
ಮಾಗಡಿ: ಅಗ್ನಿ ದುರಂತ ಸಂಭವಿಸಿದರೆ ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತವೆ. ಆದರೆ, ಮಾಗಡಿ ಅಗ್ನಿಶಾಮಕ ದಳದಲ್ಲಿ ನೀರಿಗೆ ಕೊರತೆ ಕಾಡುತ್ತಿದೆ. ಕೆರೆ–ಕಟ್ಟೆಗಳಲ್ಲಿ ನೀರು ತುಂಬಿಸಿಕೊಂಡು ಅಗ್ನಿ ಅವಘಡ ಸ್ಥಳಕ್ಕೆ ತೆರಳುವ ಪರಿಸ್ಥಿತಿ ಇದೆ.
ಠಾಣೆ ಒಳಗೆ ಕೊರೆಸಿರುವ ಬೋರ್‌ವೆಲ್‌ನಲ್ಲಿ ನೀರು ಕಡಿಮೆಯಾಗಿದೆ. ಅಲ್ಲದೆ, ಬೋರ್‌ವೆಲ್‌ಗೆ ಪಂಪ್ ಮೋಟರ್ ಕೂಡ ಅಳವಡಿಸಿಲ್ಲ. ಅಗ್ನಿಶಾಮಕ ಸಿಬ್ಬಂದಿ ಪ್ರತಿ ದಿನವೂ ಕೂಡ ಕೆರೆ–ಕಟ್ಟೆಗಳಿಗೆ ತೆರಳಿ ಅಗ್ನಿಶಾಮಕ ವಾಹನಕ್ಕೆ ನೀರು ತುಂಬಿಸುವ ಸ್ಥಿತಿ ಇದೆ.
ಹಲವು ತಿಂಗಳಿಂದ ಸಿಬ್ಬಂದಿ ನೀರಿಲ್ಲದೆ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಹೊಸ ಬೋರ್‌ವೆಲ್ ಅಥವಾ ಸೂಕ್ತ ನೀರಿನ ವ್ಯವಸ್ಥೆ ಮಾಡಬೇಕು. ತುರ್ತು ಪರಿಸ್ಥಿತಿಯಲ್ಲಿ ಕೆರೆ–ಕಟ್ಟೆಗಳಿಗೆ, ಇಲ್ಲವೇ ರೈತರ ಜಮೀನಿಗೆ ಹೋಗುವ ಸ್ಥಿತಿ ನಿರ್ಮಾಣವಾಗಬಾರದು. ಸಮಸ್ಯೆ ಬಗೆಹರಿಸಬೇಕು ಎಂದು ತಾಲ್ಲೂಕು ಅಗ್ನಿಶಾಮಕ ಅಧಿಕಾರಿ ಉದಯಕುಮಾರ್ ಮನವಿ ಮಾಡಿದ್ದಾರೆ.
ಮಾಗಡಿ–ಬೆಂಗಳೂರು ಮುಖ್ಯರಸ್ತೆ ವಿಸ್ತರಣೆ ಕಾಮಗಾರಿ ಪಟ್ಟಣದಲ್ಲಿ ನಡೆಯುತ್ತಿದೆ. ಮುಖ್ಯರಸ್ತೆ ಕಾಮಗಾರಿಯಿಂದ ನೀರಿನ ಪೈಪ್‌ಗಳು ಹೊಡೆದು ಹೋಗಿವೆ. ಪುರಸಭೆ ವಾರಕ್ಕೊಮ್ಮೆ ಟ್ಯಾಂಕರ್ ಮೂಲಕ ನೀರು ಬಿಡುತ್ತಿದೆ. ಸರಿಯಾದ ಸಮಯಕ್ಕೆ ನೀರು ಬಾರದ ಕಾರಣ ಖಾಸಗಿ ಟ್ಯಾಂಕರ್ ಮೂಲಕ ಸಂಪುಗಳಿಗೆ ನೀರು ತುಂಬಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅಗ್ನಿಶಾಮಕ ವಾಹನ ಮತ್ತು ಠಾಣೆಗೂ ನೀರು ಬರುವ ವ್ಯವಸ್ಥೆ ಮಾಡಬೇಕು ಎಂದು ಸಿಬ್ಬಂದಿ ಆಗ್ರಹಿಸಿದ್ದಾರೆ.
6.5ಸಾವಿರ ಲೀಟರ್ ಸಾಮರ್ಥ್ಯದ ಅಗ್ನಿಶಾಮಕ ವಾಹನ: ಠಾಣೆಯಲ್ಲಿರುವ ವಾಹನಕ್ಕೆ 6.5 ಸಾವಿರ ಲೀಟರ್ ನೀರು ಬೇಕಾಗಿದೆ. ಪ್ರತಿ ಬಾರಿಯೂ ಅಗ್ನಿಶಾಮಕ ವಾಹನಗಳಿಗೆ ನೀರು ತುಂಬಿಸಲು ಕಷ್ಟವಾಗುತ್ತಿದೆ. ತಕ್ಷಣ ಅವಘಡ ಸ್ಥಳಕ್ಕೆ ಧಾವಿಸಿ ದುರಂತ ತಪ್ಪಿಸುವ ಕೆಲಸ ಆಗುವುದಿಲ್ಲ. ಪ್ರತಿ ಬಾರಿ ಕೆರೆ–ಕಟ್ಟೆಗಳಿಗೆ ತೆರಳಿ ನೀರು ತುಂಬಿಸಿಕೊಳ್ಳುವುದು ಕಷ್ಟಕರ ಎನ್ನುತ್ತಾರೆ ಸಿಬ್ಬಂದಿ.
ಹೊಸ ಬೋರ್ ವೆಲ್ ಅವಶ್ಯ ಇದ್ದರೆ ವಿಶೇಷ ಅನುದಾನದಲ್ಲಿ ಕೊರೆಸಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೇನೆ.ಎಚ್.ಸಿ.ಬಾಲಕೃಷ್ಣ ಶಾಸಕ
ಇಲಾಖೆ ಸಿಇಒ ಗಮನಕ್ಕೂ ತರಲಾಗಿದೆ. ಮತ್ತೊಮ್ಮೆ ಶಾಸಕರನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸಲು ಮನವಿ ಮಾಡಲಾಗುವುದು.ಗಂಗಾ ನಾಯಕ್ ಜಿಲ್ಲಾ ಅಗ್ನಿಶಾಮಕ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.