ರಾಮನಗರ: ‘ಪ್ರವಾಸಿ ತಾಣವಾಗಿರುವ ರಂಗರಾಯರದೊಡ್ಡಿ ಕೆರೆ ಉದ್ಯಾನವನದ ಅಭಿವೃದ್ದಿಗೆ ನಗರಸಭೆಯು ₹30 ಲಕ್ಷ ಮೀಸಲಿಡಲಾಗಿದೆ. ಅಭಿವೃದ್ದಿ ಕಾಮಗಾರಿಗಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಕೆರೆ ದಡದಲ್ಲಿರುವ ಉದ್ಯಾನವನ, ಸೂಕ್ತ ಬೆಳಕಿನ ವ್ಯವಸ್ಥೆ ಜೊತೆಗೆ ನೀರಿನ ಶುದ್ಧಿಕರಣಕ್ಕೂ ಆದ್ಯತೆ ನೀಡಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹೇಳಿದರು.
ತುಂಬಿ ಹರಿಯುತ್ತಿರುವ ನಗರದ ರಂಗರಾಯರದೊಡ್ಡಿ ಕೆರೆಗೆ ಪಂಚವಟಿ ಶಾಂತಿಧಾಮ, ಪಂಚವಟಿ ವಾಯುವಿಹಾರ ಬಳಗ ಹಾಗೂ ಕುವೆಂಪು ಉದ್ಯಾನ ಸದಸ್ಯರ ಸಹಯೋಗದಲ್ಲಿಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ‘ಪ್ರವಾಸಿಗರು ಕೆರೆಯ ಸೌಂದರ್ಯ ಸವಿಯುವುದಕ್ಕೆ ಪೂರಕವಾಗಿ ಕೆರೆಗೆ ಹೊಂದಿಕೊಂಡಂತಿರುವ ಗುಡ್ಡದಲ್ಲಿ ವೀಕ್ಷಣಾ ಕೇಂದ್ರ ನಿರ್ಮಿಸಲಾಗುವುದು’ ಎಂದು ಭರವಸೆ ನೀಡಿದರು.
‘ತುಂಬಿ ಹರಿಯುವ ನದಿ ಮತ್ತು ಕೆರೆಗಳಿಗೆ ಬಾಗಿನ ಅರ್ಪಣೆ ಮಾಡುವುದು ನಮ್ಮ ದೇಶದ ಪರಂಪರೆಯ ಪ್ರತೀಕ. ನಾಡಿಗೆ ಶ್ರೇಯಸ್ಸು ಬಯಸುವ ಇಂತಹ ಆಚರಣೆಗಳು ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಿವೆ. ಇಂತಹ ಕಾರ್ಯಕ್ರಮಗಳ ಮೂಲಕ, ಇಂದಿನ ಪೀಳಿಗೆಯಲ್ಲಿ ನಮ್ಮ ಸಂಸ್ಕತಿ ಮತ್ತು ಪರಂಪರೆಗಳ ಬಗ್ಗೆ ಅರಿವು ಮೂಡುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ನಗರದ ವ್ಯಾಪ್ತಿಯಲ್ಲಿ ಇಂತಹದ್ದೊಂದು ರಮ್ಯ ಮನೋಹರ ತಾಣವಾದ ಕೆರೆ ಇರುವುದು ನಮ್ಮ ಅದೃಷ್ಟ. ಅದನ್ನು ಪ್ರವಾಸಿ ತಾಣವಾಗಿ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ನಾನು ಹಿಂದೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ, ಇಲ್ಲಿ ಕೆಲ ಅಭಿವೃದ್ದಿ ಕೆಲಸಗಳನ್ನು ಕೈಗೊಂಡಿದ್ದೆ. ನಂತರದ ದಿನಗಳಲ್ಲಿ ಕೆರೆ ಅಭಿವೃದ್ಧಿ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು’ ಎಂದು ತಿಳಿಸಿದರು.
ನಗರಸಭೆ ಸದಸ್ಯರಾದ ಮಂಜುನಾಥ್, ಪಾರ್ವತಮ್ಮ, ವಿಜಯಕುಮಾರಿ ಮಾತನಾಡಿ, ‘ಈ ಭಾಗದ ಅಭಿವೃದ್ದಿಗೆ ಅನುದಾನ ಬಿಡುಗಡೆ ಮಾಡಬೇಕು’ ಎಂದು ಮನವಿ ಮಾಡಿದರು.
ಸದಸ್ಯರಾದ ಪವಿತ್ರ ಲಕ್ಷ್ಮೀಪತಿ, ಮುತ್ತುರಾಜು, ಪಂಚವಟಿ ಶಾಂತಿಧಾಮ ಸಮಿತಿ ಅಧ್ಯಕ್ಷ ಬಿ. ರಾಮಚಂದ್ರಯ್ಯ, ಪ್ರಧಾನ ಕಾರ್ಯದರ್ಶಿ ಮಲ್ಲರಾಜೇ ಅರಸ್, ಖಜಾಂಚಿ ಡಿ.ಸಿ. ಕೃಷ್ಣಯ್ಯ, ಪ್ರಮುಖರಾದ ಲಕ್ಷ್ಮೀನರಸಿಂಹಯ್ಯ, ಸಿ. ಕೃಷ್ಣಮೂರ್ತಿ, ಬಿ.ಜಿ. ಪುಟ್ಟಸ್ವಾಮಿ, ಕೆ. ನರಸಿಂಹಯ್ಯ, ರಾಜು ನರಸಿಂಹಯ್ಯ, ಭದ್ರಯ್ಯ, ಶಿವರಾಜು, ವಿ.ಟಿ. ಶಿವಣ್ಣ, ಗುರುಪ್ರಸಾದ್, ರಮೇಶ್, ಮುನಿವೆಂಕಟಯ್ಯ, ಜೆ.ಪಿ. ಗಿರೀಶ್, ವೆಂಕಟೇಶ್ ಹಾಗೂ ಮರಿಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.