾಣಕ್ಕೆ ಮುಂದಾಗಬೇಕು’ ಎಂದರು.
ಮಹನೀಯರ ಜೀವನಾದರ್ಶ ಪಾಲಿಸಲು ಸಲಹೆ
ಬಿಡದಿ (ರಾಮನಗರ): ಪಟ್ಟಣದ ಜ್ಞಾನ ವಿಕಾಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಅಂಡ್ ಕಾಮರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಬುಧವಾರ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು. ಗಣ್ಯರು ಮಹನೀಯರು ಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಜ್ಞಾನ ವಿಕಾಸ್ ವಿದ್ಯಾ ಸಂಘದ ಖಜಾಂಚಿ ಬಿ.ಎನ್. ಗಂಗಾಧರಯ್ಯ ‘ಗಾಂಧೀಜಿ ಮತ್ತು ಶಾಸ್ತ್ರಿ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಗಾಂಧೀಜಿಯವರು ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ನಾವೆಲ್ಲರೂ ಅವರ ಸತ್ಯ ಅಹಿಂಸೆ ಸೇವಾ ಮನೋಭಾವದ ಮಾರ್ಗದಲ್ಲಿ ಸಾಗಬೇಕು. ಜೈ ಜವಾನ್ ಜೈ ಕಿಸಾನ್ ಎನ್ನುವ ಮೂಲಕ ಕೃಷಿಕರನ್ನು ಯೋಧರಂತೆ ಕಂಡ ಮಹನೀಯ ಶಾಸ್ತ್ರಿ. ಅವರು ಸರಳತೆ ಪ್ರಾಮಾಣಿಕತೆ ರಾಷ್ಟ್ರೀಯ ಏಕತೆ ಮತ್ತು ಶಿಸ್ತಿಗೆ ಒತ್ತು ನೀಡಿದರು’ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ರೂಪ ಟಿ. ಶ್ರೀ ಬಸವೇಶ್ವರಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸರವಣನ್ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗದವರು ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.