ADVERTISEMENT

BJP ಜೊತೆ ಹಿಂದೆ ಮೈತ್ರಿಯಾದಾಗ ಮುಸ್ಲಿಮರಿಗೆ ಸಮಸ್ಯೆಯಾಗಿತ್ತಾ: ಫಾರೂಕ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2023, 11:46 IST
Last Updated 1 ಅಕ್ಟೋಬರ್ 2023, 11:46 IST
ಬಿ.ಎಂ.ಫಾರೂಕ್
ಬಿ.ಎಂ.ಫಾರೂಕ್   

ರಾಮನಗರ: ಹಿಂದೆ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಾಗ, ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು 20 ತಿಂಗಳು ಯಶಸ್ವಿಯಾಗಿ ಅಧಿಕಾರ ನಡೆಸಿದ್ದರು. ಆಗ, ಮುಸ್ಲಿಮರಿಗೇನಾದರೂ ಸಮಸ್ಯೆಯಾಗಿತ್ತಾ? ಎಂದು ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಪ್ರಶ್ನಿಸಿದರು.

ಬಿಜೆಪಿ- ಜೆಡಿಎಸ್ ಮೈತ್ರಿ ಬೆನ್ನಲ್ಲೇ ಬಿಡದಿಯಲ್ಲಿರುವ ಎಚ್.ಡಿ. ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ, ಎಚ್.ಡಿ. ದೇವೇಗೌಡ ಅವರ ನೇತೃತ್ವದಲ್ಲಿ ಭಾನುವಾರ ನಡೆದ ಪಕ್ಷದ ಶಾಸಕರು, ಪದಾಧಿಕಾರಿಗಳು ಹಾಗೂ ಮುಖಂಡರ ಸಭೆ ವೇಳೆ‌ ಸುದ್ದಿಗಾರರು ಕೇಳಿದ "ಮೈತ್ರಿ ವಿರುದ್ಧ ಅಲ್ಪಸಂಖ್ಯಾತರ ಅಸಮಾಧಾನ" ವಿಚಾರ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಆಗ ನಮ್ಮ ಜಮೀರ್ ಅಹಮದ್ ಖಾನ್ ಅವರಿಗೆ ಮಂತ್ರಿ ಸ್ಥಾನ ಕೊಟ್ಟಿರಲಿಲ್ಲವೇ? ಈಗಲೂ ಮೈತ್ರಿಯಿಂದ ಯಾವುದೇ ಗೊಂದಲ ಇಲ್ಲ. ಪ್ರತಿ ಹಂತದಲ್ಲೂ ಇಬ್ರಾಹಿಂ ಅವರ ಜೊತೆ ಚರ್ಚೆ ಮಾಡಿ, ವಿಶ್ವಾಸಕ್ಕೆ ತೆಗೆದುಕೊಂಡು ಮೈತ್ರಿ ಮಾಡಿದ್ದಾರೆ ಎಂದರು.

ADVERTISEMENT

ಜೆಡಿಎಸ್ ನಿಂದ ಅಲ್ಪಸಂಖ್ಯಾತರು ದೂರವಾಗುತ್ತಿಲ್ಲ.

ನಾನು ಇಲ್ಲೇ ಇದ್ದೇನೆ‌ ತಾನೆ. ಅಲ್ಪಸಂಖ್ಯಾತರ ಸಮಸ್ಯೆಗಳು ಹಾಗೂ ಹಿತರಕ್ಷಣೆಗೆ ಪಕ್ಷ ಸದಾ ಬದ್ಧ. ಯಾವುದೇ ಕಾರಣಕ್ಕೂ ನಾವು ಹಿಂದುತ್ವದ ಅಜೆಂಡಾಗೆ ಶಿಫ್ಟ್ ಆಗಲ್ಲ. ಅಲ್ಪಸಂಖ್ಯಾತರ ಭಾವನೆಗಳಿಗೆ ದಕ್ಕೆಯಾಗಲು ಬಿಡುವುದಿಲ್ಲ ಎಂದು ತಿಳಿಸಿದರು.

ಹಿಂದೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಾಗಾ ಮುಸ್ಲಿಂ ಸಮುದಾಯಕ್ಕೆ ಯಾವುದೇ ಕೆಟ್ಟ ಅನುಭವವಾಗಿಲ್ಲ. ಮೈತ್ರಿಯಾದರೂ ಸಾರ್ವಜನಿಕವಾಗಿ ಸೌಹಾರ್ದಯುತ ವಾತಾವರಣ ಇರಬೇಕು. ನಮ್ಮ ಆಚಾರ -ವಿಚಾರಗಳಿಗೆ ಧಕ್ಕೆಯಾದಾಗ ನಾವು ಖಂಡಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಜೊತೆ ಯಾವ ಪಕ್ಷ ತಾನೇ ಮೈತ್ರಿ ಮಾಡಿಕೊಂಡಿಲ್ಲ ಹೇಳಿ. ಬಿಎಸ್‌ಪಿ, ಶಿವಸೇನೆ, ಎನ್‌ಸಿಪಿಯ ಶರದ್ ಪವಾರ್, ಜೆಡಿಯುನ ನಿತೀಶ್ ಕುಮಾರ್ ಕೂಡಾ ಮೈತ್ರಿ ಮಾಡಿಕೊಂಡಿದ್ದಾರೆ. ಆಗೆಲ್ಲಾ, ನಮ್ಮ ಸಮುದಾಯದ ಹಿತಾಸಕ್ತಿಯನ್ನು ಯಾರೂ ಬಿಟ್ಟುಕೊಟ್ಟಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.