ADVERTISEMENT

ಬಿಡದಿ | ಬಡವರಿಗೆ ಇಂದಿರಾ ಕ್ಯಾಂಟೀನ್ ಆಸರೆ: ಸಚಿವ ರಾಮಲಿಂಗಾ ರೆಡ್ಡಿ

ಬಿಡದಿಯಲ್ಲಿ ಕ್ಯಾಂಟೀನ್, ಶೌಚಾಲಯ, ಪುರಸಭೆ ಕಚೇರಿ ಉದ್ಘಾಟನೆ; ನಲ್ಲಿಗುಡ್ಡ ಕೆರೆಯಲ್ಲಿ ಜಲಕ್ರೀಡೆಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 4:41 IST
Last Updated 19 ಫೆಬ್ರುವರಿ 2026, 4:41 IST
<div class="paragraphs"><p>ಬಿಡದಿ ಪಟ್ಟಣದ ಬಿಜಿಎಸ್ ವೃತ್ತದಲ್ಲಿರುವ ಬಸ್ ನಿಲ್ದಾಣದ ಪಕ್ಕ ನೂತನ ಇಂದಿರಾ ಕ್ಯಾಂಟೀನ್, ಶೌಚಾಲಯ, ಪುರಸಭೆಯ ನೂತನ ಕಟ್ಟಡ ಹಾಗೂ ನೆಲ್ಲಿಗುಡ್ಡ ಕೆರೆಯಲ್ಲಿ ಜಲಕ್ರೀಡೆಗಳಿಗೆ ಚಾಲನೆ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಿದರು&nbsp;</p></div>

ಬಿಡದಿ ಪಟ್ಟಣದ ಬಿಜಿಎಸ್ ವೃತ್ತದಲ್ಲಿರುವ ಬಸ್ ನಿಲ್ದಾಣದ ಪಕ್ಕ ನೂತನ ಇಂದಿರಾ ಕ್ಯಾಂಟೀನ್, ಶೌಚಾಲಯ, ಪುರಸಭೆಯ ನೂತನ ಕಟ್ಟಡ ಹಾಗೂ ನೆಲ್ಲಿಗುಡ್ಡ ಕೆರೆಯಲ್ಲಿ ಜಲಕ್ರೀಡೆಗಳಿಗೆ ಚಾಲನೆ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಿದರು 

   

ಬಿಡದಿ (ರಾಮನಗರ): ‘ಭಾರತದ ಉಕ್ಕಿನ ಮಹಿಳೆ ಎಂದು ಜನಪ್ರಿಯರಾಗಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ನೆನಪಿನಾರ್ಥ ಕಾಂಗ್ರೆಸ್ ಸರ್ಕಾರ ಆರಂಭಿಸಿರುವ ಇಂದಿರಾ ಕ್ಯಾಂಟೀನ್ ಬಡ ಜನರಿಗೆ ಆಸರೆಯಾಗಿದೆ. ಕಡಿಮೆ ದರದಲ್ಲಿ ಪೌಷ್ಠಿಕ ಆಹಾರ ಒದಗಿಸುವ ಮೂಲಕ ಈ ಕ್ಯಾಂಟೀನ್‌ಗಳು ಜನರ ಹಸಿವು ನೀಗಿಸುತ್ತಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅಭಿಪ್ರಾಯಪಟ್ಟರು.

ಪಟ್ಟಣದ ಬಿಜಿಎಸ್ ವೃತ್ತದಲ್ಲಿರುವ ಬಸ್ ನಿಲ್ದಾಣದ ಪಕ್ಕ ನೂತನ ಇಂದಿರಾ ಕ್ಯಾಂಟೀನ್, ಶೌಚಾಲಯ, ಪುರಸಭೆಯ ನೂತನ ಕಟ್ಟಡ ಹಾಗೂ ನೆಲ್ಲಿಗುಡ್ಡ ಕೆರೆಯಲ್ಲಿ ಜಲಕ್ರೀಡೆಗಳಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಕ್ಯಾಂಟೀನ್ ಆರಂಭದಿಂದ ಬಡವರು, ಕೂಲಿ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದರು.

ADVERTISEMENT

‘ಸ್ವಚ್ಚ ಭಾರತ್ ಮಿಷನ್‌ನಡಿ ₹15 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇಂದಿರಾ ಕ್ಯಾಂಟಿನ್ ಪಕ್ಕದಲ್ಲಿರುವ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ನಿಲ್ದಾಣದಲ್ಲೂ ನವೀಕೃತ ಶೌಚಾಲಯಗಳು ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಯಾಣಿಕರ ಅನುಕೂಲಕ್ಕೆ ಲೋಕಾರ್ಪಣೆ ಮಾಡಲಾಗಿದೆ’ ಎಂದು ಹೇಳಿದರು.

‘ಶಕ್ತಿ ಯೋಜನೆಯಡಿ ಸ್ಮಾರ್ಟ್ ಕಾರ್ಡ್ ವಿತರಿಸುವುದಕ್ಕೆ ನಾಲ್ಕೈದು ತಿಂಗಳು ಬೇಕು. ಅಲ್ಲಿಯವರೆಗೂ ಮಹಿಳಾ ಪ್ರಯಾಣಿಕರು ಆಧಾರ್ ಕಾರ್ಡ್ ಬಳಸಿಯೇ ಪ್ರಯಾಣಿಸಬೇಕು. ರಾಜ್ಯದಲ್ಲಿ ಒಟ್ಟು ಮೂರುವರೆ ಕೋಟಿ ಸ್ಮಾರ್ಟ್ ಕಾರ್ಡ್‌ಗಳನ್ನು ಮುದ್ರಿಸಬೇಕಿದೆ’ ಎಂದು ತಿಳಿಸಿದರು.

ಬಿಎಂಟಿಸಿ ವಿಸ್ತರಣೆ: ‘ರಾಜಧಾನಿ ಬೆಂಗಳೂರಿನಾಚೆ 40 ಕಿ.ಮೀ. ವ್ಯಾಪ್ತಿಯಲ್ಲಿ ಬಿಎಂಟಿಸಿ ಕಾರ್ಯಾಚರಣೆಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಗೆ ಇದರ ಪ್ರಯೋಜನ ಹೆಚ್ಚು ಸಿಗಲಿದೆ. ಅಲ್ಲದೆ, ಶಾಸಕ ಬಾಲಕೃಷ್ಣ ಅವರ ಬೇಡಿಕೆಯಂತೆ ಮಾಗಡಿ ಕ್ಷೇತ್ರದ ಕುದೂರಿನಲ್ಲಿ ಬಸ್ ಡಿಪೊ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ’ ಎಂದು ಹೇಳಿದರು.

ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ, ‘ಇಂದಿರಾ ಕ್ಯಾಂಟೀನ್ ಮತ್ತು ಶೌಚಾಲಯವು ಪಟ್ಟಣಕ್ಕೆ ಹೆಚ್ಚಿನ ಅಗತ್ಯವಿತ್ತು. ಅದನ್ನು ಮನಗಂಡು ಸರ್ಕಾರ ಕ್ಯಾಂಟೀನ್ ಮಂಜೂರು ಮಾಡಿತು. ಶೌಚಾಲಯ ನಿರ್ಮಾಣದಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಿದೆ’ ಎಂದರು.

‘ಪಟ್ಟಣದ ನೆಲ್ಲಿಗುಡ್ಡೆ ಕೆರೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಈಗ ಪ್ರವಾಸಿಗರಿಗಾಗಿ ಬೋಟಿಂಗ್ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಕೆರೆ ದಂಡೆಯಲ್ಲಿ ಸುಮಾರು ₹10 ಕೋಟಿ ವೆಚ್ಚದಲ್ಲಿ ನಡಿಗೆ ಪಥಗಳನ್ನು ನಿರ್ಮಾಣ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಕೈಗಾರಿಕಾ ಕೇಂದ್ರವೂ ಆಗಿರುವ ಬಿಡದಿಗೆ ಮೆಟ್ರೊ ರೈಲು ಸೇವೆ ವಿಸ್ತರಿಸುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. 2017ರಲ್ಲಿ ಪಟ್ಟಣಕ್ಕೆ ಯುಜಿಡಿ ಹಾಗೂ ಮಂಚನಬೆಲೆಯಿಂದ ಬಿಡದಿ ಭಾಗಕ್ಕೆ ಕುಡಿಯುವ ನೀರಿನ ವ್ಯವಸ್ಥೆಗೆ ಚಾಲನೆ ನೀಡಲಾಗಿತ್ತು. ವರ್ಷದೊಳಗೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ತಿಳಿಸಿದರು.

‘ಬಿಡದಿಗೆ ಕೆಪಿಎಸ್ ಶಾಲೆ ಮಂಜೂರಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಲಾಗಿದೆ. ಹೋಬಳಿ ವ್ಯಾಪ್ತಿಯಲ್ಲಿ ಉಪಗ್ರಾಮಗಳನ್ನಾಗಿ ನೋಂದಾಯಿಸಿ ಅಲ್ಲಿನ ಜನರಿಗೆ ಹಕ್ಕುಪತ್ರಗಳನ್ನು ವಿತರಿಸುವ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಆಯೋಜಿಸಲಾಗುವುದು’ ಎಂದು ಭರವಸೆ ನೀಡಿದರು.

ಬಿಡದಿಯ ನೆಲ್ಲಿಗುಡ್ಡ ಕೆರೆಯಲ್ಲಿ ಜಲಕ್ರೀಡೆಗಳಿಗೆ ಚಾಲನೆ ನೀಡಿದ ಸಚಿವ ರಾಮಲಿಂಗಾ ರೆಡ್ಡಿ ಅವರು ನಂತರ ಕೆರೆಯಲ್ಲಿ ಬೋಟಿಂಗ್ ನಡೆಸಿದರು ಶಾಸಕ ಬಾಲಕೃಷ್ಣ ಹಾಗೂ ಇತರರು ಸಾಥ್ ನೀಡಿದರು

ಬಿಡದಿ ಪೌರ ನೌಕರರ ಸಂಘದ ಅಧ್ಯಕ್ಷ ಚಲಪತಿ, ಮುಖ್ಯಾಧಿಕಾರಿ ಮೀನಾಕ್ಷಿ, ಎಂಜಿನಿಯರ್‌ಗಳಾದ ಶಿಲ್ಪಾ, ಶ್ಯಾಮ್ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು. ಅಂಗವಿಕಲರಿಗೆ ಹಾಗೂ ಎಸ್.ಟಿ ಸಮುದಾಯದ ಫಲಾನುಭವಿಗಳಿಗೆ ಜೀವ ವಿಮೆ ಬಾಂಡ್‌ಗಳನ್ನು ವಿತರಿಸಲಾಯಿತು.

ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್. ನಟರಾಜು ಗಾಣಕಲ್, ಬಿಡದಿ ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ ಎಚ್.ಆರ್.,ಉಪಾಧ್ಯಕ್ಷೆ ಆಯಿಷಾ, ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜ್, ಮುಖ್ಯಾಧಿಕಾರಿ ಮೀನಾಕ್ಷಿ, ಸದಸ್ಯರು, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶೇಖರ್ ಜಿ.ಡಿ, ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಗೌಡ, ಬಿಡದಿ ಪುರಸಭೆಯ  ವಿರೋಧ ಪಕ್ಷದ ನಾಯಕ ಸಿ. ಉಮೇಶ್ ಸೇರಿದಂತೆ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರು ಇದ್ದರು.

ಬಿಡದಿಯ ನೆಲ್ಲಿಗುಡ್ಡ ಕೆರೆ ರಸ್ತೆಗೆ ಸ್ಥಳಾಂತರಗೊಂಡಿರುವ ಪುರಸಭೆಯ ನೂತನ ಕಚೇರಿ
ರಾಜಧಾನಿ ಬೆಂಗಳೂರಿನಿಂದ 40 ಕಿ.ಮೀ. ವ್ಯಾಪ್ತಿಯವರೆಗೆ ಬಿಎಂಟಿಸಿ ಬಸ್‌ಗಳ ಕಾರ್ಯಾಚರಣೆ ವಿಸ್ತರಣೆಗೆ ಅನುಮೋದನೆ ನೀಡಲಾಗಿದೆ. ಸದ್ಯದಲ್ಲೇ ರಾಮನಗರಕ್ಕೆ ಬಿಎಂಟಿಸಿ ಬಸ್‌ ಸೇವೆ ವಿಸ್ತರಣೆಯಾಗಲಿದೆ
– ರಾಮಲಿಂಗಾ ರೆಡ್ಡಿ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ
ಬಿಡದಿ ಪಟ್ಟಣವು ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು ಭವಿಷ್ಯದ ಬೆಂಗಳೂರಾಗಿ ರೂಪುಗೊಳ್ಳುತ್ತಿದೆ. ಅದಕ್ಕೆ ಪೂರಕವಾಗಿ ಶಾಸಕ ಬಾಲಕೃಷ್ಣ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ
– ಎಸ್. ರವಿ ವಿಧಾನ ಪರಿಷತ್ ಸದಸ್ಯ

ಸಚಿವರಿಗೆ ಶಾಸಕರಿಂದ ವಿವಿಧ ಬೇಡಿಕೆ

  • ರೇಷ್ಮೆ ಇಲಾಖೆಯ ಜಾಗಕ್ಕೆ ಸ್ಥಳಾಂತರಗೊಂಡಿರುವ ಪುರಸಭೆ ಕಚೇರಿಯ ಈ ಜಾಗವನ್ನು ಪುರಸಭೆ ಕಚೇರಿ ಸಂಕೀರ್ಣಕ್ಕೆ ನೀಡಲು ಸಚಿವ ರೆಡ್ಡಿ ಅವರು ಸಹಕರಿಸಬೇಕು.‌ ಈ ಕುರಿತು ರೇಷ್ಮೆ ಸಚಿವರಿಗೂ ಸೂಚನೆ ನೀಡಬೇಕು.

  • ಬಿಡದಿ ಪಟ್ಟಣ ಅಭಿವೃದ್ಧಿ ಗಮನದಲ್ಲಿ ಇಟ್ಟುಕೊಂಡು ಪುರಸಭೆಯ ಕಚೇರಿಯನ್ನು ₹10 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಆಲೋಚನೆ ಇದೆ. ಅದಕ್ಕೆ ಸಚಿವರು ಅನುದಾನ ಒದಗಿಸಬೇಕು.

  • ಪಟ್ಟಣದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಿಕೊಡುವುದಾಗಿ ಟೊಯೋಟಾ ಕಿರ್ಲೋಸ್ಕರ್ ಕಂಪನಿಯವರು ಭರವಸೆ ನೀಡಿದ್ದಾರೆ. ಅದಕ್ಕೆ ಸಚಿವರು ಪಟ್ಟಣದಲ್ಲಿ ಜಾಗ ಒದಗಿಸಲು ಸಹಾಯ ಮಾಡಬೇಕು.

  • ವರ್ಷ ಪೂರೈಸಿರುವ ‘ಮೊಬೈಲ್ ಬಿಡಿ ಪುಸ್ತಕ ಹಿಡಿ’ ಅಭಿಯಾನದ ಕುರಿತು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಪ್ರಚಾರ ಮಾಡಲು ಕ್ರಮ ಕೈಗೊಳ್ಳಬೇಕು.

ಸಚಿವರು ಶಾಸಕರಿಂದ ಬೋಟಿಂಗ್
ನೆಲ್ಲಿಗುಡ್ಡೆ ಕೆರೆಯಲ್ಲಿ ಪೆಡಲ್ ಬೋಟ್ ಕಯಾಕಿಂಗ್ ಸೈಕಲಿಂಗ್ ಮೋಟಾರ್ ಬೋಟ್ ಹಾಗೂ ಸ್ಪೀಡ್ ಬೋಟ್ ಜಲಕ್ರೀಡೆಗಳಿಗೆ ಚಾಲನೆ ನೀಡಿದ ಸಚಿವ ರಾಮಲಿಂಗಾ ರೆಡ್ಡಿ ಅವರು ನಂತರ ಕೆರೆಯಲ್ಲಿ ಒಂದು ಸುತ್ತು ಬೋಟಿಂಗ್ ನಡೆಸಿದರು. ಶಾಸಕ ಬಾಲಕೃಷ್ಣ ವಿಧಾನ ಪರಿಷತ್ ಸದಸ್ಯ ಬಾಲಕೃಷ್ಣ ಗ್ಯಾರಂಟಿ ಅಧ್ಯಕ್ಷ ಕೆ. ರಾಜು ಜಿಬಿಡಿಎ ಅಧ್ಯಕ್ಷ ಜಿ.ಎನ್. ನಟರಾಜ್ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಪುರಸಭೆ ಸದಸ್ಯರು ಸೇರಿದಂತೆ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ಎಸ್ಕೇಪ್ ಟು ಎಕ್ಸ್‌ಪ್ಲೋರ್‌ ವ್ಯವಸ್ಥಾಪಕ ಸ್ವಾಮಿ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.