ADVERTISEMENT

ಬೃಹತ್ ಶಿಲಾಯುಗದ ಸಮಾಧಿ ನೆಲೆ

ಕ್ರಿ.ಪೂ. 1200-1250ರ ಶವಸಂಸ್ಕಾರದ ವಿಶಿಷ್ಟ ವಿಧಾನದ ಕುರುಹುಗಳು

ಓದೇಶ ಸಕಲೇಶಪುರ
Published 12 ಆಗಸ್ಟ್ 2024, 5:37 IST
Last Updated 12 ಆಗಸ್ಟ್ 2024, 5:37 IST
ರಾಮನಗರ ತಾಲ್ಲೂಕಿನ ಚಿಕ್ಕಸೂಲಿಕೆರೆ ಗ್ರಾಮದ ಬೆಟ್ಟ ಪ್ರದೇಶದಲ್ಲಿ ಪತ್ತೆಯಾಗಿರುವ ಬೃಹತ್ ಶಿಲಾಯುಗದ ಸಮಾಧಿ
ಚಿತ್ರಗಳು: ಬಿ. ಶಶಿಕುಮಾರ್
ರಾಮನಗರ ತಾಲ್ಲೂಕಿನ ಚಿಕ್ಕಸೂಲಿಕೆರೆ ಗ್ರಾಮದ ಬೆಟ್ಟ ಪ್ರದೇಶದಲ್ಲಿ ಪತ್ತೆಯಾಗಿರುವ ಬೃಹತ್ ಶಿಲಾಯುಗದ ಸಮಾಧಿ ಚಿತ್ರಗಳು: ಬಿ. ಶಶಿಕುಮಾರ್   

ರಾಮನಗರ: ತಾಲ್ಲೂಕಿನ ಚಿಕ್ಕಸೂಲಿಕೆರೆ ಗ್ರಾಮದ ಬೆಟ್ಟ ಪ್ರದೇಶದಲ್ಲಿ ಬೃಹತ್ ಶಿಲಾಯುಗದ ಸಮಾಧಿ ನೆಲೆಗಳು ಪತ್ತೆಯಾಗಿವೆ. ತಾಲ್ಲೂಕು ಕೇಂದ್ರದಿಂದ ಸುಮಾರು 17 ಕಿಲೋಮೀಟರ್ ದೂರವಿರುವ ಗ್ರಾಮವು ಆದಿವಾಸಿ ಸಂಸ್ಕೃತಿಯ ನೆಲೆಯಾಗಿತ್ತು ಎಂಬುದನ್ನು ಇಲ್ಲಿನ ಸಮಾಧಿಯಲ್ಲಿ ಸಿಕ್ಕಿರುವ ಕುರುಹುಗಳು ಹೇಳುತ್ತವೆ.

ವಿಶಿಷ್ಟ ಭೌಗೋಳಿಕ ಲಕ್ಷಣಗಳೊಂದಿಗೆ ಐತಿಹಾಸಿಕವಾಗಿರುವ ಗ್ರಾಮವು ವಿವಿಧ ಸಮುದಾಯಗಳ ಜನರಿರುವ ಪ್ರದೇಶವಾಗಿದೆ. ಗ್ರಾಮದ ಗೋಪುರದ ಅರೆಬಯಲು ಎಂಬ ನಿಸರ್ಗ ತಾಣದಲ್ಲಿರುವ ಕೆಲ ಹೊಲಗಳಲ್ಲಿ ಶಿಥಿಲಗೊಳ್ಳದ ಕೆಲವು ಸಮಾಧಿಗಳಿವೆ. ವೃತ್ತಾಕಾರದ ಇವುಗಳ ಅವಶೇಷಗಳು ಕೃಷಿ ಭೂಮಿಯಲ್ಲಿರುವುದರಿಂದ ರೈತರು ಅವುಗಳನ್ನು ಶಿಥಿಲಗೊಳಿಸಿ, ಕಲ್ಲುಗಳನ್ನು ಬದುಗಳಿಗೆ ಸರಿಸಿದ್ದಾರೆ.

‘ಸದ್ಯ ವಿಶಾಲ ಬಂಡೆಗಳ ಮೇಲೆ ನಿರ್ಮಿತವಾದ ಸಮಾಧಿಗಳ ಸುತ್ತಲ ಆವರಣ ಮಾತ್ರ ಕಂಡುಬರುತ್ತವೆ. ಅದರ ಮೇಲೆ ಮಧ್ಯಭಾಗದಲ್ಲಿ ನಿರ್ಮಾಣವಾಗಿದ್ದ ಕಲ್ಲಿನ ಗೋಡಿ ಚಪ್ಪಡಿ ಮತ್ತು ಮೇಲಿಟ್ಟಿದ್ದ ಟೋಪಿಕಲ್ಲು ಕಂಡುಬರುವುದಿಲ್ಲ. ನಿಧಿ ಆಸೆಗಾಗಿ ಇವುಗಳನ್ನು ಅಗೆಯಲಾಗಿದೆ’ ಎಂದು ಸಮಾಧಿಗಳನ್ನು ಪತ್ತೆ ಹಚ್ಚಿರುವ ಜಾನಪದ ವಿದ್ವಾಂಸ ಹಾಗೂ ಸಂಶೋಧಕ ಡಾ. ಎಂ. ಬೈರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕಪ್ಪು–ಕೆಂಪು ಮಿಶ್ರಿತ ಮಡಿಕೆ: ‘ಸಮಾಧಿಗಳು ಸುಮಾರು 15-20 ಅಡಿ ವ್ಯಾಸದ ವೃತ್ತಾಕಾರದಲ್ಲಿ ಜೋಡಿಸಿದ ಕಪ್ಪು ಮತ್ತು ಗ್ರಾನೈಟ್ ಶಿಲೆಗಳಿಂದ ಕೂಡಿವೆ. ನಿಧಿ ಶೋಧಕರ ಅಗೆತಕ್ಕೆ ಒಳಗಾದ ಸಮಾಧಿ ಸಮೀಪವೇ ಮಡಿಕೆ ಚೂರುಗಳು ಮತ್ತು ಕುಡಿಕೆ ದೊರೆತಿವೆ. ಕಪ್ಪು ಮತ್ತು ಕೆಂಪು ಮಿಶ್ರಿತವಾಗಿರುವ ಇಂತಹ ಮಡಿಕೆಗಳು ಸಾಮಾನ್ಯವಾಗಿ ಬೃಹತ್ ಶಿಲಾಯುಗದ ಸಮಾಧಿಗಳಲ್ಲಿ ಕಂಡುಬರುವುದುಂಟು’ ಎಂದು ಹೇಳಿದರು.

‘ಪುರಾತತ್ವಶಾಸ್ತ್ರಜ್ಞರು ಈ ಮಡಿಕೆಗಳ ಕಾಲವನ್ನು ದಕ್ಷಿಣ ಕರ್ನಾಟಕದಲ್ಲಿ ಕ್ರಿ.ಪೂ. 1200-1250 ಎಂದು ಗುರುತಿಸಿದ್ದಾರೆ. ಇಲ್ಲಿನ ಭೂ ಲಕ್ಷಣ ಮತ್ತು ಜನರ ಸಾಂಪ್ರದಾಯಕ ಆಚರಣೆಗಳು ಬೃಹತ್ ಶಿಲಾಯುಗದ ಜೊತೆಗೆ ತಳಕು ಹಾಕಿಕೊಂಡಿರುವಂತೆ ಕಂಡು ಬರುತ್ತವೆ. ಈ ಪ್ರದೇಶ ಕಬ್ಬಿಣ ಯುಗದ ನೆಲೆಯಾಗಿ ರೂಪುಗೊಳ್ಳಲು ಪೂರಕವಾದ ಸಾಕಷ್ಟು ಅಂಶಗಳು ಇಲ್ಲಿವೆ’ ಎಂದು ವಿವರಿಸಿದರು.

‘ಬೆಟ್ಟದ ಬಯಲು ಬಂಡೆಗಳ ನಡುವಿನ ಕಿಬ್ಬರಿಯಲ್ಲಿರುವ ಸಮಾಧಿಗಳು ಇಂದು ವ್ಯವಸಾಯದ ಜಮೀನುಗಳಾಗಿ ಪರಿವರ್ತನೆಗೊಂಡಿವೆ. ಬಯಲಿನ ಮುಂದೆ ಸಾಗಿದರೆ ಕೆಂಪುಮಣ್ಣಿನ ವಿಶಾಲ ಮೈದಾನ ಪ್ರದೇಶ ಗೋಚರಿಸುತ್ತದೆ. ಬೆಟ್ಟಗುಡ್ಡಗಳಿಂದ ಸುತ್ತುವರಿದಿರುವ ಬಟ್ಟಲ ತಳದ ಸಮತಟ್ಟಾದ ಈ ಬೋರೆಯ ಪ್ರದೇಶದಲ್ಲಿ ದಿನಗಳು ಕಳೆದಂತೆ ಕರಗಿ ಹೋಗುವ, ಕಳಚಿ ಬೀಳುವ ಕಪ್ಪು ಶಿಲೆಗಳು ಹೇರಳವಾಗಿ ಕಂಡುಬರುತ್ತವೆ’ ಎಂದು ಮಾಹಿತಿ ನೀಡಿದರು.

ಬೈರೇಗೌಡ ಅವರ ಈ ಸಂಶೋಧನೆಗೆ ಛಾಯಾಚಿತ್ರಗ್ರಾಹಕ ಬಿ. ಶಶಿಕುಮಾರ್ ಅವರು ಜೊತೆಗಿದ್ದರು.

ರಾಮನಗರ ತಾಲ್ಲೂಕಿನ ಚಿಕ್ಕಸೂಲಿಕೆರೆ ಗ್ರಾಮದ ಇರುಳಿಗರ ಕಾಲೊನಿ ಬಳಿ ಕಂಡುಬಂದ ಇರುಳಿಗರ ಶವಸಂಸ್ಕಾರ ವಿಧಾನಕ್ಕೆ ಸಾಕ್ಷಿಯಾಗಿರುವ ತಲೆಕಲ್ಲುಗುಡ್ಡೆ. ಸಂಶೋಧಕ ಡಾ. ಎಂ. ಬೈರೇಗೌಡ ಹಾಗೂ ಸ್ಥಳೀಯ ಯುವಕರು ಇದ್ದಾರೆ

ಇರುಳಿಗರ ತಲೆಕಲ್ಲುಗುಡ್ಡೆ ‘ಗ್ರಾಮದ ಇರುಳಿಗರ ಕಾಲೊನಿ ಮನೆಗಳ ಸಮೀಪ ಬಯಲು ಅರೆಬಂಡೆಯ ಮೇಲೆ ಹಿಡಿಗಲ್ಲು ಬೋಡ್ರಸ್ ಸೇರಿದಂತೆ ವಿವಿಧ ಗಾತ್ರದ ಕಲ್ಲುಗಳ ಗುಡ್ಡೆಗಳು ಎದುರಾಗುತ್ತವೆ. ಒಂದೇ ಆವರಣದಲ್ಲಿ ಮೂರ್ನಾಲ್ಕು ಅಡಿ ದೂರದಲ್ಲಿರುವ ಆ ಕಲ್ಲುಗುಡ್ಡೆಗಳಿಗೆ ತಲೆಕಲ್ಲುಗುಡ್ಡೆ ಎಂದು ಹೆಸರಿಸುತ್ತಾರೆ. ಇರುಳಿಗ ಬುಡಕಟ್ಟಿನ ಶವಸಂಸ್ಕಾರ ವಿಧಾನವೇ ವಿಶೇಷವಾಗಿದೆ. ಸಂಸ್ಕಾರಕ್ಕೆ ಬಂದ ನೆಂಟರಿಷ್ಟರೆಲ್ಲ ಕೈಯಲ್ಲಿ ತಲಾ ಒಂದೊಂದು ಹಿಡಿಗಲ್ಲು ಅದಕ್ಕಿಂತಲೂ ದಪ್ಪದ ಬೋಡ್ರಸ್ ಗಾತ್ರದ ಕಲ್ಲುಗಳನ್ನು ಒಂದೆಡೆ ಗುಡ್ಡೆ ಹಾಕುವುದೇ ತಲೆಕಲ್ಲುಗುಡ್ಡೆ. ಇತರ ಸಮುದಾಯಗಳಲ್ಲಿ ಅಂತ್ಯಕ್ರಿಯೆ ಮಾಡಲು ಶವ ಹೊತ್ತು ಹೊರಟರೆ ಮಧ್ಯದಾರಿಯಲ್ಲಿ ಇಳಿಸಿ ಹಿಂದಮುಂದಲ ಕಲ್ಲು ಎಂಬುದಾಗಿ ಹಾಕುತ್ತಾರೆ. ಹಾಗೆ ಹಾಕಿದ ಕಲ್ಲುಗಳು ಗೋಲಿ ಗಜ್ಜುಗ ಗಾತ್ರದವಾಗಿದ್ದು ಅವುಗಳಿಗೆ ಒಂದು ಆಕಾರವಿರುವುದಿಲ್ಲ. ಆದರೆ ಇರುಳಿಗ ಬುಡಕಟ್ಟಿನವರು ಹಾಕುವ ತಲೆಕಲ್ಲುಗುಡ್ಡೆ ತಲತಲಾಂತರದವರೆಗೂ ಇರುತ್ತವೆ. ಮುಂದೆ ಸತ್ತ ಹಿರಿಯರ ಪೂಜೆಗೆ ಈಗಿನವರು ಇದೇ ತಲೆಕಲ್ಲುಗುಡ್ಡೆಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ರತೀತಿ ಇದೆ’ ಎಂದು ಬೈರೇಗೌಡ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.