
ಬಿಡದಿಯಲ್ಲಿ ನಡೆದ ಮಾಗಡಿ ಕೆಂಪೇಗೌಡ ಉತ್ಸವ-2025 ಸಮಾರೋಪ ಸಮಾರಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಬಿಡದಿ (ರಾಮನಗರ): ಮಾಗಡಿ ಕೆಂಪೇಗೌಡ ಉತ್ಸವ–2025 ಪ್ರಯುಕ್ತ ಬಿಡದಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಹಾಗೂ ಶ್ರೀ ಬಸವೇಶ್ವರ ಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಸಂಭ್ರಮದ ತೆರೆ ಕಂಡಿತು.
ಸಾಂಸ್ಕೃತಿಕ ಸ್ಪರ್ಧಾ ವಿಭಾಗದಲ್ಲಿ 16 ವರ್ಷದೊಳಗಿನ ಶಾಲಾ ಮಕ್ಕಳು ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ 16 ವರ್ಷ ಮೇಲ್ಪಟ್ಟ ಯುವ ಸಮೂಹ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿ ಮೆಚ್ಚುಗೆ ಗಳಿಸಿತು. ವಾಯ್ಸ್ ಆಫ್ ಬಿಡದಿ ಗ್ರೂಪ್‌ನಲ್ಲಿ ಚಿತ್ರಗೀತೆ, ದೇಶಭಕ್ತಿ ಗೀತೆ, ಜನಪದ ಗೀತೆಗಳು, ಸಮೂಹ ನೃತ್ಯ ಸ್ಪರ್ಧೆಗಳು, ವೇಷಭೂಷಣ ಸ್ಪರ್ಧೆಗಳಲ್ಲಿ ಬಿಡದಿ ಹೋಬಳಿಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ 3,605 ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
ಕ್ರೀಡಾ ಸ್ಪರ್ಧೆಗಳಲ್ಲಿ 106 ಕ್ರಿಕೆಟ್ ತಂಡಗಳು, 84 ವಾಲಿಬಾಲ್ ತಂಡ, 16 ಕಬಡ್ಡಿ ತಂಡ ಹಾಗೂ 63 ಜೋಡಿ ಶಟಲ್ ಬ್ಯಾಡ್ಮಿಂಟನ್ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದವು. ಸ್ಥಳದಲ್ಲಿ ಚಿತ್ರಬಿಡಿಸುವ ಸ್ಪರ್ಧೆ ಹಾಗೂ ರಂಗಗೀತೆ ಸ್ಪರ್ಧೆಗಳು ನಡೆದವು. ರಂಗಗೀತೆ ಸ್ಪರ್ಧೆಯಲ್ಲಿ 165 ಮಂದಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಬಿಡದಿಯ ಬಿಜಿಎಸ್ ವೃತ್ತದಲ್ಲಿ ಸಂಜೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ 2025–26ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ 70ಕ್ಕೂ ಹೆಚ್ಚು ಅಂಕಗಳನ್ನು ಪಡೆದ, ಬಿಡದಿ ಹೋಬಳಿಯ 555 ವಿದ್ಯಾರ್ಥಿಗಳು ಮತ್ತು ಕೂಟಗಲ್ ಹೋಬಳಿಯ 198 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್. ನಟರಾಜ್ ಗಾಣಕಲ್ ಮಾತನಾಡಿ, ‘ಉತ್ಸವದ ಪ್ರಯುಕ್ತ ಎರಡು ದಿನ ನಡೆದ ಗಾಯನ, ಸಮೂಹ ನೃತ್ಯ ಹಾಗೂ ವೇಷಭೂಷಣ ಸ್ಪರ್ಧೆಗಳು, ಚಿತ್ರ ಬಿಡಿಸುವ ಸ್ಪರ್ಧೆ, ರಂಗಗೀತೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ನೆನಪಿನ ಕಾಣಿಕೆ ವಿತರಿಸಲಾಗಿದೆ’ ಎಂದು ತಿಳಿಸಿದರು.
‘ಎಲ್ಲಾ ಸ್ಪರ್ಧೆಗಳಲ್ಲಿ ವಿಜೇತರಾದ ತಲಾ ನಾಲ್ವರನ್ನು ಆಯ್ಕೆಮಾಡಿ ಡಿ. 25ರಿಂದ ಮಾಗಡಿಯಲ್ಲಿ ನಡೆಯಲಿರುವ ವಿಧಾನಸಭಾ ಕ್ಷೇತ್ರ ಮಟ್ಟಕ್ಕೆ ಕಳುಹಿಸಲಾಗುವುದು. ನಂತರ ಜನವರಿಯಲ್ಲಿ ಕನಕಪುರದಲ್ಲಿ ನಡೆಯುವ ಜಿಲ್ಲಾಮಟ್ಟದ ಕನಕೋತ್ಸವಕ್ಕೆ ತಲಾ ಮೂವರನ್ನು ಆಯ್ಕೆ ಮಾಡಲಾಗುವುದು’ ಎಂದು ಹೇಳಿದರು.
ಬಿಜಿಎಸ್ ವೃತ್ತದಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ರವಿ, ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪವಿತ್ರ ಬಸವರಾಜು, ಹೊಂಬೇಗೌಡ, ಸರೋಜ ನಾಗರಾಜು, ರಾಧಾಕುಮಾರ್, ಪ್ರಮುಖರಾದ ಎಲ್. ಚಂದ್ರಶೇಖರ್, ಬೆಟ್ಟಸ್ವಾಮಿ, ಹೊಸೂರು ರಾಜಣ್ಣ, ಅಬ್ಬನಕುಪ್ಪೆ ರಮೇಶ್, ಸಿದ್ಧರಾಜು, ಹೇಮಂತ್ ಕುಮಾರ್, ಪುರಸಭೆ ಸದಸ್ಯರಾದ ಸಿ. ಉಮೇಶ್, ಹೊಂಬಯ್ಯ, ಶ್ರೀನಿವಾಸ್, ನವೀನ್, ಪದ್ಮ, ಬಿಂದಿಯಾ ಮಂಜು, ರಮ್ಯ ಧನಂಜಯ, ರೇಣುಕಪ್ಪ, ಬಿಇಒ ಸೋಮಲಿಂಗಯ್ಯ, ಸಿಆರ್‌ಪಿ ಚಿಕ್ಕವೀರಯ್ಯ ಹಾಗೂ ಇತರರು ಇದ್ದರು. ಜ್ಞಾನ ಗುರುರಾಜ್ ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.
27ಕ್ಕೆ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ
‘ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಲು ಮತ್ತು ಸ್ಪರ್ಧಾತ್ಮಕ ಮನೋಭಾವನೆ ಮೂಡಿಸುವ ನಿಟ್ಟಿನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಸೂಚನೆಯಂತೆ ಶಾಲಾ ಮಕ್ಕಳಿಗೆ ಸಾಂಸ್ಕೃತಿ ವೇದಿಕೆ ಹಾಗೂ ಯುವಜನರಿಗೆ ಕ್ರೀಡಾ ಸ್ಪರ್ಧೆ ಆಯೋಜಿಸಲಾಗಿತ್ತು. ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಡದಿ ಮತ್ತು ಕೂಟಗಲ್ ಹೋಬಳಿಗಳಿಂದ ನೂರಾರು ಮಂದಿ ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿರುವುದು ಸಂತಸ ತಂದಿದೆ. ಡಿ. 25ರಿಂದ ಕ್ಷೇತ್ರ ವ್ಯಾಪ್ತಿಯ ಸ್ಪರ್ಧೆಗಳು ಮಾಗಡಿಯಲ್ಲಿ ಆರಂಭವಾಗಲಿವೆ. ಡಿ. 27ರಂದು ಮಾಗಡಿಯಲ್ಲಿ ತಿರುಪತಿ ತಿರುಮಲ ಅರ್ಚಕರಿಂದ ಶ್ರೀನಿವಾಸ ಕಲ್ಯಾಣ ಧಾರ್ಮಿಕ ಕಾರ್ಯಕ್ರಮನು ಕೂಡ ಹಮ್ಮಿಕೊಳ್ಳಲಾಗಿದೆ. ಅಂದು ಮನೆಮನೆಗೆ ತಿರುಪತಿ ಲಡ್ಡು ವಿತರಿಸಲಾಗುವುದು’ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.