
ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಬುಧವಾರ ಕೆಡಿಪಿ ಸಭೆ ನಡೆಯಿತು.
ರಾಮನಗರ: ‘ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಕಾಮಗಾರಿಗಳ ಪ್ರಗತಿ ಹಾಗೂ ಸಮಸ್ಯೆಗಳ ಕುರಿತು ನ. 10ರಂದು ವಿಸ್ತೃತವಾಗಿ ಚರ್ಚೆ ನಡೆಸಲಾಗುವುದು. ಕಾಮಗಾರಿಗಳಲ್ಲಿನ ಸಮಸ್ಯೆಗಳು, ಪರಿಹಾರ ಕ್ರಮಗಳು, ಬಿಡುಗಡೆಯಾದ ಅನುದಾನ, ಬಳಕೆ ಮೊತ್ತ ಸೇರಿದಂತೆ ಎಲ್ಲಾ ವಿಷಯಗಳನ್ನು ಚರ್ಚಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಜೆಜೆಎಂ ಕಾಮಗಾರಿಗಳ ಕುರಿತು ಸವಿವರವಾಗಿ ಚರ್ಚಿಸಲು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕೆಡಿಪಿ ಸಮಿತಿ ಸದಸ್ಯರು ಸಹ ಸಭೆಗೆ ಹಾಜರಾಗಬೇಕು’ ಎಂದರು.
‘ಕೃಷಿ ಚಟುವಟಿಕೆಗೆ ಹಿನ್ನಡೆಯಾಗದಂತೆ ಇಲಾಖೆ ನೋಡಿಕೊಳ್ಳಬೇಕು. ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ಗೊಬ್ಬರ ಪೂರೈಕೆ ಆಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಯಾವುದೇ ಸಮಸ್ಯೆಗಳು ಎದುರಾಗಬಾರದಂತೆ ಎಚ್ಚರಿಕೆ ವಹಿಸಬೇಕು. ಮಳೆಗೆ ಬೆಳೆ ಹಾನಿಯಾಗಿರುವ ಕುರಿತು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ನಿಗದಿತ ಅವಧಿಯೊಳಗೆ ಪರಿಹಾರ ವಿತರಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.
‘ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸಂಬಂಧಿಸಿ ಸಚಿವರೊಂದಿಗೆ ಚರ್ಚಿಸಲಾಗುವುದು. ಮೀನುಗಾರಿಕೆ ಇಲಾಖೆಯೇ ಕೆರೆಗಳಿಗೆ ಮೀನು ಮರಿಗಳನ್ನು ಬಿಟ್ಟು, ಅವುಗಳನ್ನು ಪೋಷಿಸಿ ಮಾರಾಟ ಮಾಡುವ ಬಗ್ಗೆ ಚಿಂತನೆ ನಡೆಸಬೇಕು. ಜಿಲ್ಲಾ ಕೇಂದ್ರದಲ್ಲಿ ಮೀನು ಮಾರಾಟ ಕೇಂದ್ರವನ್ನು ಸ್ಥಾಪಿಸಲು ಕ್ರಮ ವಹಿಸಬೇಕು’ ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರಿಗೆ ಸಲಹೆ ನೀಡಿದರು.
‘ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಕೊಳವೆಬಾವಿ ಕೊರೆಯಲು ಕೊಟ್ಟಿರುವ ಪಟ್ಟಿಗೆ ಜಿಲ್ಲಾಧಿಕಾರಿಯಿಂದ ಅನುಮೋದನೆ ಪಡೆದು ಸಲ್ಲಿಸಿದರಲ್ಲಿ ಸಂಬಂಧಿಸಿದ ಸಚಿವರ ಜೊತೆ ಚರ್ಚಿಸಿ ಪಟ್ಟಿಗೆ ಒಪ್ಪಿಗೆ ಪಡೆಯಸಲಾಗುವುದು. ಅಕ್ರಮ ವಿದ್ಯುತ್ ಸಂಪರ್ಕ ತಡೆಗೆ ಬೆಸ್ಕಾಂ ಜನರಲಿ ಜಾಗೃತಿ ಮೂಡಿಸಬೇಕು. ವಿದ್ಯುತ್ ಕಳ್ಳತನದ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.
‘ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವ್ಯಾಪ್ತಿಯಲ್ಲಿರುವ ಜಿಮ್ ನವೀಕರಣಕ್ಕೆ ಕ್ರಮ ವಹಿಸಬೇಕು. ಅನುದಾನ ಲಭ್ಯವಿದ್ದಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಜಿಮ್ ಸ್ಥಾಪನೆಗೆ ಕ್ರಮ ವಹಿಸಬೇಕು’ ಎಂದು ಸೂಚಿಸಿದರು.
ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಎಸ್. ಗಂಗಾಧರ್ ಮಾತನಾಡಿ, ‘ಮೂರು ತಿಂಗಳಿಗೊಮ್ಮೆ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಲೇಬೇಕು. ಇಲ್ಲದಿದ್ದರೆ ಆರೋಗ್ಯ ಸಚಿವರಿಗೆ ದೂರು ನೀಡಲಾಗುವುದು. ಅನುದಾನ ಲಭ್ಯವಿದ್ದರೂ ರಕ್ಷಾ ಸಮಿತಿ ಸಭೆ ನಡೆಸದಿದ್ದರೆ ಅದು ನಿರ್ವಹಣೆ ಕೊರತೆಯಲ್ಲವೆ? ಅದಕ್ಕೆ ಡಿಎಚ್‌ಒ ಅವಕಾಶ ನೀಡಬಾರದು’ ಎಂದು ಎಚ್ಚರಿಕೆ ನೀಡಿದರು. ಅದಕ್ಕೆ ಸಚಿವರೂ ದನಿಗೂಡಿಸಿದರು.
ಆನೆ ಕಾರ್ಯಪಡೆ ಸಿಬ್ಬಂದಿಗೆ ಇದೇ ಸಂದರ್ಭದಲ್ಲಿ ಸಚಿವರು ಕಿಟ್ ವಿತರಿಸಿದರು. ಶಾಸಕ ಸಿ.ಪಿ. ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ರಾಮೋಜಿಗೌಡ, ಬೆಂಗಳೂರು ವಿಭಾಗದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಸೂರಜ್ ಹೆಗಡೆ, ಜಿಲ್ಲಾ ಅಧ್ಯಕ್ಷ ಕೆ. ರಾಜು, ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿ.ಪಂ. ಸಿಇಒ ಅನ್ಮೋಲ್ ಜೈನ್, ಉಪ ಕಾರ್ಯದರ್ಶಿ ಧನರಾಜ್, ಸಿಪಿಒ ಚಿಕ್ಕಸುಬ್ಬಯ್ಯ, ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಹಾಗೂ ಇತರರು ಇದ್ದರು.
ಗ್ರಾಮ ಲೆಕ್ಕಿಗರನ್ನು ಡಿಸಿ ವರ್ಗಾವಣೆ ಮಾಡಿದರೆ ಅದಕ್ಕೆ ತಡೆಯಾಜ್ಞೆ ತರುವುದು ಹೆಚ್ಚಾಗಿದೆ. ಐಎಎಸ್ ಅಧಿಕಾರಿ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ. ಉತ್ತಮ ಆಡಳಿತಕ್ಕಾಗಿ ಅವರು ವರ್ಗಾವಣೆ ಮಾಡುತ್ತಾರೆ ಎಂಬುದನ್ನು ಎಲ್ಲರೂ ಅರಿಯಬೇಕುಎಚ್.ಎ. ಇಕ್ಬಾಲ್ ಹುಸೇನ್ ಶಾಸಕ
ಬೀದಿ ನಾಯಿಗಳ ಹಾವಳಿಯಿಂದಾಗಿ ಚಿರತೆಗಳು ಊರುಗಳತ್ತ ಬರುವುದು ಹೆಚ್ಚಾಗಿದೆ. ನಾಯಿಗಳನ್ನು ನಿಯಂತ್ರಿಸದಿದ್ದರೆ ಚಿರತೆಗಳು ಕಾಡಿನಲ್ಲಿ ಬೇಟೆಯಾಡುವುದನ್ನು ಮರೆತು ಬಿಡುತ್ತವೊ ಎಂಬ ಆತಂಕ ಶುರುವಾಗಿದೆರಾಮಕೃಷ್ಣಪ್ಪ ಡಿಸಿಎಫ್ ಅರಣ್ಯ ಇಲಾಖೆ
ಬಿಸಿಎಂ ಹಾಸ್ಟೆಲ್‌ಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಇರಬೇಕೆಂಬ ನಿಯಮವಿದೆ. ಆದರೆ ಬಹುತೇಕ ಹಾಸ್ಟೆಲ್‌ಗಳಲ್ಲಿಲ್ಲ. ಕಡಿಮೆ ವಿದ್ಯಾರ್ಥಿಗಳಿದ್ದರೂ ಶೇ 100ರಷ್ಟು ವಿದ್ಯಾರ್ಥಿಗಳಿದ್ದಾರೆ ಎಂದು ತೋರಿಸಿ ಆಹಾರ ಧಾನ್ಯ ಲೂಟಿ ಹೊಡೆಯಲಾಗುತ್ತಿದೆಗುರುಮೂರ್ತಿ ಕೆಡಿಪಿ ಸದಸ್ಯ
‘ಪ್ರವಾಸೋದ್ಯಮ ಉತ್ತೇಜನಕ್ಕೆ ಕ್ರಮ’
ಜಿಲ್ಲೆಗೆ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವುದ್ಕಕಾಗಿ ಪ್ರವಾಸಿ ಕೇಂದ್ರಗಳನ್ನು ಉತ್ತೇಜಿಸಲು ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಟಿಪ್ಪಣಿಯನ್ನು ಇಲಾಖೆಯ ಸಹಾಯಕ ನಿರ್ದೇಶಕರು ನೀಡಬೇಕು. ಅಗತ್ಯ ಕ್ರಮಗಳ ಕುರಿತು ಪ್ರವಾಸೋದ್ಯಮ ಸಚಿವರೊಂದಿಗೆ ಮಾತನಾಡಿ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲಾಗುವುದು. ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಉದ್ಯೋಗ ಸೃಷ್ಟಿ ಜೊತೆಗೆ ಹೋಟೆಲ್ ಸೇರಿದಂತೆ ಇತರ ಉದ್ಯಮಗಳಿಗೂ ಅನುಕೂಲವಾಗಲಿದೆ’ ಎಂದು ಸಚಿವ ರೆಡ್ಡಿ ಹೇಳಿದರು.
‘ಅಧಿಕಾರಿಯಾಗಲು ನಾಲಾಯಕ್; ಗೊತ್ತಿಲ್ಲ ಎನ್ನುವುದು ತರವಲ್ಲ’
ಮಣ್ಣಿನಲ್ಲಿ ಗೋಧಿ ಮುಚ್ಚಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಎಂ ಹಾಸ್ಟೆಲ್ ವಾರ್ಡನ್ ಅಮಾನತು ಪ್ರಕರಣ ಹಾಗೂ ಬಿಸಿಎಂ ತಾಲ್ಲೂಕು ಅಧಿಕಾರಿ ವಿರುದ್ಧ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಾಗಿರುವುದು ಸಭೆಯಲ್ಲಿ ಗಮನ ಸೆಳೆಯಿತು. ಆ ಕುರಿತು ಕೆಡಿಪಿ ಸದಸ್ಯ ಗುರುಮೂರ್ತಿ ಪ್ರಸ್ತಾಪಿಸಿದರು. ಆಗ ಶಾಸಕ ಹುಸೇನ್ ಮತ್ತು ಪರಿಷತ್ ಸದಸ್ಯ ಸುಧಾಮ್ ದಾಸ್ ಅವರು ಪ್ರಕರಣ ಕುರಿತು ಬಿಸಿಎಂ ಜಿಲ್ಲಾ ಅಧಿಕಾರಿ ಬಿಲಾಲ್ ಅವರನ್ನು ಕೇಳಿದಾಗ ನನಗೆ ಗೊತ್ತಿಲ್ಲ ಎಂದರು. ಅದಕ್ಕೆ ಕೆರಳಿದ ಹುಸೇನ್ ಹುಸೇನ್ ‘ನೀವು ಜಿಲ್ಲಾ ಮಟ್ಟದ ಅಧಿಕಾರಿಯಾಗಿರಲು ಲಾಯಕ್ ಇಲ್ಲ. ನಿಮ್ಮ ಇಲಾಖೆ ಬಗ್ಗೆ ಒಂದು ತಿಂಗಳಿಂದ ದಿನಪತ್ರಿಕೆ ಮತ್ತು ನ್ಯೂಸ್ ಚಾನೆಲ್‌ಗಳಲ್ಲಿ ಬರುತ್ತಿದ್ದರೂ ಗೊತ್ತಿಲ್ಲವೇ? ಮೊದಲು ಅದನ್ನು ಗಮನಿಸಿ’ ಎಂದರು. ಅದಕ್ಕೆ ದನಿಗೂಡಿಸಿದ ಸುಧಾಮ್ ‘ನಿಮ್ಮ ಇಲಾಖೆ ಬೆಳವಣಿಗೆಗಳ ಬಗ್ಗೆ ಗೊತ್ತಿಲ್ಲ ಎನ್ನುವುದು ನಿಮ್ಮ ಹುದ್ದೆಗೆ ತರವಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.