ನಂಜೇಶ್ , ಶ್ರೀನಿವಾಸ್
ಕನಕಪುರ (ರಾಮನಗರ): ತಾಲ್ಲೂಕಿನ ಸಾತನೂರಿನಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದ ಅಚ್ಚಲು ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಹೊಂಗಾಣಿದೊಡ್ಡಿಯ ಎನ್. ನಂಜೇಶ್ (46) ಕೊಲೆ ಪ್ರಕರಣದ ಆರೋಪಿ ಶ್ರೀನಿವಾಸ್ ಕಾಲಿಗೆ ಕನಕಪುರ ಟೌನ್ ಇನ್‌ಸ್ಪೆಕ್ಟರ್ ಅನಂತರಾಮು ನೇತೃತ್ವದ ತಂಡ ಸೋಮವಾರ ಬೆಳಿಗ್ಗೆ ಗುಂಡು ಹಾರಿಸಿ ಬಂಧಿಸಿದೆ.
ಘಟನೆಯಲ್ಲಿ ಠಾಣೆಯ ಕಾನ್‌ಸ್ಟೆಬಲ್ ರಮೇಶ್‌ಗೆ ಗಾಯಗೊಂಡಿದ್ದಾರೆ. ಆರೋಪಿ ಶ್ರೀನಿವಾಸ್‌ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ದಯಾನಂದ ಸಾಗರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ರಮೇಶ್ ಅವರನ್ನು ಸಹ ಅದೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ರಾತ್ರಿ ಸಾತನೂರಿನ ಆರ್.ಕೆ. ಡಾಬಾ ಎದುರು ನಂಜೇಶ್ ಅವರನ್ನು ನಾಲ್ವರು ಸಹಚರರೊಂದಿಗೆ ಕೊಲೆ ಮಾಡಿದ್ದ ಶ್ರೀನಿವಾಸ್, ತಾಲ್ಲೂಕಿನ ಗಬ್ಬಾಡಿಯಲ್ಲಿ ತಲೆ ಮರೆಸಿಕೊಂಡಿದ್ದ. ಈ ಕುರಿತು ಖಚಿತ ಮಾಹಿತಿ ಮೇರೆಗೆ, ಅನಂತರಾಮು ನೇತೃತ್ವದ ತಂಡ ಆರೋಪಿಯನ್ನು ಬಂಧಿಸಲು ಬೆಳಿಗ್ಗೆ 6 ಗಂಟೆ ಸುಮಾರಿಗೆ ಸ್ಥಳಕ್ಕೆ ತೆರಳಿತ್ತು.
ಈ ವೇಳೆ ಶ್ರೀನಿವಾಸ್ ಕಾನ್‌ಸ್ಟೆಬಲ್ ರಮೇಶ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ. ಎಚ್ಚರಿಕೆ ಲೆಕ್ಕಿಸದೆ ತಪ್ಪಿಸಿಕೊಳ್ಳಲು ಮುಂದಾದಾಗ ಅನಂತರಾಮು ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿದರು. ನಂತರ, ಆರೋಪಿಯನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿವಾದಿತ ನಿವೇಶನದ ಕಾರಣಕ್ಕೆ ಹೊಂಗಾಣಿದೊಡ್ಡಿಯಲ್ಲಿ ಮೂರು ದಿನದ ಹಿಂದೆ ಶ್ರೀನಿವಾಸ್ ಮತ್ತು ನಂಜೇಶ್ ನಡುವೆ ಜಗಳವಾಗಿತ್ತು. ಇದೇ ದ್ವೇಷಕ್ಕೆ ಶ್ರೀನಿವಾಸ್ ನಾಲ್ವರು ಯುವಕರೊಂದಿಗೆ ಸೇರಿಕೊಂಡು ನಂಜೇಶ್ ಅವರನ್ನು ಕೊಲೆ ಮಾಡಿದ್ದ. ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.