ADVERTISEMENT

ಮೊಟ್ಟೆ ಎಸೆದವರಿಗೆ ಶಿಕ್ಷೆಯಾಗಲಿ: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 4:11 IST
Last Updated 3 ಅಕ್ಟೋಬರ್ 2022, 4:11 IST
ಸಿಪಿವೈ ಕಾರಿನ ಮೇಲೆ ಮೊಟ್ಟೆ ಎಸೆದಿರುವದನ್ನು ಖಂಡಿಸಿ ರಾಜೇಶ್‌ ಮಾತನಾಡಿದರು,ಮಂಜುನಾಥ್‌, ಕುಮಾರಸ್ವಾಮಿ ಪ್ರದೀಪ್‌, ನಾಗರಾಜು ಉಪಸ್ಥಿತರಿದ್ದರು
ಸಿಪಿವೈ ಕಾರಿನ ಮೇಲೆ ಮೊಟ್ಟೆ ಎಸೆದಿರುವದನ್ನು ಖಂಡಿಸಿ ರಾಜೇಶ್‌ ಮಾತನಾಡಿದರು,ಮಂಜುನಾಥ್‌, ಕುಮಾರಸ್ವಾಮಿ ಪ್ರದೀಪ್‌, ನಾಗರಾಜು ಉಪಸ್ಥಿತರಿದ್ದರು   

ಕನಕಪುರ: ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್ ಅವರ ಕಾರಿನ ಮೇಲೆ ಮೊಟ್ಟೆ ಮತ್ತು ಕಲ್ಲು ತೂರಿರುವುದು ಖಂಡನೀಯ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಜರುಗಿಸಬೇಕೆಂದು ಕನಕಪುರ ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್, ‘ಜಿಲ್ಲೆಯಲ್ಲಿ ಬಿಜೆಪಿ ಬಲವರ್ಧನೆಗೊಳ್ಳುತ್ತಿರುವುದು ಕಂಡು ಜೆಡಿಎಸ್ ಮತ್ತು ಕಾಂಗ್ರೆಸ್‌ ಪಾಳಯದಲ್ಲಿ ತಳಮಳ ಶುರುವಾಗಿದೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ರಾಮನಗರಕ್ಕೆ ಆಗಮಿಸಿದ್ದ ವೇಳೆ ಕಾಂಗ್ರೆಸ್‌ನವರು ಗದ್ದಲ ಮಾಡಿದ್ದರು. ಈಗ ಚನ್ನಪಟ್ಟಣದಲ್ಲಿ ಜೆಡಿಎಸ್‌ನವರು ಗಲಾಟೆ ಮಾಡಿದ್ದಾರೆ’ ಎಂದು ಹೇಳಿದರು.‌

‘ಯೋಗೇಶ್ವರ್ ಅವರು ಚನ್ನಪಟ್ಟಣದಲ್ಲಿ ಮಳೆ ಹಾನಿ, ಪ್ರವಾಹದಿಂದ ಹಾನಿ ಒಳಗಾಗಿದ್ದ ರೈತರಿಗೆ ಹಾಗೂ ಅಭಿವೃದ್ಧಿಗೆ ವಿಶೇಷ ಪರಿಹಾರದಡಿ ಮುಖ್ಯಮಂತ್ರಿಗಳಿಂದ ₹50 ಕೋಟಿ ಹಣ ತಂದಿದ್ದಾರೆ. ಅದನ್ನು ಸಹಿಸದೆ ಜೆಡಿಎಸ್‌ನವರು ಗಲಾಟೆ ಮಾಡಿಸಿದ್ದಾರೆ’ ಎಂದು ದೂರಿದರು.

ADVERTISEMENT

‘ಬಿಜೆಪಿ ಪಕ್ಷ ಬಲವರ್ಧನೆಗೊಳ್ಳುವುದು ಮತ್ತು ಕ್ಷೇತ್ರದ ಅಭಿವೃದ್ಧಿ ಸಹಿಸಿದ ಎರಡೂ ಪಕ್ಷದವರು ಹತಾಶೆಯಿಂದ ಈ ಕೃತ್ಯ ಮಾಡಿಸುತ್ತಿದ್ದಾರೆ’ ಎಂದು ಹೇಳಿದರು.

‘ಅಭಿವೃದ್ಧಿಗೆ ಅಡ್ಡಿಪಡಿಸುತ್ತಿರುವ ಜೆಡಿಎಸ್‌ ಮತ್ತು ಕಾಂಗ್ರೆಸ್ಸಿಗರು ಸರ್ಕಾರದ ಮೇಲೆ ಒತ್ತಡ ತಂದು ಅವರು ಅಭಿವೃದ್ಧಿ ಕಾರ್ಯ ಮಾಡಲಿ, ಸಂತ್ರಸ್ತ ಜನರಿಗೆ ಪರಿಹಾರ ನೀಡಲಿ. ಅಭಿವೃದ್ಧಿಗೆ ಸರ್ಕಾರದ ಜೊತೆ ಕೈಜೋಡಿಸುವುದನ್ನು ಬಿಟ್ಟು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಮುಖಂಡರಾದ ರಾಜೇಶ್, ಕುಮಾರಸ್ವಾಮಿ, ನಾಗರಾಜು, ಪ್ರದೀಪ್, ಕಾಂತರಾಜು‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.