ADVERTISEMENT

ಕನಕಪುರ | ಹಳೆ ದ್ವೇಷ ಮಚ್ಚಿನಿಂದ ಹಲ್ಲೆ; ಆರು ಮಂದಿ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 2:22 IST
Last Updated 9 ಆಗಸ್ಟ್ 2025, 2:22 IST
   

ಕನಕಪುರ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಮೂವರ ಮೇಲೆ ಆರು ಮಂದಿ ಹಲ್ಲೆ ಮಾಡಿರುವ ಆರೋಪದ ಮೇಲೆ ಸಾತನೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ದೊಡ್ಡಾಲಹಳ್ಳಿ ಗ್ರಾಮದ ಶಿವು, ಅವರ ಸಹೋದರ ಸಿದ್ದೇಶ, ಮಾವ ಚಿಕ್ಕರಾಜು ಹಲ್ಲೆಗೊಳಗಾದವರು. ಅದೇ ಗ್ರಾಮದ ನಾರಾಯಣ ಅಲಿಯಾಸ್ ಪೋಟ್ಲೆ, ಅವರ ಮಗ ದರ್ಶನ್ ಹಾಗೂ ಗ್ರಾಮದ ರೇಣುಕಮ್ಮ, ಮುತ್ತುರಾಜು, ಅರ್ಜುನ್, ನರಸಯ್ಯ ವಿರುದ್ಧ ದೂರು ದಾಖಲಾಗಿದೆ.

ಆಗಸ್ಟ್ 3 ರಂದು ರಾತ್ರಿ 8ರ  ಸಮಯದಲ್ಲಿ ಹಲ್ಲೆಗೊಳಗಾದ ಶಿವು ಅವರ ಅಜ್ಜಿ ಮನೆಗೆ ಹೋಗಿ ನಡೆದುಕೊಂಡು ಬರುತ್ತಿದ್ದಾಗ ಹಳೆ ದ್ವೇಷದಿಂದ ನಾರಾಯಣ ಅಲಿಯಾಸ್ ಪೊಟ್ಲೆ ದ್ವಿಚಕ್ರ ವಾಹನದಿಂದ ಬಂದು ಶಿವು ಅವರಿಗೆ ಗುದ್ದಿ ಕೆಳಗೆ ಬೀಳಿಸಿ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದರು ಎಂದು ಶಿವು ದೂರಿನಲ್ಲಿ ಆರೋಪಿಸಿದ್ದಾರೆ.

ADVERTISEMENT

‘ನನ್ನನ್ನು ರಕ್ಷಣೆ ಮಾಡಲು ಬಂದ ನಮ್ಮ ತಾತ ಮತ್ತು ಅಜ್ಜಿಗೂ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ನನ್ನ ತಮ್ಮ ಸಿದ್ದೇಶನಿಗೆ ಆರೋಪಿ ದರ್ಶನ್ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಮಾವ ಚಿಕ್ಕರಾಜು ಅವರಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿ ಅವರ ಕುತ್ತಿಗೆಯಲ್ಲಿದ್ದ 20 ಗ್ರಾಂ ತೂಕದ ಚಿನ್ನದ ಸರವನ್ನು ಮುತ್ತುರಾಜ್ ಕಿತ್ತುಕೊಂಡಿದ್ದು ಪೊಲೀಸರಿಗೆ ದೂರು ನೀಡಿದರೆ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟು ಹಾಕುವುದಾಗಿ ಜೀವ ಬೆದರಿಕೆ ಹಾಕಿದರು.’

ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಶಿವು ಆಗ್ರಹಿಸಿದ್ದಾರೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.