
ಕನಕಪುರ: ಕೋಡಿಹಳ್ಳಿ ಹೋಬಳಿ ಅಲಗಡಕಲು ಗ್ರಾಮದಲ್ಲಿ ಊಟಕ್ಕೆ ಸಾಂಬಾರ್ ಕೊಡುವಂತೆ ನೆಪ ಮಾಡಿಕೊಂಡು ಒಂಟಿ ವೃದ್ಧೆ ಮನೆಗೆ ಹೋದ ಪರಿಚಿತ ವ್ಯಕ್ತಿಯೊಬ್ಬ ಗುರುವಾರ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.
ಗ್ರಾಮದ ಪುಟ್ಟಮ್ಮ ಎಂಬ ವೃದ್ಧ ಮಹಿಳೆ ಮನೆಗೆ ಎಂದಿನಂತೆ ಸಾಂಬಾರ್ ಕೇಳಿಕೊಂಡು ಹೋದ ಗ್ರಾಮದ ಪರಿಚಿತ ಕುಮಾರ್ ಎಂಬಾತ ಚಿನ್ನದ ಒಡವೆ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಮನೆಯೊಳಗೆ ಹೋಗುತ್ತಿದ್ದಂತೆ ಪುಟ್ಟಮ್ಮ ಅವರ ಕುತ್ತಿಗೆಯನ್ನು ಕೈನಿಂದ ಬಿಗಿಯಾಗಿ ಹಿಡಿದು ಉಸಿರು ಗಟ್ಟಿಸಿ ಎರಡು ಕಿವಿ ಓಲೆ, ಎರಡು ಮಾಟಿ, ಮೂಗುಬಟ್ಟು, ಚಿನ್ನದ ಸರ, ಎರಡು ಉಂಗುರಗಳನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಕುತ್ತಿಗೆಯನ್ನು ಬಿಗಿಯಾಗಿ ಹಿಡಿದ ಕಾರಣ ಉಸಿರುಗಟ್ಟಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಪುಟ್ಟಮ್ಮ ಎಚ್ಚರಗೊಂಡಾಗ ಮೈ ಮೇಲಿದ್ದ ಒಡವೆ ಕಾಣೆಯಾದ ವಿಷಯ ಗಮನಕ್ಕೆ ಬಂದಿದೆ. ನಡೆದ ವಿಚಾರವನ್ನು ಅಕ್ಕಪಕ್ಕದವರಿಗೆ ತಿಳಿಸಿದರು. ನಂತರ ಕೋಡಿಹಳ್ಳಿ ಪೊಲೀಸರಿಗೆ ಕುಮಾರ್ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಆರೋಪಿ ಕುಮಾರ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.