ADVERTISEMENT

ಕನಕಪುರ | ʼಏಪ್ರಿಲ್‌ನಲ್ಲಿ ಮರಳೆ ಗವಿಮಠದ ಹೊಸ ಕಟ್ಟಡ ಉದ್ಘಾಟನೆʼ

18ರಂದು ಹಿರಿಯ ವಿದ್ಯಾರ್ಥಿಗಳ ಸಂಕಲ್ಪ ಸಭೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 2:36 IST
Last Updated 11 ಜನವರಿ 2026, 2:36 IST
ಕನಕಪುರ ಮರಳೆ ಗವಿಮಠದಲ್ಲಿ ಶನಿವಾರ ನಡೆದ ಹಿರಿಯ ವಿದ್ಯಾರ್ಥಿಗಳ ಸಂಕಲ್ಪ ಸಭೆಯ ಪೂರ್ವಭಾವಿ ಸಭೆಯಲ್ಲಿ ಮುಮ್ಮಡಿ ನಿರ್ವಾಣ ಸ್ವಾಮೀಜಿ ಮಾತನಾಡಿದರು
ಕನಕಪುರ ಮರಳೆ ಗವಿಮಠದಲ್ಲಿ ಶನಿವಾರ ನಡೆದ ಹಿರಿಯ ವಿದ್ಯಾರ್ಥಿಗಳ ಸಂಕಲ್ಪ ಸಭೆಯ ಪೂರ್ವಭಾವಿ ಸಭೆಯಲ್ಲಿ ಮುಮ್ಮಡಿ ನಿರ್ವಾಣ ಸ್ವಾಮೀಜಿ ಮಾತನಾಡಿದರು   

ಕನಕಪುರ: ಮರಳೆ ಗವಿಮಠದ ಆವರಣದಲ್ಲಿ ನಿರ್ಮಾಣ ಮಾಡುತ್ತಿರುವ ಮಠದ ಕಟ್ಟಡವನ್ನು ಏಪ್ರಿಲ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಉದ್ಘಾಟಿಸಲಾಗುವುದು. ಈ ಕುರಿತು ಚರ್ಚಿಸಲು ಜ.18ರಂದು ಹಿರಿಯ ವಿದ್ಯಾರ್ಥಿಗಳ ಸಂಕಲ್ಪಸಭೆ ಕರೆಯಲಾಗಿದೆ ಎಂದು ಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ ತಿಳಿಸಿದರು.

ಶ್ರೀಮಠದ ಆವರಣದಲ್ಲಿ ಶನಿವಾರ ನಡೆದ ಹಿರಿಯ ವಿದ್ಯಾರ್ಥಿಗಳ ಸಂಕಲ್ಪಸಭೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜ.18 ರಂದು ಶ್ರೀಮಠದ ಆವರಣದಲ್ಲಿ ನಡೆಯುವ ಸಂಕಲ್ಪ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆ ತೀರ್ಮಾನಿಸಲಾಗುವುದು. ಸಣ್ಣ ಪುಟ್ಟ ಕೆಲಸ ಹಾಗೂ ಉದ್ಘಾಟನೆ ಜವಾಬ್ದಾರಿಯನ್ನು ಹಿರಿಯ ವಿದ್ಯಾರ್ಥಿಗಳು ವಹಿಸಿಕೊಂಡಿದ್ದಾರೆ ಎಂದು ತಿಳಿಸಿದರು. 

ಮರಳೆ ಗವಿಮಠ ಯಡಿಯೂರು ಸಿದ್ದಲಿಂಗೇಶ್ವರರು ತಪಸ್ಸು ಮಾಡಿದ ತಪೋಭೂಮಿ. ಇಲ್ಲಿ ಇದ್ದ ಚಿಕ್ಕದಾದ ಪುರಾತನ ಮಠದ ಜಾಗದಲ್ಲಿ ಬೃಹತ್ ಮಠ ನಿರ್ಮಾಣ ಮಾಡುತ್ತಿದ್ದು ಅದು ಪೂರ್ಣಗೊಳ್ಳುವ ಹಂತ ತಲುಪಿದೆ ಎಂದರು.

ADVERTISEMENT

ಮರಳೆ ಗವಿಮಠ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಮಠವಾಗಿದ್ದು, ಸ್ವತಂತ್ರ ಪೂರ್ವ ದಿಂದಲೂ ತ್ರಿವಿಧ ದಾಸೋಹಗಳ ಮೂಲಕ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯಲ್ಲಿ ತೊಡಗಿದೆ. ಉಚಿತ ದಾಸೋಹ, ವಸತಿ ಮತ್ತು ಶಿಕ್ಷಣ ನೀಡುತ್ತಾ ಸಮಾಜ ಕಟ್ಟುವ ಕೆಲಸ ಮಾಡುತ್ತಾ ಬಂದಿದೆ. ಇಲ್ಲಿ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ಬದುಕು ಕಟ್ಟಿಕೊಳ್ಳುವ ಜೊತೆಗೆ ಉತ್ತಮ ಭವಿಷ್ಯ ಕಟ್ಟಿಕೊಂಡಿದ್ದಾರೆ. ಅನೇಕರು ಸಮಾಜದ ಉನ್ನತ ಸ್ಥಾನದಲ್ಲಿದ್ದಾರೆ ಎಂದು ಉದ್ಯಮಿ ಹಾಗೂ ಹಳೆಯ ವಿದ್ಯಾರ್ಥಿ ಸದಾಶಿವ ಹೇಳಿದರು.

ಉರುಬರಾಣಿ ಮಠದ ಶಿವಶಂಕರ ಶಿವಾಚಾರ್ಯರು, ಅಜ್ಜ ಬಸವನಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯರು, ಸಪ್ಪೆ ಸ್ವಾಮಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಬಿಡದಿ ಹುಚ್ಚಪ್ಪ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.