ಕನಕಪುರ: ಪಟ್ಟಣದ ಮೇಗಳಬೀದಿಯಲ್ಲಿ 90 ವರ್ಷದ ವೃದ್ಧ ಕೋವಿಡ್‌ಗೆ ಬಲಿಯಾಗಿದ್ದಾರೆ. ತಾಲ್ಲೂಕಿನಲ್ಲಿ 4 ಮಂದಿ ಕೊರೊನಾ ಸೋಂಕಿತರಿದ್ದು, ಇವರಲ್ಲಿ ಸೋಂಕಿನಿಂದ ಮೃತಪಟ್ಟ ಮೊದಲ ಪ್ರಕರಣ ಇದಾಗಿದೆ.
ಬಾಣಂತಮಾರಮ್ಮ ಬಡಾವಣೆ ಹತ್ತಿರದ ಪುಟ್ಟಶೆಟ್ಟಿ ಬೀದಿ ಮತ್ತು ಸಿಂಗ್ರಿಶೆಟ್ಟಿ ಬೀದಿಯನ್ನು 28 ದಿನಗಳ ಕಾಲ ಸೀಲ್‌ಡೌನ್ ಮಾಡಲಾಗಿದೆ.ಸೀಲ್‌ಡೌನ್ ಪ್ರದೇಶದಲ್ಲಿ 61 ಮನೆಗಳಿದ್ದು 220 ಮಂದಿ ಇದ್ದಾರೆ.ಇಷ್ಟು ಕುಟುಂಬಗಳಿಗೆ ನಗರಸಭೆ ವತಿಯಿಂದ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.
ಇದರ ಜತೆಗೆ ಮೃತಪಟ್ಟವರಿಗೆ ಸೇರಿದ್ದ ಬೂದಿಕೇರಿಯಲ್ಲಿದ್ದ ಅಂಗಡಿಯನ್ನು 28 ದಿನಗಳ ಕಾಲ ಸೀಲ್‌ಡೌನ್ ಮಾಡಲಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ವ್ಯಕ್ತಿಯ ನೇರ ಸಂಪರ್ಕದಲ್ಲಿದ್ದವರನ್ನು ಪತ್ತೆಹಚ್ಚಿ ಕ್ವಾರಂಟೈನ್ ಕೇಂದ್ರಕ್ಕೆ ಸೇರಿಸಲಾಗಿದೆ.
ಮತ್ತೊಂದು ಪ್ರಕರಣ ದೃಢ:ತಾಲ್ಲೂಕಿನ ಮರಳವಾಡಿ ಹೋಬಳಿ ದೊಡ್ಡಸಾದೇನಹಳ್ಳಿ ಗ್ರಾಮದಲ್ಲಿ 60 ವರ್ಷದ ವೃದ್ಧರೊಬ್ಬರಿಗೆ ಕೋವಿಡ್ ಇರುವುದು ಬುಧವಾರ ದೃಢಪಟ್ಟಿದೆ.
ಇವರು ಕಿಡ್ನಿ ವೈಪಲ್ಯದಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸುತ್ತಿದ್ದರು. ಅವರಲ್ಲಿ ಉಸಿರಾಟ ತೊಂದರೆ ಕಾಣಿಸಿಕೊಂಡಿದ್ದರಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲೇ ಕೊರೊನಾ ಪರೀಕ್ಷೆಮಾಡಲಾಗಿತ್ತು.ಅದರಲ್ಲಿ ಕೊರೊನಾ ಪಾಸಿಟಿವ್ ಬಂದಿರುವುದಾಗಿ ತಾಲ್ಲೂಕು ಆರೋಗ್ಯ ಇಲಾಖೆ ಖಚಿತಪಡಿಸಿದೆ.
ಬುಧವಾರ ಸಂಜೆ ವೇಳೆಗೆ ದೊಡ್ಡಸಾದೇನಹಳ್ಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಸೋಂಕಿತರನ್ನು ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿದ್ದಾರೆ.ಗ್ರಾಮದ ಒಂದು ಬೀದಿಯನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ.
ಕೊರೊನಾ ಬಂದಿರುವುದರಿಂದ ಗ್ರಾಮದ ಜನರಲ್ಲಿ ಆತಂಕ ಸೃಷ್ಠಿಯಾಗಿದ್ದು, ರೈತರಿಂದ ಹಾಲು ಖರೀದಿಸಿದ್ದ ಹಾಲಿನ ಡೇರಿ ಎಲ್ಲಾ ಹಾಲನ್ನು ಚರಂಡಿಗೆ ಸುರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.