
ರಾಮನಗರ: ‘ಸಮುದಾಯದ ಸಂಘಟನೆ ಹಾಗೂ ಅಭಿವೃದ್ಧಿಗೆ ಸಂಘದ ಅಗತ್ಯವಿದೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಬಂಜಾರ ಸಮಾಜದ ಏಳಿಗೆಗೆ ಶ್ರಮಿಸುವ ಉದ್ದೇಶದಿಂದ ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ ಸ್ಥಾಪಿಸಲಾಗಿದೆ’ ಎಂದು ಸಂಘದ ಕಾರ್ಯಾಧ್ಯಕ್ಷ ಹಾಗೂ ಬಂಜಾರ ಸಂಸ್ಕೃತಿ ಭಾಷಾ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಆರ್. ಗೋವಿಂದಸ್ವಾಮಿ ಹೇಳಿದರು.
ನಗರದ ಎಂ.ಜಿ. ರಸ್ತೆಯಲ್ಲಿ ಸೋಮವಾರ ಸಂಘದ ನೂತನ ಕಚೇರಿ ಉದ್ಘಾಟನೆ ಹಾಗೂ ನೋಂದಣಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ‘ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯಲ್ಲಿ ಸಂಘದ ಘಟಕ ಇರಲಿಲ್ಲ. ಜಿಲ್ಲೆಯಲ್ಲಿರುವ ಸಮುದಾಯದವರ ಅನುಕೂಲಕ್ಕಾಗಿ ಈ ಸಂಘ ಸ್ಥಾಪಿಸಲಾಗಿದೆ. ಸಂಘಕ್ಕೆ ಹೆಚ್ಚಿನ ಸದಸ್ಯರನ್ನು ನೋಂದಣಿ ಮಾಡಿಸಬೇಕು’ ಎಂದರು.
‘ಜಿಲ್ಲೆಯ ನಿವಾಸಿಗಳಾಗಿರುವ ಸಮುದಾಯದ ಎಲ್ಲರಿಗೂ ಸಂವಿಧನಾತ್ಮಕ ಮೀಸಲಾತಿ ಹಕ್ಕುಗಳು ಸೇರಿದಂತೆ ಸರ್ಕಾರದ ಸವಲತ್ತುಗಳನ್ನು ದೊರಕಿಸಿ ಕೊಡಲು ಸಂಘ ಶ್ರಮಿಸಲಿದೆ. ಉತ್ಸಾಹಿ ಯುವಕರು ಸಂಘದ ಪದಾಧಿಕಾರಿಗಳಾಗಿದ್ದು, ರಾಜ್ಯಕ್ಕೆ ಮಾದರಿಯಾಗುವಂತಹ ಕಾರ್ಯನಿರ್ವಹಣೆ ಮಾಡುವ ವಿಶ್ವಾಸವಿದೆ. ಇವರಿಗೆ ಬೆಂಬಲವಾಗಿ ರಾಜ್ಯದ ಪದಾಧಿಕಾರಿಗಳು ಹಾಗೂ ತಾವು ಕೆಲಸ ಮಾಡುತ್ತೇವೆ’ ಎಂದು ಹೇಳಿದರು.
‘ಜಿಲ್ಲೆಯ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುವ ಮೂಲಕ, ಬಂಜಾರ ಭವನ ನಿರ್ಮಾಣಕ್ಕೆ ಉಚಿತ ನಿವೇಶನ ಪಡೆಯಲು ಪ್ರಯತ್ನಿಸೋಣ. ಇನ್ನೊಂದು ವರ್ಷದಲ್ಲಿಈ ಕೆಲಸ ಆಗಬೇಕಾಗಿದೆ. ಅದಕ್ಕೆ ಸಮುದಾಯದ ಎಲ್ಲರೂ ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.
ಕಚೇರಿ ಉದ್ಘಾಟಿಸಿದ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ವಿ. ಸಿದ್ದಯ್ಯ ನಾಯ್ಕ ಮಾತನಾಡಿ, ‘ಸಮುದಾಯಕ್ಕೆ ಅನೇಕ ವಿಚಾರಗಳಲ್ಲಿ ಅನ್ಯಾಯವಾಗುತ್ತಿದೆ. ಸವಲತ್ತುಗಳು ಸರಿಯಾಗಿ ತಲುಪುತ್ತಿಲ್ಲ. ನೂತನ ಸಂಘದ ಮೂಲಕ ಹಕ್ಕುಗಳನ್ನು ಪ್ರತಿಪಾದಿಸೋಣ. ಜಿಲ್ಲೆಯಲ್ಲಿ ಲಂಬಾಣಿ ಜನಸಂಖ್ಯೆ ಸಾಕಷ್ಟಿದೆ. ಅವರ ಶ್ರೇಯೋಭಿವೃದ್ದಿಗೆ ಸಂಘ ಸ್ಥಾಪನೆಯಾಗಿದೆ’ ಎಂದರು.
‘ಜಿಲ್ಲೆಯಲ್ಲಿರುವ ಅಭಿವೃಧ್ದಿ ಪ್ರಾಧಿಕಾರಗಳು ತಮ್ಮ ವ್ಯಾಪ್ತಿಯಲ್ಲಿ ಬಂಜಾರ ಭವನಗಳನ್ನು ನಿರ್ಮಿಸಿಕೊಳ್ಳಲು ನಿವೇಶನ ಮಂಜೂರು ಮಾಡಬೇಕು. ಈ ವಿಚಾರದಲ್ಲಿ ರಾಜ್ಯದಲ್ಲಿರುವ ಬಂಜಾರ ಅಭಿವೃದ್ದಿ ನಿಗಮವೂ ಸಹಕಾರ ನೀಡಬೇಕು. ಇಲ್ಲದಿದ್ದರೆ ಹೋರಾಟದ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ’ ಎಂದು ಹೇಳಿದರು.
ನೂತನ ಸಂಘದ ಜಿಲ್ಲಾಧ್ಯಕ್ಷ ಧನಂಜಯ ನಾಯ್ಕ, ಪ್ರಧಾನ ಕಾರ್ಯದರ್ಶಿ ಕೃಷ್ಣ ನಾಯ್ಕ ಹಾಗೂ ಇತರರು ಇದ್ದರು.
ಸಂಘಟನೆಯ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಈ ವಿಚಾರದಲ್ಲಿ ನಮ್ಮ ಪಾಲಿನ ರಾಜಕೀಯ ಪ್ರಾತಿನಿಧ್ಯ ಪಡೆಯಲು ಸಂಘ ಕಾರ್ಯನ್ಮುಖವಾಗಲಿದೆಎ.ಆರ್. ಗೋವಿಂದಸ್ವಾಮಿ ಕಾರ್ಯಾಧ್ಯಕ್ಷ ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ
‘ಮುಂಬರುವ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಬಂಜಾರ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಸಮುದಾಯದವರಿಗೆ ಟಿಕೆಟ್ ಕೊಟ್ಟು ಸ್ಪರ್ಧೆಗೆ ಅವಕಾಶ ಮಾಡಿಕೊಡಬೇಕು. ಈ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸಂಪರ್ಕಿಸಲಾಗುವುದು. ನಮ್ಮ ಆಶೋತ್ತರಗಳಿಗೆ ಸ್ಪಂದಿಸುವ ಪಕ್ಷಗಳಿಗೆ ಸಮುದಾಯದ ಬೆಂಬಲ ಸಿಗಲಿದೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ವಿ. ಸಿದ್ದಯ್ಯ ನಾಯ್ಕ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.