
ಚನ್ನಪಟ್ಟಣ: ತಾಲ್ಲೂಕಿನ ಹೊಂಗನೂರು ಕರ್ನಾಟಕ ಪಬ್ಲಿಕ್ ಶಾಲೆಗೆ ಸುತ್ತಮುತ್ತಲಿನ 6 ಕಿ.ಮೀ ವ್ಯಾಪ್ತಿಯ 7 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ವಿಲೀನಗೊಳಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಈ ನಿರ್ಧಾರದಿಂದ ಏಳು ಶಾಲೆಗಳು ಮುಚ್ಚುವ ಅಪಾಯ ಎದುರಿಸುತ್ತಿವೆ.
ಹೊಂಗನೂರು ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ವ್ಯಾಪ್ತಿಗೆ ಬರುವ ಕನ್ನಿದೊಡ್ಡಿ, ಅಮ್ಮಳ್ಳಿದೊಡ್ಡಿ, ಚನ್ನಂಕೇಗೌಡನದೊಡ್ಡಿ ಗ್ರಾಮಗಳ ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು ಹೊಡಿಕೆಹೊಸಹಳ್ಳಿ, ಸಂತೆ ಮೊಗೇನಹಳ್ಳಿ, ಎಸ್.ಎಂ.ದೊಡ್ಡಿ, ಸುಣ್ಣಘಟ್ಟ ಗ್ರಾಮಗಳ ಕಿರಿಯ ಪ್ರಾಥಮಿಕ ಶಾಲೆಗಳನ್ನು ವಿಲೀನಗೊಳಿಸಲು ಚನ್ನಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಕ್ಟೋಬರ್‌ನಲ್ಲಿ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ 800 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ‘ಮ್ಯಾಗ್ನೆಟ್ ಶಾಲೆಗಳಾಗಿ’ ಗುರುತಿಸಲಾಗಿದೆ. 50ಕ್ಕಿಂತ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿರುವ ಸುತ್ತಮುತ್ತಲಿನ ಶಾಲೆಗಳನ್ನು ಈ ಮ್ಯಾಗ್ನೆಟ್ ಶಾಲೆಗಳಲ್ಲಿ ವಿಲೀನಗೊಳಿಸುವ ಯೋಜನೆಯಡಿ ಹೊಂಗನೂರು ಕೆಪಿಎಸ್ ಶಾಲೆಯನ್ನು ಪ್ರಾಯೋಗಿಕವಾಗಿ ಮೊದಲು ಆಯ್ಕೆ ಮಾಡಲಾಗಿದೆ. ಡಾ.ವೆಂಕಟಪ್ಪ ಅವರ ₹14 ಕೋಟಿ ಸಹಾಯಧನದಲ್ಲಿ ಈ ಶಾಲೆಯನ್ನು ನಿರ್ಮಿಸಲಾಗಿದೆ. ಸುಸಜ್ಜಿತ ತರಗತಿ, ಗ್ರಂಥಾಲಯ, ಪ್ರಯೋಗಾಲಯ ಮತ್ತು ಆಟದ ಮೈದಾನ ಇದೆ.
ವಿಲೀನದ ನಿರ್ಧಾರ ಖಂಡಿಸಿ ಪೋಷಕರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಹೋರಾಟ ಆರಂಭಿಸಿರುವ ಪೋಷಕರು, ‘ನಮ್ಮ ಮಕ್ಕಳನ್ನು ಬೇರೆ ಗ್ರಾಮಕ್ಕೆ ಕಳುಹಿಸಲು ಇಷ್ಟವಿಲ್ಲ. 50 ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಗಳನ್ನು ಮುಚ್ಚಲು ಬಿಡುವುದಿಲ್ಲ’ ಎಂದು ತಿಳಿಸಿದ್ದಾರೆ.
ವಿಲೀನ ಶಾಲೆಗಳಲ್ಲಿ 50 ರಿಂದ 100 ವಿದ್ಯಾರ್ಥಿಗಳ ದಾಖಲಾತಿ ಇದ್ದರೂ ಹೊಂಗನೂರು ಕೆಪಿಎಸ್ ಶಾಲೆಗೆ ವಿಲೀನ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಗ್ರಾಮಸ್ಥರು ಶಾಲೆಗಳ ಐತಿಹಾಸಿಕ ಮಹತ್ವ ಮತ್ತು ಸ್ಥಳೀಯ ಶಿಕ್ಷಣದ ಪ್ರಾಮುಖ್ಯತೆ ಹಿನ್ನೆಲೆಯಲ್ಲಿ ತಮ್ಮ ಹೋರಾಟ ಮುಂದುವರಿಸುವ ನಿರ್ಧಾರ ಕೈಗೊಂಡಿದ್ದಾರೆ.
ಶಾಲೆಗಳನ್ನು ಮುಚ್ಚಬಾರದು ‘ತಾಲ್ಲೂಕಿನ 7 ಗ್ರಾಮಗಳ ಶಾಲೆಗಳನ್ನು ಹೊಂಗನೂರು ಕೆಪಿಎಸ್ ಶಾಲೆಗೆ ವಿಲೀನ ಮಾಡುವ ನೆಪದಲ್ಲಿ ಈ ಶಾಲೆಗಳನ್ನು ಮುಚ್ಚಲು ಸರ್ಕಾರ ಹುನ್ನಾರ ನಡೆಸುತ್ತಿದೆ. ಯಾವುದೇ ಶಾಲೆಯಾದರೂ ಕಡಿಮೆ ದಾಖಲಾತಿ ಇದ್ದರೂ ಅದನ್ನು ಮುಚ್ಚಬಾರದು ಎನ್ನುವ ನಿಯಮ ಇದೆ. ಆದರೆ ಈ ಶಾಲೆಗಳಲ್ಲಿ 50ಕ್ಕೂ ಹೆಚ್ಚು ದಾಖಲಾತಿ ಇದ್ದರೂ ಮುಚ್ಚುವ ಸಂಚು ನಡೆಯುತ್ತಿದೆ. ಇದನ್ನು ನಾವು ವಿರೋಧಿಸುತ್ತೇವೆ.ರೋಹಿತ್ ಜಿಲ್ಲಾ ಸಂಚಾಲಕ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ
ಸರ್ಕಾರಿ ಶಾಲೆಗಳನ್ನು ಉಳಿಸಿ ‘ನಮ್ಮ ಗ್ರಾಮಗಳಲ್ಲಿ ಸರ್ಕಾರಿ ಶಾಲೆಗಳು 50ಕ್ಕೂ ಹೆಚ್ಚು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ. ಈ ಶಾಲೆಗಳನ್ನು ಈಗ ಮುಚ್ಚಿದರೆ ಮತ್ತೆ ಗ್ರಾಮಕ್ಕೆ ಶಾಲೆಗಳನ್ನು ತರಲು ಸಾಧ್ಯವಾಗುವುದಿಲ್ಲ. ಇವು ಶಾಶ್ವತವಾಗಿ ಮುಚ್ಚಿದಂತೆಯೇ ಸರಿ. ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಈ ಶಾಲೆಗಳನ್ನು ಮುಚ್ಚುವ ಕಾರ್ಯ ಕೈಬಿಡಬೇಕು. ಈ ಶಾಲೆಗಳನ್ನು ಉಳಿಸಿ ಗ್ರಾಮಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು’.ಮಂಜುನಾಥ್ ಪೋಷಕ ಸಂತೆ ಮೊಗೇನಹಳ್ಳಿ
ಗುಣಮಟ್ಟದ ಶಿಕ್ಷಣ ಆದ್ಯತೆಯಾಗಲಿ ಸರ್ಕಾರದ ಆದೇಶದಂತೆ ಹೊಂಗನೂರು ಕೆಪಿಎಸ್ ಶಾಲೆಗೆ ಈ ವ್ಯಾಪ್ತಿಯ 7 ಶಾಲೆಗಳನ್ನು ವಿಲೀನ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಸೌಲಭ್ಯ ಸಿಗುವಂತೆ ಮಾಡುವುದು ಶಿಕ್ಷಣ ಇಲಾಖೆ ಉದ್ದೇಶ. ವಿದ್ಯಾರ್ಥಿಗಳು ಹಾಗೂ ಪೋಷಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು.ರಾಮಲಿಂಗಯ್ಯ ಬಿಇಒ ಚನ್ನಪಟ್ಟಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.