ADVERTISEMENT

ಮಾಗಡಿ ಕ್ಷೇತ್ರ ಸ್ಥಿತಿ –ಗತಿ: ಸಾಂಪ್ರದಾಯಿಕ ಎದುರಾಳಿಗಳ ನಡುವೆ ಕದನ

ತ್ರಿಮೂರ್ತಿಗಳ ಪೈಕಿ ಯಾರ ಪಾಲಾಗಲಿದೆ ಬಿಜೆಪಿ ಟಿಕೆಟ್‌?

ಆರ್.ಜಿತೇಂದ್ರ
Published 25 ಜನವರಿ 2023, 4:48 IST
Last Updated 25 ಜನವರಿ 2023, 4:48 IST
ಮಂಜುನಾಥ್‌
ಮಂಜುನಾಥ್‌   

ರಾಮನಗರ: ಕೆಂಪೇಗೌಡರ ನಾಡು ಮಾಗಡಿಯಲ್ಲಿ ಈ ಬಾರಿಯೂ ಕಳೆದ ಚುನಾವಣೆಯ ಜಿದ್ದಾಜಿದ್ದಿಯೇ ಮುಂದುವರಿಯುವ ಸಾಧ್ಯತೆ ಹೆಚ್ಚಿದ್ದು, ಸಾಂಪ್ರದಾಯಿಕ ಎದುರಾಳಿಗಳ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಕಳೆದ ಬಾರಿಯ ಸ್ಪರ್ಧಿಗಳೇ ಮುಖಾಮುಖಿ ಆಗುವುದು ಖಚಿತವಾಗಿದೆ. ಬಿಜೆಪಿಯಿಂದ ಈ ಬಾರಿ ಯಾರು ಕಣಕ್ಕೆ ಇಳಿಯಲಿದ್ದಾರೆ ಎಂಬುದೇ ಸದ್ಯದ ಕುತೂಹಲ. ಹಾಲಿ ಶಾಸಕ ಎ.ಮಂಜುನಾಥ್‌ ಕಳೆದ ಡಿಸೆಂಬರ್‌ನಲ್ಲಿ ಕುಮಾರಸ್ವಾಮಿ ಜನ್ಮದಿನದ ಅದ್ದೂರಿ ಆಚರಣೆ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಎಚ್‌.ಸಿ. ಬಾಲಕೃಷ್ಣ ಜನಾಶೀರ್ವಾದ ಯಾತ್ರೆ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿ ಇದ್ದಾರೆ.

1994ರಲ್ಲಿ ಬಿಜೆಪಿಯಿಂದ ಗೆದ್ದು ರಾಜಕೀಯ ಜೀವನದ ಇನ್ನಿಂಗ್ಸ್‌ ಆರಂಭಿಸಿದ ಎಚ್‌.ಸಿ. ಬಾಲಕೃಷ್ಣ ನಂತರದ ಮೂರು ಚುನಾವಣೆಗಳಲ್ಲಿ ಜೆಡಿಎಸ್‌ ನಿಂದ ಶಾಸಕರಾಗಿ ಆಯ್ಕೆಯಾದವರು. ಕಳೆದ ಬಾರಿ ‘ಕೈ’ ಹಿಡಿದು ಪರಾಭವಗೊಂಡಿದ್ದ ಅವರು, ಈ ಬಾರಿ ಮತದಾರರು ಕೈ ಹಿಡಿಯುವ ವಿಶ್ವಾಸದೊಂದಿಗೆ ಸ್ಪರ್ಧೆಗೆ ಮುಂದಾಗಿದ್ದಾರೆ.

ADVERTISEMENT

ಕುದೂರು ಜಿಲ್ಲಾ ಪಂಚಾಯಿತಿ ಸದಸ್ಯತ್ವದ ಮೂಲಕ ರಾಜಕೀಯ ಜೀವನದ ಇನ್ನಿಂಗ್ಸ್‌ ಆರಂಭಿಸಿದ್ದ ಎ. ಮಂಜುನಾಥ್‌ 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಾಲಕೃಷ್ಣ ಎದುರು ಸ್ಪರ್ಧಿಸಿ ಪರಾಭವಗೊಂಡಿದ್ದರು. 2018ರಲ್ಲಿ ಜೆಡಿಎಸ್‌ಗೆ ವಲಸೆ ಬಂದ ಅವರಿಗೆ ಪ್ರಚಂಡ ಗೆಲುವೇ ಸಿಕ್ಕಿದೆ. ಈ ಬಾರಿ ಬಾಲಕೃಷ್ಣ ಎದುರು ಹ್ಯಾಟ್ರಿಕ್‌ ಮುಖಾಮುಖಿ ಆಗಲಿರುವ ಅವರು ಅದೇ ಫಲಿತಾಂಶದ ಉತ್ಸಾಹದಲ್ಲಿ ಇದ್ದಾರೆ.

ಉತ್ತಮ ಅವಕಾಶಗಳು ಇದ್ದರೂ ಇಲ್ಲಿ ಬಿಜೆಪಿ ಸ್ಪರ್ಧೆಗೆ ಹೆಚ್ಚು ಉತ್ಸಾಹ ತೋರಿಲ್ಲ. 2008ರಲ್ಲಿ ಪಿ. ನಾಗರಾಜು ಇದೇ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸಿ 51,072 ಮತ ಗಳಿಸಿದ್ದರು. ಆದರೆ ಕಳೆದೆರಡು ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಠೇವಣಿಯೂ ಉಳಿದಿಲ್ಲ.

ಈ ಬಾರಿ ಪ್ರಸಾದ್‌ ಗೌಡ ಹಾಗೂ ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಂಗಧಾಮಯ್ಯ ಹೆಸರು ಚಾಲ್ತಿಯಲ್ಲಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಬೆನ್ನಿಗೆ ನಿಂತಿದ್ದ ಎಚ್‌.ಎಂ. ಕೃಷ್ಣಮೂರ್ತಿ ಈ ಬಾರಿ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಆಗಿದ್ದಾರೆ. ಕಳೆದ ಮೂರುವರೆ ವರ್ಷ ಕಾಲ ಜಿಲ್ಲೆಯ ಆಡಳಿತದ ಚುಕ್ಕಾಣಿ ಹಿಡಿದಿರುವ ಸಚಿವ ಸಿ.ಎನ್‌. ಅಶ್ವತ್ಥನಾರಾಯಣ ಮೂಲತಃ ಮಾಗಡಿಯವರು. ತವರಿನಲ್ಲಿ ಯಾರಿಗೆ ಪಕ್ಷದ ಟಿಕೆಟ್‌ ಕೊಡಿಸಲಿದ್ದಾರೆ ಎಂಬುದು ಸದ್ಯಕ್ಕೆ ಉಳಿದಿರುವ ಕುತೂಹಲ.

ಜಾತಿ ಸಮೀಕರಣ; ಕ್ಷೇತ್ರದ ವ್ಯಾಪ್ತಿಯಲ್ಲಿ ಒಕ್ಕಲಿಗ ಸಮುದಾಯವು ಪ್ರಬಲವಾಗಿದೆ. ನಂತರದಲ್ಲಿ ದಲಿತರು, ಮುಸ್ಲಿಮರು ಹೆಚ್ಚಾಗಿದ್ದು ನಿರ್ಣಾಯಕರಾಗಿದ್ದಾರೆ. ಲಿಂಗಾಯತರು , ಕುರುಬ ಮತ್ತು ದೇವಾಂಗ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಮಾಗಡಿ ವಿಧಾನಸಭಾ ಕ್ಷೇತ್ರದ ಭೂಪಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.