ADVERTISEMENT

ಕನಕಪುರ | ಎಲ್ಲೆಂದರಲ್ಲಿ ಕಸದ ರಾಶಿ; ನೈರ್ಮಲ್ಯಕ್ಕಿಲ್ಲ ಒತ್ತು

ಪ್ಲಾಸ್ಟಿಕ್ ಚೀಲದಲ್ಲಿ ಕಸ ಎಸೆಯುವ ಜನ; ನಾಗರಿಕರಲ್ಲಿ ಮೂಡಬೇಕಿದೆ ಸ್ವಚ್ಛತೆ ಪ್ರಜ್ಞೆ

ಬರಡನಹಳ್ಳಿ ಕೃಷ್ಣಮೂರ್ತಿ
Published 12 ಜನವರಿ 2026, 4:56 IST
Last Updated 12 ಜನವರಿ 2026, 4:56 IST
ಕನಕಪುರದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪ ರಸ್ತೆಯಲ್ಲಿರುವ ಖಾಲಿ ನಿವೇಶನವು ಕಸದ ತಿಪ್ಪೆಯಾಗಿ ಮಾರ್ಪಟ್ಟಿದೆ
ಕನಕಪುರದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪ ರಸ್ತೆಯಲ್ಲಿರುವ ಖಾಲಿ ನಿವೇಶನವು ಕಸದ ತಿಪ್ಪೆಯಾಗಿ ಮಾರ್ಪಟ್ಟಿದೆ   

ಕನಕಪುರ: ರಸ್ತೆ ಬದಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಸದ ರಾಶಿ. ಕಸದ ನಡುವೆ ಆಹಾರ ಹುಡುಕುವ ಬೀದಿ ನಾಯಿಗಳು. ಸ್ವಲ್ಪವೂ ನಾಗರಿಕ ಪ್ರಜ್ಞೆ ಇಲ್ಲದೆ ವಾಹನಗಳಲ್ಲಿ ಅಥವಾ ನಡೆದುಕೊಂಡು ಬಂದು ಪ್ಲಾಸ್ಟಿಕ್‌ ಚೀಲದಲ್ಲಿ ರಸ್ತೆ ಬದಿಗೆ ಕಸ ಎಸೆದು ಹೋಗುವ ಜನ. ದಿನಗಳಾದರೂ ತೆರವು ಆಗದಿರುವುದರಿಂದ ಗಬ್ಬುನಾತ ಬೀರುವ ಕಸದ ರಾಶಿ... – ಕನಕಪುರದಲ್ಲಿ ಒಮ್ಮೆ ಸುತ್ತಾಡಿದರೆ ಕಾಣುವ ದೃಶ್ಯವಿದು.

ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಕನಕಪುರ ಅಭಿವೃದ್ಧಿಗೆ ತೆರೆದುಕೊಂಡು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿನಿಧಿಸುವ ಕ್ಷೇತ್ರವು ಹಲವು ವಿಷಯಗಳಲ್ಲಿ ರಾಜ್ಯದ ಗಮನ ಸೆಳೆದಿದೆ. ಆದರೆ, ನಗರದಲ್ಲಿ ಕಸದ ಸಮಸ್ಯೆಗೆ ಮಾತ್ರ ಮುಕ್ತಿ ಸಿಕ್ಕಿಲ್ಲ. ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳಲ್ಲೂ ಕಸದ ದರ್ಶನವಾಗುವುದು ಸಾಮಾನ್ಯವಾಗಿದೆ.

ರಸ್ತೆಗಳಷ್ಟೇ ಅಲ್ಲದೆ ನಗರದ ಖಾಲಿ ನಿವೇಶನಗಳು, ಹೊರವಲಯದ ನಿರ್ಜನ ಪ್ರದೇಶಗಳು ಸಹ ಕಸ ವಿಲೇವಾರಿ ಸ್ಥಳವಾಗಿ ಮಾರ್ಪಟ್ಟಿವೆ. ನಗರವನ್ನು ಸ್ವಚ್ಛ ನಗರವನ್ನಾಗಿ ಮಾಡುವಲ್ಲಿ ನಗರಸಭೆಯು ಏದುಸಿರುವ ಬಿಡುತ್ತಿದೆ. ಕಸ ಹಾಕಬಾರದು ಎಂಬ ನಗರಸಭೆಯ ಬೋರ್ಡ್‌ ಅಥವಾ ಬರಹದ ಪಕ್ಕವೇ ಕಸ ಬೀಳುತ್ತಿದೆ! 

ADVERTISEMENT

ನಾಗರಿಕರಿಗಿಲ್ಲ ಭಯ: ‘ನಗರದ ಸ್ವಚ್ಛತೆ ಕಾಪಾಡುವುದು ಕೇವಲ ನಗರಸಭೆ ಕರ್ತವ್ಯವಷ್ಟೇ ಅಲ್ಲ. ಅದು ನಗರದಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಕೂಡ. ಆದರೆ, ಸ್ವಚ್ಛತೆ ವಿಷಯದ ನಿರ್ಲಕ್ಷ್ಯಕ್ಕೆ ಜನರಿಗೆ ನಗರಸಭೆ ಬಗ್ಗೆ ಭಯವೇ ಇಲ್ಲವಾಗಿದೆ. ಅದೇ ಕಾರಣಕ್ಕೆ ನಾಗರಿಕ ಪ್ರಜ್ಞೆ ಇಲ್ಲದೆ ಎಲ್ಲೆಂದರಲ್ಲಿ ಕಸ ಎಸೆಯುತ್ತಾರೆ’ ಎಂದು ಸ್ಥಳೀಯರೊಬ್ಬರು ಬೇಸರ ವ್ಯಕ್ತಪಡಿಸಿದರು. 

‘ನಸುಕಿನಲ್ಲಿ ಅಥವಾ ರಾತ್ರಿಯಾದರೆ ಕೆಲವರು ವಾಹನಗಳಲ್ಲಿ ಬಂದು ರಸ್ತೆ ಬದಿಗೆ ಕಸ ಎಸೆಯುತ್ತಾರೆ. ಯಾರಾದರೂ ಈ ಕುರಿತು ಪ್ರಶ್ನಿಸಿದರೆ, ಅವರ ಮೇಲೆರಗಿ ಬರುತ್ತಾರೆ. ಹಾಗಾಗಿ, ಅಂತಹವರನ್ನು ಪ್ರಶ್ನಿಸುವುದಕ್ಕೂ ಭಯಪಡುವಂತಾಗಿದೆ. ಈ ಬಗ್ಗೆ ನಗರಸಭೆಯವರೇ ಏನಾದರೂ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ನಗರದಲ್ಲಿರುವ ಕಸದ ತಿಪ್ಪೆಗಳಿಗೆ ಮುಕ್ತಿ ಸಿಗದು’ ಎಂದರು. 

ಕಸದ ವಾಹನ: ನಗರಸಭೆಯು ನಗರದ ವ್ಯಾಪ್ತಿಯ ಪ್ರತಿ ಮನೆಗಳಿಂದಲೂ ಕಸವನ್ನು ಸಂಗ್ರಹಿಸಲು ನಿತ್ಯ ಪ್ರತಿ ವಾರ್ಡುಗಳ ಬೀದಿಗೂ ಕಸ ಸಂಗ್ರಹ ವಾಹನ ಬರುತ್ತದೆ. ಆಗ ಬಹುತೇಕರು ಕಸ ತಂದು ಹಾಕುತ್ತಾರೆ. ಆದರೆ, ಕೆಲವರು ಕಸ ನೀಡದೆ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ರಸ್ತೆಗೆ ತಂದು ಎಸೆಯುತ್ತಾರೆ ಎಂದು ನಗರಸಭೆ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.

ಕಸದ ವಾಹನ ಬೀದಿ ಬೀದಿಗೆ ಬಂದಿರುವ ಕುರಿತು ಜನರಿಗೆ ಗೊತ್ತಾಗಲಿ ಎಂದು ವಾಹನದಲ್ಲಿ ಸ್ವಚ್ಛತೆ ಜಾಗೃತಿ ಮೂಡಿಸುವ ಹಾಡು ಮತ್ತು ಜಿಂಗಲ್ ಹಾಕಿ ಪ್ರಚಾರ ಮಾಡುತ್ತೇವೆ. ಆಗಲಾದರೂ ಜನ ಎಚ್ಚೆತ್ತುಕೊಂಡು ಬಂದು ಕಸವನನ್ನು ವಾಹನಕ್ಕೆ ತಂದು ಹಾಕುವುದಿಲ್ಲ. ಅಂತಹವರಿಗೆ ಏನು ಮಾಡೋದು? ಎಂದು ಪ್ರಶ್ನಿಸಿದರು.

ತಟ್ಟದ ದಂಡದ ಬಿಸಿ: ಕಸವನ್ನು ಹಾಕುವವರಿಗೆ ದಂಡವನ್ನು ವಿಧಿಸಿದ್ದರೂ ಅದನ್ನು ಲೆಕ್ಕಿಸದೆ ಸಾರ್ವಜನಿಕರು ಕಸವನ್ನು ರಸ್ತೆ ಬದಿಗಳಲ್ಲಿ ಹಾಕುವುದರಿಂದ ಕಸದ ರಾಶಿ ಆಗುತ್ತಿದೆ. ಅದಕ್ಕಾಗಿ ದಂಡಾಸ್ತ್ರ ಪ್ರಯೋಗಿಸಲು ನಗರಸಭೆ ಮುಂದಾಗಿದೆ. ಕೆಲವರ ಮೇಲೆ ದಂಡ ವಿಧಿಸಿದೆ. ಆದರೂ, ದಂಡದ ಬಿಸಿಯಾಗಿ ಇನ್ನೂ ಸರಿಯಾಗಿ ತಟ್ಟಿಲ್ಲ.

ದಂಡಾಸ್ತ್ರದ ಮುಂದುವರಿದ ಭಾಗವಾಗಿ ನಗರಸಭೆಯು ಕಸ ಸಂಗ್ರಹಣೆ ನಿರ್ವಹಣೆಗಾಗಿಯೇ ಪ್ರತ್ಯೇಕವಾಗಿ ಒಂದು ತಂಡವನ್ನು ಇದೀಗ ರಚಿಸಿದೆ. ಈ ತಂಡವು ಕಸದ ವಾಹನವು ಪ್ರತಿ ಬೀದಿಗಳಿಗೆ ಹೋದಾಗ, ಅಲ್ಲಿನ ಯಾವ ಯಾವ ಮನೆಯವರು ಕಸ ಹಾಕುತ್ತಾರೆ, ಯಾರು ಹಾಕುವುದಿಲ್ಲ ಎಂಬುದನ್ನು ಗಮನಿಸುತ್ತಿದ್ದಾರೆ.

ಕ್ಯಾಮೆರಾ ನಿಗಾ: ತ್ಯಾಜ್ಯ ಸಂಗ್ರಹ, ವಿಲೇವಾರಿ, ಬ್ಲ್ಯಾಕ್‌ಸ್ಪಾಟ್‌ಗಳ ಮೇಲಿನ ನಿಗಾಕ್ಕೆ ನಗರಸಭೆಯಿಂದ ವಿವಿಧ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆ ಮೂಲಕ ಯಾರ‍್ಯಾರು ಕಸ ತಂದು ಎಸೆಯುತ್ತಿದ್ದಾರೆ ಎಂದು ಪತ್ತೆಹಚ್ಚಿ, ಮೊದಲ ತಪ್ಪಿಗೆ ₹500 ದಂಡ ವಿಧಿಸಲಾಗುತ್ತಿದೆ. ಮತ್ತೆ ಕಸ ಹಾಕಿದರೆ ದುಪ್ಪಟ್ಟು ದಂಡ ವಿಧಿಸಲು ಮುಂದಾಗಿದ್ದೇವೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದರು.

ಯಾವುದೇ ಒಂದು ನಗರದ ಬಗ್ಗೆ ಜನರಿಗೆ ಉತ್ತಮ ಭಾವನೆ ಬರಬೇಕಾದರೆ, ಆ ನಗರದ ಸ್ವಚ್ಛತೆ ಅತಿ ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ ನಗರದಲ್ಲಿ ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅದಕ್ಕಾಗಿ ನಗರದ ಪ್ರತಿಯೊಬ್ಬ ನಾಗರಿಕರು ಮನೆಗೆ ಬರುವ ಕಸದ ವಾಹನಗಳಿಗೆ ಕಸವನ್ನು ಕೊಡಬೇಕು. ಎಲ್ಲೆಂದರಲ್ಲಿ ಕಸ ಎಸೆಯುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು. ಆಗ ಮಾತ್ರ ಸ್ವಚ್ಛ ಕನಕಪುರ ನಿರ್ಮಾಣ ಸಾಧ್ಯ.

‘ಸಮುದಾಯ ಜಾಗೃತಿಗೆ ತಂಡ’

‘ನಗರದಲ್ಲಿ ಹಸಿ ಮತ್ತು ಒಣ ಕಸ ಬೇರ್ಪಡಿಸಲು ಹಾಗೂ ಕಸದ ವಾಹನಕ್ಕೆ ತಪ್ಪದೆ ಕಸವನ್ನು ನೀಡುವಂತೆ ಜಾಗೃತಿ ಮೂಡಿಸಲು ನಗರಸಭೆಯಿಂದ ಸಮುದಾಯ ಸಜ್ಜುಗೊಳಿಸುವ ತಂಡವನ್ನು ನೇಮಕ ಮಾಡಲಾಗಿದೆ‌. 11 ಮಂದಿ ಮಹಿಳೆಯರು ತಂಡದಲ್ಲಿದ್ದಾರೆ. ಕಸದ ವಾಹನದ ಜೊತೆ ಹೋಗುವ ತಂಡದ ಸದಸ್ಯರು ಪ್ರತಿ ಮನೆಗೆ ಹೋಗಿ ಕಸ ಹಾಕುವಂತೆ ಒಣ ಮತ್ತು ಹಸಿ ಕಸ ಬೇರ್ಪಡಿಸುವಂತೆ ಜಾಗೃತಿ ಮೂಡಿಸುತ್ತಾರೆ. ಕಸ ನೀಡದವರನ್ನು ಗುರುತಿಸಿ ದಂಡ ವಿಧಿಸುತ್ತಾರೆ. ರಸ್ತೆಗಳಲ್ಲಿ ಕಸ ಹಾಕುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ’ ಎಂದು ನಗರಸಭೆಯ ಪರಿಸರ ಎಂಜಿನಿಯರ್ ಧನಂಜಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ವ್ಯಾಪಕ ಜಾಗೃತಿ ಜೊತೆಗೆ ಕ್ರಮ ಅಗತ್ಯ’

‘ನಗರದ ಸ್ವಚ್ಛತೆ ಕಾಪಾಡಿ ಸುಂದರವಾಗಿ ಇಡುವುದರಲ್ಲಿ ನಾಗರಿಕರ ಪಾತ್ರವು ಪ್ರಮುಖವಾಗಿದೆ. ನಮ್ಮ ಮನೆಗಳಿಗೆ ಕಸದ ವಾಹನ ಬಂದಾಗ ಅದಕ್ಕೆ ನೀಡಬೇಕು. ಅಕ್ಕಪಕ್ಕದ ಖಾಲಿ ನಿವೇಶನಗಳಿಗೆ ಅಥವಾ ನಿರ್ಜನ ಪ್ರದೇಶಗಳಲ್ಲಿ ರಸ್ತೆ ಬದಿಗಳಲ್ಲಿ ಕಸ ಹಾಕದಂತೆ ತಿಳಿ ಹೇಳಬೇಕು. ಈ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕು. ಅದನ್ನೂ ಮೀರಿಯೂ ಎಲ್ಲೆಂದರಲ್ಲಿ ಕಸ ಹಾಕುವವರರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜನ ಬುದ್ಧಿ ಕಲಿಯುವುದಿಲ್ಲ’ ಎಂದು ಬೃಂದಾವನ ನಗರದ ನಿವಾಸಿ ಟಿ.ಎಂ. ರಾಮಯ್ಯ ಒತ್ತಾಯಿಸಿದರು.

ನಗರವನ್ನು ಸ್ವಚ್ಛವಾಗಿಡಬೇಕಾದರೆ ನಗರಸಭೆ ಜೊತೆಗೆ ಜನ ಕೈ ಜೋಡಿಸಬೇಕು. ಮನೆಗಳಲ್ಲಿ ಉತ್ಪತ್ತಿಯಾಗುವ ಒಣ ಮತ್ತು ಹಸಿ ಕಸವನ್ನು ಮೂಲದಲ್ಲೇ ವಿಂಗಡಿಸಬೇಕು. ನಿತ್ಯ ಕಸವನ್ನು ನಮ್ಮ ವಾಹನಕ್ಕೆ ನೀಡಬೇಕು. ಸ್ವಚ್ಛ ಮತ್ತು ಸುಂದರ ಕನಕಪುರಕ್ಕಾಗಿ ಜನ ಸಹಕರಿಸಬೇಕು
– ಶ್ರೀನಿವಾಸ್, ಪೌರಾಯುಕ್ತ ನಗರಸಭೆ ಕನಕಪುರ
ಕನಕಪುರ ನಗರಸಭೆಯ ಪೌರ ಕಾರ್ಮಿಕರು ಮನೆಗಳಿಂದ ಕಸ ಸಂಗ್ರಹಿಸಿ ವಾಹನಕ್ಕೆ ಹಾಕುತ್ತಿರುವುದು
ಕನಕಪುರದ ಪಿಡಬ್ಲ್ಯೂಡಿ ಕ್ವಾಟ್ರಸ್ ಕಾಂಪೌಂಡ್‌ ಪಕ್ಕದಲ್ಲಿರುವ ಕಸದ ರಾಶಿ
ಕನಕಪುರದ ರಾಮನಗರ ರಸ್ತೆಯ ಪೆಟ್ರೋಲ್ ಬಂಕ್ ಎದುರಿನ ರಸ್ತೆ ಪಕ್ಕದಲ್ಲಿರುವ ಕಸದ ತಿಪ್ಪೆ
ಕನಕಪುರದ ಬಸವೇಶ್ವರನಗರದ ಪೈಪ್‌ಲೈನ್ ಮಾರ್ಗದ ಚೇಂಬರ್ ಬಳಿ ಇರುವ ಕಸದ ರಾಶಿ
ಕನಕಪುರದ ಮೇಳೆಕೋಟೆ ಬಳಿಯ ಬೈಪಾಸ್ ರಸ್ತೆ ಬದಿ ಕಸ ಎಸೆದಿರುವುದು
ಕನಕಪುರದ ರಾಮನಗರ ರಸ್ತೆಯಲ್ಲಿರುವ ಕಸದ ರಾಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.