ರಾಮನಗರದ ಶಾಂತಿನಿಕೇತನ ವಿದ್ಯಾಸಂಸ್ಥೆ ಆವರಣದಲ್ಲಿ ರಾಮನಗರ ರೋಟರಿ ಸಂಸ್ಥೆ ಮತ್ತು ಬೆಂಗಳೂರಿನ ಗ್ಯಾಸ್ಟ್ರೊ ಸೆಂಟರ್ ಸಹಯೋಗದಲ್ಲಿ ನಡೆದ ಗ್ಯಾಸ್ಟ್ರಿಕ್ ಸಂಬಂಧಿತ ಆರೋಗ್ಯ ಸಮಸ್ಯೆಗಳ ಶಿಬಿರಕ್ಕೆ ಸಂಸದ ಡಾ. ಸಿ. ಎನ್. ಮಂಜುನಾಥ್ ಭೇಟಿ ನೀಡಿದರು.
ರಾಮನಗರ: ‘ಬದಲಾದ ಜೀವನ ಶೈಲಿಯಿಂದಾಗಿ ರೋಗಗಳು ಹೆಚ್ಚುತ್ತಿವೆ. ಹೃದಯಾಘಾತ, ಜೀರ್ಣಾಂಗಕ್ಕೆ ಸಂಬಂಧಿಸಿದ ಕಾಯಿಲೆಗಳಿಗೂ ಶಿಸ್ತು ಇಲ್ಲದ ಜೀವನ ಶೈಲಿಯೇ ಕಾರಣ. ಆಹಾರ, ನಿದ್ರೆ, ವ್ಯಾಯಾಮ, ಉತ್ತಮ ಅಭ್ಯಾಸಗಳು ಮನುಷ್ಯನನ್ನು ರೋಗಗಳಿಂದ ದೂರು ಇಡುತ್ತವೆ’ ಎಂದು ಸಂಸದ ಡಾ. .ಎನ್. ಮಂಜುನಾಥ್ ಹೇಳಿದರು.
ನಗರದ ಶಾಂತಿನಿಕೇತನ ವಿದ್ಯಾಸಂಸ್ಥೆ ಆವರಣದಲ್ಲಿ ರಾಮನಗರ ರೋಟರಿ ಸಂಸ್ಥೆ ಮತ್ತು ಬೆಂಗಳೂರಿನ ಗ್ಯಾಸ್ಟ್ರೊ ಸೆಂಟರ್ ಸಹಯೋಗದಲ್ಲಿ ಗುರುವಾರ ಗ್ಯಾಸ್ಟ್ರಿಕ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
‘ಈಗ ಔಷಧದ ಅಂಗಡಿಗಳಿಗಿಂತ ಮದ್ಯದಂಗಡಿಗಳು ಹೆಚ್ಚಾಗಿವೆ. ವರದಿಯೊಂದರ ಪ್ರಕಾರ, ಶೇ 70ರಷ್ಟು ಮಂದಿ ಮದ್ಯ ಸೇವನೆ ಮಾಡುತ್ತಿದ್ದಾರೆ. ಮಧುಮೇಹ ಮತ್ತು ರಕ್ತದೊತ್ತಡವನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ, ಅವು ವಿವಿಧ ರೋಗಗಳಿಗೆ ಕಾರಣವಾಗುತ್ತವೆ. ಈ ಬಗ್ಗೆ ಜನ ಜಾಗೃತರಾಗಬೇಕು’ ಎಂದು ಸಲಹೆ ನೀಡಿದರು.
‘ರಾಮನಗರದಲ್ಲಿ ಇಂತಹ ಉನ್ನತ ಮಟ್ಟದ ಆರೋಗ್ಯ ಶಿಬಿರ ಆಯೋಜಿಸಿರುವುದು ಮತ್ತು ಇಷ್ಟು ಸಂಖ್ಯೆಯ ತಜ್ಞ ವೈದ್ಯರು ಸುಸಜ್ಜಿತ ಸಿಬ್ಬಂದಿ ಭಾಗವಹಿಸಿರುವುದು ಶ್ಲಾಘನೀಯ. ವೈದ್ಯಕೀಯ ಕ್ಷೇತ್ರವು ವ್ಯಾಪಾರೀಕರಣದತ್ತ ವೇಗವಾಗಿ ಸಾಗುತ್ತಿದೆ. ಅದರ ನಡುವೆ ಇಂತಹ ಶಿಬಿರಗಳು ನಡೆಯುತ್ತಿರುವುದು ಆಶಾಯದಾಯಕ. ಇದಕ್ಕೆ ಕಾರಣರಾದ ಗ್ಯಾಸ್ಟ್ರೊ ಸೆಂಟರ್ ಡಾ. ಯೋಗಾನಂದ ರೆಡ್ಡಿ ಹಾಗೂ ರೋಟರಿಯ ಸೌಮ್ಯ ಕುಮಾರ್ ಅಭಿನಂದನಾರ್ಹರು’ ಎಂದರು.
ಗ್ಯಾಸ್ಟ್ರೊ ಸೆಂಟರ್‌ನ ಡಾ. ಯೋಗಾನಂದ ರೆಡ್ಡಿ ಮಾತನಾಡಿ, ‘ಡಾ. ಸಿ.ಎನ್. ಮಂಜುನಾಥ್ ಅವರು ವೈದ್ಯಕೀಯ ಕ್ಷೇತ್ರದ ಮಾದರಿ ವ್ಯಕ್ತಿತ್ವ. ಅವರು ನಮ್ಮ ಶಿಬಿರಕ್ಕೆ ಬಂದು ಹರಸಿರುವುದು ನಮ್ಮ ಭಾಗ್ಯ. ಇಂದು ಸಂಚಾರಿ ಎಂಡೊಸ್ಕೊಪಿ ವಾಹನ ಉದ್ಘಾಟಿಸಲಾಗಿದೆ. ಈ ವಾಹನ ಗ್ರಾಮೀಣ ಭಾಗಗಳಿಗೆ ತೆರಳಿ ಜನರ ಜೀರ್ಣಾಂಗ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಪಾಸಣೆ ಮಾಡಲಿದೆ’ ಎಂದರು.
ಶಿಬಿರದಲ್ಲಿ ಆರೋಗ್ಯ ತಪಾಸಣೆ, ರಕ್ತ ತಪಾಸಣೆ ಜೊತೆಗೆ ಔಷಧ ಮತ್ತು ಮಾತ್ರೆಗಳನ್ನು ವಿತರಿಸಲಾಯಿತು. ರಾಮನಗರ ರೋಟರಿ ಸಂಸ್ಥೆ ಅಧ್ಯಕ್ಷೆ ಸೌಮ್ಯ ಕುಮಾರಸ್ವಾಮಿ, ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕುಮಾರಸ್ವಾಮಿ, ವೈದ್ಯರಾದ ಡಾ. ರೀತು, ಡಾ. ಭಾರತಿ, ಡಾ. ಅಮರನಾಥ್ ಹಾಗೂ ಇತರರು ಇದ್ದರು.
‘ಪ್ರಧಾನಿ ನಿವಾಸದ ಎದುರು ಗುಂಡಿ ಇಲ್ಲ’
‘ಉಪ ರಾಷ್ಟ್ರಪತಿ ಚುನಾವಣೆಗಾಗಿ ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದಾಗ ಪ್ರಧಾನಿ ಅವರ ನಿವಾಸವಿರುವ ರಸ್ತೆಯಲ್ಲೇ ಹೋಗಿದ್ದೆ. ಅತ್ಯುತ್ತಮವಾಗಿರುವ ಆ ರಸ್ತೆಯಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳುವಂತೆ ಯಾವುದೇ ಗುಂಡಿಗಳಿಲ್ಲ. ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗಳು ಹದಗೆಟ್ಟಿವೆ ಎಂದು ಹೇಳುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ವಿರೋಧ ಪಕ್ಷವಾದ ಬಿಜೆಪಿ ಮಾಡಿದೆ. ಇದನ್ನು ಸರ್ಕಾರ ಪರಿಗಣಿಸಿ ದುರಸ್ತಿಗೆ ಮುಂದಾಗಬೇಕು. ಬೆಂಗಳೂರಿನಲ್ಲಿ ನಿರ್ಮಿಸುವ ರಸ್ತೆಗಳು ಮುಂದಿನ ಮಳೆಗಾಲದ ಹೊತ್ತಿಗೆ ಹದಗೆಡುತ್ತವೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡರೆ ಇಂತಹ ಸಮಸ್ಯೆ ಬರುವುದಿಲ್ಲ. ರಸ್ತೆ ಜೊತೆಗೆ ಚರಂಡಿಗಳು ಸಹ ಮುಖ್ಯ. ಇವೆರಡೂ ಕಾಮಗಾರಿ ಸರಿಯಾಗಿದ್ದರೆ ರಸ್ತೆಯಲ್ಲಿ ಗುಂಡಿಗಳಿರುವುದಿಲ್ಲ. ಮಳೆ ನೀರು ಸಹ ನಿಲ್ಲುವುದಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ‘ಪ್ರಧಾನಿ ನಿವಾಸದ ರಸ್ತೆಯಲ್ಲೂ ಗುಂಡಿ ಇದೆ’ ಎಂಬ ಹೇಳಿಕೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಡಾ. ಸಿ.ಎನ್. ಮಂಜುನಾಥ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.