
ಚನ್ನಪಟ್ಟಣ: ಕಳೆದ ಒಂಬತ್ತು ವರ್ಷಗಳ ಹಿಂದೆ ವಿವಾಹ ವಿಚ್ಛೇದನ ಪಡೆಯಲು ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿಯೊಂದು ಚನ್ನಪಟ್ಟಣದ ಸಿವಿಲ್ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ಒಂದಾದರು.
ತಾಲ್ಲೂಕಿನ ಕೋಡಂಬಹಳ್ಳಿ ದಂಪತಿ ಪುಷ್ಪಲತಾ ಹಾಗೂ ಲೋಕೇಶ್ ಕೆಲ ಭಿನ್ನಾಭಿಪ್ರಾಯಗಳಿಂದಾಗಿ ಕಳೆದ ಒಂಬತ್ತು ವರ್ಷಗಳ ಹಿಂದೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅಂದಿನಿಂದ ಪ್ರಕರಣ ನ್ಯಾಯಾಲಯದಲ್ಲಿತ್ತು.
ಶನಿವಾರ ನ್ಯಾಯಾಲಯಕ್ಕೆ ಹಾಜರಾದ ದಂಪತಿ, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಸಂದೇಶ್ ಸಮ್ಮುಖದಲ್ಲಿ ತಮ್ಮ ಎಲ್ಲ ಭಿನ್ನಾಭಿಪ್ರಾಯ ಮರೆತು ಜೊತೆಯಾಗಿ ಸಂಸಾರ ನಡೆಸಲು ಸಮ್ಮತಿಸಿದರು. ಅಂತಿಮವಾಗಿ ದಂಪತಿ ಪರಸ್ಪರ ಸಿಹಿ ತಿನ್ನಿಸುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿತು. ನ್ಯಾಯಾಧೀಶರು ಹಾಗೂ ವಕೀಲರು ದಂಪತಿಗೆ ಹೂಮಾಲೆ ಹಾಕಿ ಅಭಿನಂದಿಸಿದರು.
ವಕೀಲರಾದ ಎಂ.ಎಸ್.ಬಸವರಾಜು, ಆರ್.ಧರ್ಮೇಂದ್ರಕುಮಾರ್, ಭೋಜೇಗೌಡ, ಧನಂಜಯ, ಪ್ರಸನ್ನ, ಸುನೀಲ್, ರವಿಶಂಕರ್, ಶಿವರಾಜು, ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.