ರಾಮನಗರ: ಕಾವೇರಿ ನದಿಗೆ ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಾಣ ಯೋಜನೆ ಜಾರಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ)ಯಿಂದ ರಾಮನಗರದಿಂದ ಬೆಂಗಳೂರಿನವರೆಗೆ ಕೈಗೊಂಡಿರುವ ಎರಡು ದಿನಗಳ ಪಾದಯಾತ್ರೆ ಶುಕ್ರವಾರ ನಗರದಿಂದ ಶುರುವಾಯಿತು.
ಕೆಂಪೇಗೌಡ ವೃತ್ತದಲ್ಲಿರುವ ಲಕ್ಷ್ಮಿವೆಂಕಟೇಶ್ವರದ ದೇವಾಲಯದಲ್ಲಿ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ಪಾದಯಾತ್ರೆ ಐಜೂರು ವೃತ್ತ, ಕೆಂಗಲ್ ಹನುಮಂತಯ್ಯ ವೃತ್ತ, ಎಂ.ಜಿ.ರಸ್ತೆ, ವಾಟರ್ ಟ್ಯಾಂಕ್ ವೃತ್ತ, ಜೂನಿಯರ್ ಕಾಲೇಜು ರಸ್ತೆ, ಎಸ್.ಪಿ ಕಚೇರಿ ವೃತ್ತ ಹಾದು ಬೆಂಗಳೂರು-ಮೈಸೂರು ಮಾರ್ಗವಾಗಿ ಸಂಜೆ ಬಿಡದಿ ತಲುಪಿತು.
ಡೊಳ್ಳು ಹಾಗೂ ಪೂಜಾ ಕುಣಿತ ಸೇರಿದಂತೆ ಜಾನಪದ ಕಲಾತಂಡಗಳು ಪಾದಯಾತ್ರೆಗೆ ಮೆರಗು ತಂದವು. ಕನ್ನಡ ಬಾವುಟಗಳು ರಾರಾಜಿಸಿದವು.
‘ಸಂಜೆ ಸಂಜೆ 6.30ರ ಸುಮಾರಿಗೆ ಪಾದಯಾತ್ರೆ ಬಿಡದಿ ತಲುಪಿತು. ರಾಜ್ಯ ಮತ್ತು ವಿವಿಧ ಜಿಲ್ಲೆಗಳಿಂದ ಬಂದಿದ್ದ ಎಲ್ಲ ಪದಾಧಿಕಾರಿಗಳಿಗೆ ರಾತ್ರಿ ಅಲ್ಲೇ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಶನಿವಾರ ಬೆಳಿಗ್ಗೆ 7ಕ್ಕೆ ಪಾದಯಾತ್ರೆ ಬೆಂಗಳೂರು ಕಡೆಗೆ ಹೊರಡಲಿದೆ’ ಎಂದು ವೇದಿಕೆ ಜಿಲ್ಲಾಧ್ಯಕ್ಷ ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.