ADVERTISEMENT

ರಾಮನಗರ: ಮೂರು ದಶಕದಿಂದ ಕಲಾ ಸೇವೆ; ಸಿದ್ದರಾಜಯ್ಯಗೆ ಜಾನಪದ ಅಕಾಡೆಮಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 15:38 IST
Last Updated 23 ಡಿಸೆಂಬರ್ 2025, 15:38 IST
<div class="paragraphs"><p>ಬಿ. ಸಿದ್ದರಾಜಯ್ಯ</p></div>

ಬಿ. ಸಿದ್ದರಾಜಯ್ಯ

   

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಹೊನ್ನಿಗನಹಳ್ಳಿ ಗ್ರಾಮದ ಜಾನಪದ ಗಾಯಕ ಬಿ. ಸಿದ್ದರಾಜಯ್ಯ ಅವರು ಕರ್ನಾಟಕ ಜಾನಪದ ಅಕಾಡೆಮಿಯ– 2025ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬಸವಯ್ಯ‌‌ ಮತ್ತು ವೆಂಕಟಮ್ಮ ದಂಪತಿ ಪುತ್ರನಾದ ಸಿದ್ದರಾಜಯ್ಯ ಅವರು, ಸೋಬಾನೆ ಕಲಾವಿದರಾಗಿದ್ದ ತಮ್ಮ ತಾಯಿ ಮತ್ತು ಅಕ್ಕಂದಿರಿಂದ ಪ್ರೇರಣೆಗೊಂಡು ಶಾಲಾ ದಿನಗಳಿಂದಲೇ ಗಾಯನದತ್ತ ವಾಲಿದರು. ನಂತರ ಜಾನಪದ ಡಿಪ್ಲೋಮಾ ಪದವಿ ಸಹ ಪಡೆದು ಗಾಯನ ಯಾನ ಮುಂದುವರಿಸಿದರು.

ADVERTISEMENT

‘ಹಾಡು ಹಕ್ಕಿ’ ಎಂದೇ ಪರಿಚಿತವಾಗಿರುವ ಸಿದ್ದರಾಜಯ್ಯ ರಾಜ್ಯವಷ್ಟೇ ಅಲ್ಲದೆ ದೆಹಲಿ, ಹರಿಯಾಣ, ಗೋವಾ, ಕೇರಳ, ಬಿಹಾರ, ಅಸ್ಸಾಂ ಸೇರಿದಂತೆ ದೇಶದ ಹಲವೆಡೆ ಜಾನಪದ ಮತ್ತು ಸುಗಮ ಸಂಗೀತ ಕಾರ್ಯಕ್ರಮವನ್ನು ಸಿದ್ದರಾಜಯ್ಯ ನಡೆಸಿ ಕೊಟ್ಟಿದ್ದಾರೆ. ಅವರು ಸಂಗೀತ ಮತ್ತು ನಾಟಕ ವಿಭಾಗದಲ್ಲಿ ನೋಂದಾಯಿತ ‘ಬಿ’ ಗ್ರೇಡ್‌ ಕಲಾವಿದ ಕೂಡ.

ಮೈಸೂರು ಆಕಾಶವಾಣಿ, ದೂರದರ್ಶನ ಚಂದನ ವಾಹಿನಿಯ ‘ಮಧುರ ಮಧುರವೀ ಮಂಜುಳ ಗಾನ’ ಕಾರ್ಯಕ್ರಮ ಸೇರಿದಂತೆ ಟಿ.ವಿ ಷೋಗಳಲ್ಲೂ ಸಿದ್ದರಾಜಯ್ಯ ಅವರು ತಮ್ಮ ಕಂಠಸಿರಿ ಮೂಲಕ ಪರಿಚಿತರು. ದಸರಾ, ಹಂಪಿ ಉತ್ಸವ ಸೇರಿದಂತೆ ರಾಜ್ಯದ ವಿವಿಧೆಡೆ ನಡೆಯುವ ಬಹುತೇಕ ಉತ್ಸಗಳಲ್ಲಿ ಅವರು ಹಾಡಿದ್ದಾರೆ. ನಾಡಿನ ಮೇರು ಗಾಯಕರ ಜೊತೆ ವೇದಿಕೆ ಹಂಚಿಕೊಂಡು ಗಾಯನದ ಔತಣ ನೀಡಿದ್ದಾರೆ.

ಮೂರು ದಶಕದಿಂದ ಗಾಯನದಲ್ಲಿ ತೊಡಗಿಸಿಕೊಂಡಿರುವ ಸಿದ್ದರಾಜಯ್ಯ ಅವರ ಕಲಾ ಸೇವೆಗೆ ದೇವರಾಜು ಅರಸು ಪ್ರಶಸ್ತಿ, ಸುವರ್ಣ ಕರ್ನಾಟಕ ಪದ್ಮವಿಭೂಷಣ ಪ್ರಶಸ್ತಿ, ರಾಮನಗರ ರತ್ನ ಪ್ರಶಸ್ತಿ, ತಾಲೂಕು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.

ಜಾನಪದ ಕಲೆಯನ್ನು ಉಳಿಸಿ –ಬೆಳೆಸುವುದಕ್ಕಾಗಿ ಸಿದ್ದರಾಜಯ್ಯ ಅವರು, ತರಂಗ ಜಾನಪದ ಟ್ರಸ್ಟ್ ಎಂಬ ಸಂಸ್ಥೆ ಕಟ್ಟಿಕೊಂಡು ಕಳೆದ 12 ವರ್ಷಗಳಿಂದ ಕಲಾ ಸೇವೆಯಲ್ಲಿ ತೊಡಗಿದ್ದಾರೆ. ಎಲೆಮರೆ ಕಾಯಿಯಂತಿರುವ ಕಲಾವಿದರನ್ನು ಗುರುತಿಸಿ ಅವರಿಗೆ ವೇದಿಕೆ ಒದಗಿಸುವ ಕೆಲಸ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.