ADVERTISEMENT

ಮಾಗಡಿ | ಹೊಸ ರಾಗಿ ತಳಿ ಪರಿಚಯ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2023, 6:27 IST
Last Updated 1 ಆಗಸ್ಟ್ 2023, 6:27 IST
ಮಾಗಡಿ ತಾಲ್ಲೂಕಿನ ಹಕ್ಕಿನಾಳು ದತ್ತು ಗ್ರಾಮದಲ್ಲಿ ಕೆವಿಕೆ ವತಿಯಿಂದ ಹೊಸತಳಿ ರಾಗಿ ಪರಿಚಯ ಕಾರ್ಯಕ್ರಮಕ್ಕೆ ಡಾ.ಲತಾ.ಆರ್‌.ಕುಲಕರ್ಣಿ ಚಾಲನೆ ನೀಡಿದರು. ವಿಜ್ಞಾನಿಗಳಾದ ಡಾ.ದಿನೇಶ್‌, ಡಾ.ರಾಜೇಂದ್ರಪ್ರಸಾದ್‌, ಶಾಂತಬಾಲಗೊಂಡ, ಡಾ.ಸೌಜನ್ಯ ಹಾಗೂ ರೈತರು ಇದ್ದರು
ಮಾಗಡಿ ತಾಲ್ಲೂಕಿನ ಹಕ್ಕಿನಾಳು ದತ್ತು ಗ್ರಾಮದಲ್ಲಿ ಕೆವಿಕೆ ವತಿಯಿಂದ ಹೊಸತಳಿ ರಾಗಿ ಪರಿಚಯ ಕಾರ್ಯಕ್ರಮಕ್ಕೆ ಡಾ.ಲತಾ.ಆರ್‌.ಕುಲಕರ್ಣಿ ಚಾಲನೆ ನೀಡಿದರು. ವಿಜ್ಞಾನಿಗಳಾದ ಡಾ.ದಿನೇಶ್‌, ಡಾ.ರಾಜೇಂದ್ರಪ್ರಸಾದ್‌, ಶಾಂತಬಾಲಗೊಂಡ, ಡಾ.ಸೌಜನ್ಯ ಹಾಗೂ ರೈತರು ಇದ್ದರು    

ಮಾಗಡಿ: ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಿಂದ ಹೊಸರಾಗಿ ತಳಿ ಪರಿಚಯ ಕಾರ್ಯಕ್ರಮ ನಡೆಯಿತು. ‌

ಬೇಸಾಯ ಶಾಸ್ತ್ರದ ವಿಜ್ಞಾನಿ ಡಾ.ದಿನೇಶ್ ಎಸ್‌.ಎಂ.ಮಾತನಾಡಿ, ಜಿಲ್ಲೆಯಲ್ಲಿ ರಾಗಿ ಪ್ರಮುಖ ಆಹಾರ ಬೆಳೆ ರಾಗಿ.70,000 ಹೆಕ್ಟೇರ್‌ ಪ್ರದೇಶದಲ್ಲಿ ಜಿಲ್ಲೆಯಾದ್ಯಂತ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರಮುಖವಾಗಿ ದೀರ್ಘಾವಧಿ ತಳಿಗಳಾದ ಎಂ.ಆರ್.-1 ಮತ್ತು ಎಂ.ಆರ್.-6 ತಳಿ ಮುಂಗಾರು ಹಂಗಮಿನಲ್ಲಿ ಜೂನ್-ಜುಲೈ ತಿಂಗಳಿನಲ್ಲಿ ಬಿತ್ತನೆ ಮಾಡಲಾಗುತ್ತದೆ. ಆದರೆ, ಪ್ರಸ್ತುತ ವರ್ಷ ಮುಂಗಾರು ಮಳೆ ಬೀಳುವ ಪ್ರಮಾಣದಲ್ಲಿ ವ್ಯತ್ಯಾಸವಾಗಿರುವುದರಿಂದ ಹಾಗೂ ಜುಲೈ ತಿಂಗಳಿನಲ್ಲಿ ಮಳೆ ಕೊರತೆ ಹೆಚ್ಚಾಗಿರುವುದರಿಂದ ದೀರ್ಘಾವಧಿ ತಳಿಗಳ ಬಿತ್ತನೆ ತಡವಾಗುತ್ತಿದೆ ಎಂದರು.

ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ಆಗಸ್ಟ್ ಮೊದಲ ಮತ್ತು ಎರಡನೇ ವಾರದ ಬಿತ್ತನೆಗೆ ಸೂಕ್ತವಾದ ಕೆ.ಎಂ.ಆರ್ 316 ತಳಿಯನ್ನು ಕೃಷಿ ವಿಜ್ಞಾನ ಕೇಂದ್ರದ ದತ್ತು ಗ್ರಾಮವಾದ ತಾಲ್ಲೂಕಿನ ಹಕ್ಕಿನಾಳು ಗ್ರಾಮದ 50 ಜನ ರೈತರಿಗೆ ಸೂಕ್ತವಾಗುವಂತೆ ಪ್ರಾತ್ಯಕ್ಷಿಕೆ ಮೂಲಕ ಪರಿಚಯಿಸಲಾಯಿತು ಎಂದು ತಿಳಿಸಿದರು.

ADVERTISEMENT

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ.ಲತಾ ಆರ್.ಕುಲಕರ್ಣಿ ಮಾತನಾಡಿ, ತೊಗರಿಯಲ್ಲಿ ನೂತನ ತಳಿ ಬಿ.ಆರ್.ಜಿ.-3, ಅವರೆಯಲ್ಲಿ ಹೆಬ್ಬಾಳ ಅವರೆ-5, ಮೇವಿನ ಬೆಳೆಗಳಾದ ಸಿ.ಓ.ಎಫ್.ಎಸ್.-31, ಸೂಪರ್ ನೇಪಿಯರ್ ಮತ್ತು ಹಲವು ಸುಧಾರಿತ ಬೆಳೆಗಳ ಬಗ್ಗೆ ಉಪನ್ಯಾಸ ನೀಡಲಾಯಿತು ಎಂದರು.

ರಾಗಿ ಬೆಳೆಯ ಸುಧಾರಿತ ಬೇಸಾಯ ಕ್ರಮ ಕುರಿತು ವಿಜ್ಞಾನಿ ದಿನೇಶ್‌, ರಾಗಿ ಬಿತ್ತನೆ ಮಾಡುವ ಪದ್ಧತಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಕೇಂದ್ರದ ವಿಜ್ಞಾನಿ ಡಾ.ರಾಜೇಂದ್ರಪ್ರಸಾದ್, ಸಸ್ಯಸಂರಕ್ಷಣೆ ಕುರಿತು ವಿವರಿಸಿದರು. ವಿಸ್ತರಣಾ ವಿಜ್ಞಾನಿ ಡಾ.ಸೌಜನ್ಯ, ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಸಿ ಕೊಡುವ ವಿವಿಧ ತರಬೇತಿಗಳ ಮಾಹಿತಿ ನೀಡಿದರು.

ವಿಜ್ಞಾನಿಗಳಾದ ಡಾ.ದೀಪಾ ಪೂಜಾರ, ಶಾಂತ ಬಾಲಗೊಂಡ, ಹಕ್ಕಿನಾಳು ಕ್ಷೇತ್ರ ಪರಿವೀಕ್ಷಕ ಹರಿಪ್ರಸಾದ್ ಮತ್ತು ಹಕ್ಕಿನಾಳು ಗ್ರಾಮದ 50ಕ್ಕೂ ಹೆಚ್ಚಿನ ರೈತರು ಭಾಗವಹಿಸಿದ್ದರು.

ಮಾಗಡಿ ತಾಲ್ಲೂಕಿನ ಹಕ್ಕಿನಾಳು ದತ್ತುಗ್ರಾಮದಲ್ಲಿ ಕೆವಿಕೆ ಮುಖ್ಯಸ್ಥೆ ಡಾ.ಲತಾ.ಆರ್‌.ಕುಲಕರ್ಣಿ ಹೊಸತಳಿಯ ಬಿತ್ತನೆರಾಗಿ ವಿತರಿಸಿದರು. ವಿಜ್ಞಾನಿಗಳು ಹಾಗೂ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.