ADVERTISEMENT

ಕನಕಪುರ | ಅವೈಜ್ಞಾನಿಕ ರಸ್ತೆ ಉಬ್ಬು: ಅಪಘಾತದ ಹಾಟ್‌ಸ್ಪಾಟ್ ತುಂಗಣಿ ಬೈಪಾಸ್

ಬರಡನಹಳ್ಳಿ ಕೃಷ್ಣಮೂರ್ತಿ
Published 19 ಫೆಬ್ರುವರಿ 2026, 4:38 IST
Last Updated 19 ಫೆಬ್ರುವರಿ 2026, 4:38 IST
ತುಂಗಣಿ ಬಳಿಯ ಬೈಪಾಸ್ ರಸ್ತೆ ಸರ್ಕಲ್
ತುಂಗಣಿ ಬಳಿಯ ಬೈಪಾಸ್ ರಸ್ತೆ ಸರ್ಕಲ್   

ಕನಕಪುರ: ನಿರಂತರವಾಗಿ ಆಗುತ್ತಿದ್ದ ಅಪಘಾತಗಳನ್ನು ತಡೆಗಟ್ಟಲು ಹೆದ್ದಾರಿಗೆ ಅಳವಡಿಸಿರುವ ರಸ್ತೆ ಉಬ್ಬುಗಳೇ ಇಂದು ವಾಹನ ಸವಾರರ ಪಾಲಿಗೆ ಮೃತ್ಯುವಾಗಿ ಜೀವಕ್ಕೆ ಕುತ್ತು ತರುವಂತಾಗಿವೆ.

ತಾಲ್ಲೂಕಿನ ತುಂಗಣಿ ಬೈಪಾಸ್ ಸೇರುವ ಬೆಂಗಳೂರು 948 ಹೆದ್ದಾರಿಗೆ ಅವೈಜ್ಞಾನಿಕವಾಗಿ ರಸ್ತೆ ಉಬ್ಬುಗಳನ್ನು ಅಳವಡಿಸಿದ್ದು ಈ ಜಾಗದಲ್ಲಿ ನಿರಂತರ ಅಪಘಾತ ಸಂಭವಿಸುತ್ತಿದೆ.

ಕನಕಪುರ ನಗರದ ಮಾರ್ಗವಾಗಿ ಹಾದು ಹೋಗಿದ್ದ ಹೆದ್ದಾರಿ 948ನ್ನು ನಗರದ ಹೊರವಲಯದಲ್ಲಿ ಬೈಪಾಸ್ ಮಾಡಿದ ಮೇಲೆ ತುಂಗಣಿ ಗೇಟ್ ಬಳಿ ನಿರಂತರವಾಗಿ ಅಪಘಾತ ಪ್ರಾರಂಭವಾಯಿತು.

ADVERTISEMENT

ಹೆದ್ದಾರಿಯಲ್ಲಿ ಹೋಗುವ ವಾಹನಗಳು ಮತ್ತು ಕನಕಪುರದ ಕಡೆಗೆ ಮಾರ್ಗ ಬದಲಿಸುವ ವಾಹನಗಳ ನಡುವೆ ಅಪಘಾತಗಳು ನಡೆಯುತ್ತಿದ್ದವು. ಆ ಜಾಗದಲ್ಲಿ ಅಂಡರ್‌ಪಾಸ್ ಮಾಡದಿರುವುದೆ ಅಪಘಾತಕ್ಕೆ ಕಾರಣವಾಗಿತ್ತು.

ನಿರಂತರ ಅಪಘಾತ ನಡೆದು ಸಾವು ನೋವುಗಳಾಗುತ್ತಿದ್ದಾಗ ತಾಲ್ಲೂಕಿನ ಜನತೆ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರಲ್ಲಿ ಅಪಘಾತ ತಡೆಗೆ ಅಂಡರ್‌ಪಾಸ್ ನಿರ್ಮಿಸುವಂತೆ ಒತ್ತಾಯ ಮಾಡಿದ್ದರು.

ಮಂಜುನಾಥ್ ಅವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜತೆ ಅಪಘಾತ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಹೆದ್ದಾರಿ ಹಾದು ಹೋಗಿರುವ ಬೈಪಾಸ್ ಸರ್ಕಲ್‌ಗಳಲ್ಲಿ ಅಂಡರ್‌ಪಾಸ್ ಮಾಡುವಂತೆ ಸೂಚನೆ ನೀಡಿದ್ದರು.

ರಾಷ್ಟ್ರೀಯ ಹೆದ್ದಾರಿಯವರು ಅಂಡರ್‌ಪಾಸ್ ನಿರ್ಮಾಣ ಆಗುವವರೆಗೆ ತಾತ್ಕಾಲಿಕವಾಗಿ ರಸ್ತೆ ಉಬ್ಬ ಅಳವಡಿಸಲು ಮುಂದಾದರು. ತುಂಗಣಿ ಗೇಟ್ ಬಳಿ ಹೆದ್ದಾರಿಗೆ ಉಬ್ಬನ್ನು ನಿರ್ಮಿಸಿದರು. ಆದರೆ ಉಬ್ಬು ನಿರ್ಮಿಸಿರುವ ಬಗ್ಗೆ ನಾಮಫಲಕ, ದೀಪ ಅಳವಡಿಸದೆ ಇರುವುದು ಅಪಘಾತಕ್ಕೆ ಕಾರಣವಾಯಿತು.

ಬೆಂಗಳೂರು ಕಡೆಯಿಂದ ವೇಗವಾಗಿ ಬರುವ ವಾಹನಗಳಿಗೆ ರಸ್ತೆ ಉಬ್ಬು ಅಳವಡಿಸಿರುವುದು ದೂರದಿಂದ ಕಾಣಿಸದೆ ರಸ್ತೆ ಉಬ್ಬುಗಳನ್ನು ಹಾರಿಹೋಗಿ ಡಿವೈಡರ್‌ಗೆ ಡಿಕ್ಕಿ ಹೊಡೆಯುತ್ತಾರೆ. ಇಲ್ಲವೇ ಒಮ್ಮೆಲೇ ಬ್ರೇಕ್ ಹಾಕಲುಹೋಗಿ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸುತ್ತಿದೆ. 

ಪ್ರತಿ ರಾತ್ರಿ ಒಂದಲ್ಲ ಒಂದು ವಾಹನಗಳು ರಸ್ತೆ ಉಬ್ಬಿನಿಂದ ಅಪಘಾತಕ್ಕೆ ಈಡಾಗಿ ಸಾವು ನೋವುಗಳು ಸಂಭವಿಸುತ್ತಿವೆ. ಕಾರು, ಬೈಕು ವಾಹನಗಳು ಜಖಂಗೊಳ್ಳುತ್ತಿವೆ. 

ಇಲ್ಲಿ ಅಪಘಾತ ಆಗದಂತೆ ತಡೆಗಟ್ಟಲು ಅಂಡರ್‌ಪಾಸ್ ಮಾಡಬೇಕು. ಅಲ್ಲಿಯವರೆಗೆ ರಸ್ತೆ ಉಬ್ಬು ಅಳವಡಿಸಿರುವ ಜಾಗದಲ್ಲಿ ಬೀದಿ ದೀಪ ಅಳವಡಿಸಬೇಕು. ರಸ್ತೆ ಉಬ್ಬು ಇರುವ ಬಗ್ಗೆ ಸೂಚನಾ ಫಲಕ ಅಳವಡಿಸಬೇಕು ಎಂಬುದು ತಾಲ್ಲೂಕಿನ ಜನರ ಒತ್ತಾಯವಾಗಿದೆ.

ಬೀದಿದೀಪ ಅಳವಡಿಸಿ
ಬೆಂಗಳೂರು ರಸ್ತೆಯ ತುಂಗಣಿ ಬಳಿ ಹೆದ್ದಾರಿಗೆ ಅಳವಡಿಸಿರುವ ರಸ್ತೆ ಉಬ್ಬು ಜೀವ ರಕ್ಷಕ ಆಗುವ ಬದಲು ಜೀವ ತೆಗೆಯುವಂತಾಗಿದೆ. ಇಲ್ಲಿ ಅವೈಜ್ಞಾನಿಕವಾಗಿ ರಸ್ತೆ ಉಬ್ಬು ಅಳವಡಿಸಿ ಬೀದಿ ದೀಪ ಸೂಚನಾ ಫಲಕ ಹಾಕದಿರುವುದೆ ಅಪಘಾತಕ್ಕೆ ಕಾರಣ. ಕೂಡಲೇ ಬೀದಿದೀಪ ಅಳವಡಿಸಿ ಸೂಚನಾ ಫಲಕ ಹಾಕಬೇಕು.
ಜಯಸಿಂಹ ಕನ್ನಡ ಸೇನೆ ಅಧ್ಯಕ್ಷ
ಪೊಲೀಸರು ದಂಡ ಹಾಕುವ ಜಾಗ
ತುಂಗಣಿ ಗೇಟ್ ಬಳಿ ವಾಹನ ವೇಗವಾಗಿ ಹೋಗುವುದನ್ನು ತಡೆಗಟ್ಟಲು ರಸ್ತೆ ಉಬ್ಬು ಅಳವಡಿಸಲಾಗಿದೆ. ಆದರೆ ಪೊಲೀಸರು ಈ ಜಾಗವನ್ನು ದಂಡ ಹಾಕುವ ಜಾಗವನ್ನಾಗಿ ಮಾಡಿಕೊಂಡಿದ್ದಾರೆ. ಇಲ್ಲಿ ಪೊಲೀಸರು ಇರುವುದನ್ನು ಕಂಡ ಬೈಕ್ ಸವಾರರು ಅವರಿಂದ ತಪ್ಪಿಸಿಕೊಳ್ಳಲು ವೇಗವಾಗಿ ಹೋಗಿ ಅಪಘಾತಕ್ಕೆ ಈಡಾಗುತ್ತಿದ್ದಾರೆ.
ಗಬ್ಬಾಡಿ ಕಾಡೇಗೌಡ ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ