
ಕನಕಪುರ: ಸಾತನೂರು ಕಬ್ಬಾಳು ರಸ್ತೆಯ ರಾಮೇಗೌಡನದೊಡ್ಡಿ ಗ್ರಾಮದ ಬಳಿ ಮಂಗಳವಾರ ರಾತ್ರಿ ಆಟೊ ರಿಕ್ಷಾ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಆಟೊದಲ್ಲಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆಟೊದಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರು ಮಲ್ಲೇಶ್ವರದ ನಿವಾಸಿ ಲೋಕೇಶ್ (48) ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ. ಲೋಕೇಶ್ ಸ್ನೇಹಿತರಾದ ಪ್ರದೀಪ್ ಮತ್ತು ಶಿವಕುಮಾರ್ ಗಾಯಗೊಂಡಿದ್ದಾರೆ.
ಲೋಕೇಶ್ ಸ್ನೇಹಿತರಾದ ಪ್ರದೀಪ್ ಮತ್ತು ಶಿವಕುಮಾರ್ ಜೊತೆ ಆಟೊದಲ್ಲಿ ಬೆಂಗಳೂರಿನಿಂದ ಮಂಗಳವಾರ ಬೆಳಗ್ಗೆ ಕನಕಪುರ ತಾಲ್ಲೂಕಿನ ಕಬ್ಬಾಳಮ್ಮ ದೇವಾಲಯಕ್ಕೆ ಬಂದಿದ್ದರು.
ದೇವಾಲಯ ದರ್ಶನ ಮುಗಿಸಿಕೊಂಡು ರಾತ್ರಿ ಆಟೊದಲ್ಲಿ ಚನ್ನಪಟ್ಟಣ ಮಾರ್ಗವಾಗಿ ಮರಳುವಾಗ ರಾಮೇಗೌಡನದೊಡ್ಡಿ ಎದುರಿನಿಂದ ಬಂದ ಕಾರು ಕಾರು ಆಟೊಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಆಟೊ ನಜ್ಜು ಗುಜ್ಜಾಗಿದ್ದು ಅದರಲ್ಲಿದ್ದ ಲೋಕೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಜೊತೆಯಲಿದ್ದ ಪ್ರದೀಪ್ ಮತ್ತು ಶಿವಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ಸಾತನೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಲಿಸರು ಎರಡೂ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.