ADVERTISEMENT

ಕನಕಪುರ | ಕ್ಷೇತ್ರ ಮರೆತ ಡಿಸಿಎಂ ಡಿಕೆಶಿ: ನಗರಸಭೆ ಕಚೇರಿ ಮುಂದೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 2:37 IST
Last Updated 29 ಅಕ್ಟೋಬರ್ 2025, 2:37 IST
ಕನಕಪುರ ನಗರಸಭೆ ಮುಂಭಾಗ ಮಂಗಳವಾರ ನಡೆದ ಪ್ರತಿಭಟನೆ ನಡೆಯಿತು
ಕನಕಪುರ ನಗರಸಭೆ ಮುಂಭಾಗ ಮಂಗಳವಾರ ನಡೆದ ಪ್ರತಿಭಟನೆ ನಡೆಯಿತು   

ಕನಕಪುರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಮುಖ್ಯಮಂತ್ರಿ ಆಗುವವರೆಗೆ ಕ್ಷೇತ್ರದ ಜನರು ರಾಜಕೀಯ ಶಕ್ತಿ ನೀಡಿದ್ದಾರೆ. ಆದರೆ, ಅವರು ಕ್ಷೇತ್ರವನ್ನೇ ಮರೆತಿದ್ದಾರೆ ಎಂದು ಆರೋಪಿಸಿ ಪ್ರಗತಿಪರ ಸಂಘಟನೆಗಳ ಮುಖಂಡರು ನಗರಸಭೆ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರಸಭೆಯಲ್ಲಿ ಅಧಿಕಾರಿಗಳು ಮತ್ತು ನೌಕರರು ನಿರಂತರವಾಗಿ ದೀರ್ಘ ರಜೆ ಹಾಕಿ ಕಚೇರಿಗೆ ಬಾರದೆ ಗೈರಾಗುತ್ತಿದ್ದಾರೆ. ಇದರಿಂದ ಸಾರ್ವಜನಿಕ ಕೆಲಸ ಆಗುತ್ತಿಲ್ಲ. ಕೆಲಸ ಕಾರ್ಯಗಳಿಗಾಗಿ ಜನರು ಅಲೆದಾಡುತ್ತಿದ್ದರೂ ಜನರ ಸಮಸ್ಯೆ ಯಾರು ಕೇಳುತ್ತಿಲ್ಲ. ಕ್ಷೇತ್ರದ ಶಾಸಕರಾಗಿರುವ ಅವರು ಕ್ಷೇತ್ರಕ್ಕೆ ಬರಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಪ್ರಗತಿಪರ ಸಂಘಟನೆ ಮುಖಂಡ ಕುಮಾರಸ್ವಾಮಿ ಮಾತನಾಡಿ, ಕನಕಪುರ ಜನರು ಮತದಾನದ ಸಮಯದಲ್ಲಿ ಕೊಡುವ ಹಣದಾಸೆಗೆ ಮತಹಾಕಿ ಪಶ್ಚಾತ್ತಾಪ ಪಡುತ್ತಿದ್ದಾರೆ. ನಿತ್ಯವೂ ಕಚೇರಿಗಳಿಗೆ ಅಲೆದಾಡಿ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಸಾರ್ವಜನಿಕರು ತಮಗಾಗುತ್ತಿರುವ ನೋವು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಳ್ಳಲಾಗದ ಪರಿಸ್ಥಿತಿಯಲ್ಲಿದ್ದಾರೆ. ತಮಗೆ ಎಷ್ಟೇ ಕಷ್ಟವಾಗುತ್ತಿದ್ದರೂ ಅಸಮಾಧಾನ ಹೊರಹಾಕಲು ಹಿಂದೇಟು ಹಾಕುತ್ತಿದ್ದಾರೆ. ತಾಲ್ಲೂಕಿನಲ್ಲಿ ಇರುವ ಭಯ ಜನರನ್ನು ಮಾತನಾಡದಂತೆ ಮಾಡಿದೆ ಎಂದು ದೂರಿದರು.

ಕ್ಷೇತ್ರದಲ್ಲಿ ಯಾವ ಕೆಲಸ ಆಗುತ್ತಿಲ್ಲ. ಇಲಾಖೆಗಳಲ್ಲಿ ಯಾವ ಅಧಿಕಾರಿಗಳು ಜನರಪರ ಕೆಲಸ ಮಾಡುತ್ತಿಲ್ಲ. ರಾಜಕಾರಣಿಗಳು ಮತ್ತು ಪ್ರಭಾವಿಗಳ ಕೆಲಸ ಮಾತ್ರ ಇಲ್ಲಿ ನಡೆಯುತ್ತಿದೆ. ಸಮಸ್ಯೆಗಳನ್ನು ಯಾರಾದರೂ ಪ್ರಶ್ನೆ ಮಾಡಿದರೆ ಅವರು ವಿರುದ್ಧ ಸುಳ್ಳು ಕೇಸು ಹಾಕಿ ಬೆದರಿಸುವ ಕೆಲಸ ಆಗುತ್ತಿದೆ. ಕ್ಷೇತ್ರದಲ್ಲಿ ಉಸಿರು ಕಟ್ಟಿದ ವಾತಾವರಣವಿದೆ. ಜನರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಕೆಲವು ಇಲಾಖೆಗಳಲ್ಲಿ ಮುಖ್ಯಸ್ಥರೇ ಇಲ್ಲವಾಗಿದೆ. ನಗರಸಭೆ ಪೌರಾಯುಕ್ತರು ರಜೆ ಮೇಲೆ ತೆರಳಿ ಎರಡು ತಿಂಗಳು ಕಳೆದಿದೆ. ಆದರೆ. ಇಲ್ಲಿವರೆಗೂ ಕಾಯಂ ಅಧಿಕಾರಿಯನ್ನು ನಿಯೋಜನೆ ಮಾಡಿಲ್ಲ. ಇಡೀ ರಾಜ್ಯದಲ್ಲಿ ಮಾದರಿ ತಾಲ್ಲೂಕು, ಮಾದರಿ ನಗರ ಮಾಡುವುದಾಗಿ ಹೇಳುವ ಅವರು ಕ್ಷೇತ್ರದಲ್ಲಿ ಏನಾಗುತ್ತಿದೆ. ಜನರ ಕಷ್ಟ ಏನೆಂದು ಕೇಳುತ್ತಿಲ್ಲ ಎಂದು ಕಿಡಿಕಾರಿದರು.

ಇಲ್ಲಿನ ನಗರಸಭೆ ಸದಸ್ಯರು ಸಾರ್ವಜನಿಕರ ಸಮಸ್ಯೆ ಆಲಿಸುವುದನ್ನು ಬಿಟ್ಟು ತೆರಿಗೆ ಹಣದಲ್ಲಿ ಗುಜರಾತ್ ಪ್ರವಾಸ ಮಾಡಿದ್ದಾರೆ ಎಂದು ದೂರಿದರು. 

ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ಜನನ ಮತ್ತು ಮರಣ ಪ್ರಮಾಣ ಪತ್ರಗಳ ತಪ್ಪು ಸರಿ ಮಾಡಿಕೊಡಲು ಸಾಧ್ಯವಾಗದ ಅಧಿಕಾರಿಗಳಿಂದ ಏನನ್ನು ನಿರೀಕ್ಷೆ ಮಾಡಲು ಸಾಧ್ಯ. ಇದು ಸಾಂಕೇತಿಕ ಪ್ರತಿಭಟನೆ, ಮುಂದೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಕನ್ನಡ ಭಾಸ್ಕರ್, ಗಬ್ಬಾಡಿ ಕಾಡೇಗೌಡ, ಶಿವರಾಜು, ಶ್ರೀನಿವಾಸ್, ದೇವರಾಜು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಕನಕಪುರ ಪ್ರಗತಿಪರ ಸಂಘಟನೆಗಳ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಸಂಜಯ್ ಅವರಿಗೆ ಮನವಿ ಪತ್ರ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.