ರಾಮನಗರ: ‘ಚರಿತ್ರೆಗೆ ಜಾನಪದಕ್ಕಿಂತ ಅಮೂಲ್ಯ ಆಕರ ಮತ್ತೊಂದಿಲ್ಲ. ಆ ನಿಟ್ಟಿನಲ್ಲಿ ಚರಿತ್ರೆ ಬರೆಯುವ ಕೆಲಸವಾಗಬೇಕಿದೆ. ಈಗ ನಾವು ಓದುತ್ತಿರುವ ಚರಿತ್ರೆ ಜಾನಪದ ಮತ್ತು ಮಹಿಳೆಯರನ್ನು ನಿರ್ಲಕ್ಷ್ಯಿಸಿ ಸೃಷ್ಟಿಯಾಗಿರುವಂತಹದ್ದು. ಜನಪದರ ಬದುಕು ಹಾಗೂ ಮೌಖಿಕವಾಗಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದಿರುವ ಕಲೆಗಳನ್ನು ಕಡೆಗಣಿಸಲಾಗಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.
ನಗರದ ಹೊರವಲಯದಲ್ಲಿರುವ ಜಾನಪದ ಲೋಕದಲ್ಲಿ ಜಾನಪದ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ಎರಡು ದಿನಗಳ ‘ಮಹಿಳಾ ಜಾನಪದ ಲೋಕೋತ್ಸವ–2025’ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
‘ದಕ್ಷಿಣ ಕನ್ನಡದಲ್ಲಿರುವ ಏಕೈಕ ಜಾನಪದ ವಸ್ತು ಸಂಗ್ರಹಾಲಯ ಸ್ಥಾಪಿಸಿದ ಹೆಗ್ಗಳಿಕೆ ಪರಿಷತ್ತಿನ ಸಂಸ್ಥಾಪಕರೂ ಆಗಿರುವ ಎಚ್.ಎಲ್. ನಾಗೇಗೌಡ ಅವರದ್ದು. ಅವರ ಸಾಹಿತ್ಯ ಹಾಗೂ ಸಂಶೋಧನಾ ಕೃತಿಗಳ ಕುರಿತು ಹೆಚ್ಚಿನ ಚರ್ಚೆ ಆಗಬೇಕಿದೆ’ ಎಂದರು.
ರಿಯಾಲಿಟಿ ಅಲ್ಲದ ರಿಯಾಲಿಟಿ ಹೆಸರಿನ ಷೋಗಳು ಹಾಗೂ ಸಿನಿಮಾ ಹಾಡುಗಳಲ್ಲಿ ಜಾನಪದವನ್ನು ಕೊಲ್ಲಲಾಗುತ್ತಿದೆ. ಥಳುಕು ಬಳುಕುಗಳಿಂದ ಮರೆಮಾಚಲಾಗುತ್ತಿದೆ.ಗೊಲ್ಲಹಳ್ಳಿ ಶಿವಪ್ರಸಾದ್, ಅಧ್ಯಕ್ಷ, ಕರ್ನಾಟಕ ಜಾನಪದ ಅಕಾಡೆಮಿ
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತ
ನಾಡಿ, ‘ಜಾನಪದವನ್ನು ನೋಡುವ ರೀತಿ– ನೀತಿ ಬದಲಾಗಬೇಕಿದೆ’ ಎಂದರು.
ಜನಪದ ಕಲೆಗಳ ಯುವ ಜನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ. ತಿಮ್ಮೇಗೌಡ, ‘ನೆಲಮೂಲದ ಕಲೆಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಅದಕ್ಕಾಗಿ, ಸರ್ಕಾರ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಬೇಕು’ ಎಂದು ಒತ್ತಾಯಿಸಿದರು.
ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ ಮಾತನಾಡಿದರು.
‘ಮಹಾಕಾವ್ಯಗಳತ್ತ ಹೊಸ ನೋಟ ಹರಿಯಲಿ’
‘ರಾಮಾಯಾಣ, ಮಹಾಭಾರತದಂತ ಮಹಾಕಾವ್ಯಗಳನ್ನು ಹೊಸ ನೋಟದಿಂದ ನೋಡಿ, ವಿಮರ್ಶಿಸಬೇಕಿದೆ. ವಾಲ್ಮೀಕಿ ರಾಮಾಯಣ ಮತ್ತು ವ್ಯಾಸ ಮಹಾಭಾರತಕ್ಕೆ ಪರ್ಯಾಯವಾಗಿ ಜಾನಪದದಲ್ಲೂ ಮಹಾಕಾವ್ಯಗಳಿವೆ. ಮೂಲ ಕಾವ್ಯದ ಪಾತ್ರಗಳಿಗೂ, ಜಾನಪದಲ್ಲಿರುವ ಪಾತ್ರದ ಸ್ವರೂಪಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮೂಲ ಕಾವ್ಯಗಳಲ್ಲಿ ದುರ್ಬಲ ಹಾಗೂ ಶೋಷಿತ ಎನಿಸುವ ಪಾತ್ರಗಳು ಜಾನಪದದಲ್ಲಿ ಬಲಿಷ್ಠವಾಗಿರುವುದು ಮಹಿಳಾ ಶಕ್ತಿಯ ದ್ಯೋತಕವಾಗಿದೆ. ಬೆಂಗಳೂರಿನಲ್ಲಿ ನಡೆಯುವ ಪ್ರಸಿದ್ದ ಕರಗದಲ್ಲಿ ದ್ರೌಪದಿ ಆರಾಧನೆಯೇ ಪ್ರಮುಖವಾಗಿದೆ. ತಮಿಳುನಾಡಿನಲ್ಲಿ ದ್ರೌಪದಿಯಮ್ಮನ್ ದೇವಾಲಯವಿದ್ದು, ತಮ್ಮ ಕಷ್ಟ ಪರಿಹರಿಸುವ ಶಕ್ತಿಯಾಗಿ ದ್ರೌಪದಿಯನ್ನು ಅಲ್ಲಿನವರು ಆರಾಧಿಸುತ್ತಾರೆ. ವಾಲ್ಮೀಕಿ ರಾಮಾಯಣದಲ್ಲಿ ಸೀತೆ ಪಾತ್ರ ಸೌಮ್ಯವಾಗಿದ್ದರೆ, ಜಾನಪದದಲ್ಲಿ ಬಲಿಷ್ಠವಾಗಿದೆ. ರಾಮ ಒಬ್ಬನೇ ಕಾಡಿಗೆ ಹೋಗಲು ಸಿದ್ದನಾದಾಗ ಸೀತೆ, ನಾನು ನಿನ್ನ ಜೊತೆ ಇರಲು ಬಂದಿದ್ದೇನೆಯೇ ಹೊರತು, ಅರಮನೆಯಲ್ಲಿ ಇದ್ದು ಬೇರೆಯವರ ಸೇವೆ ಮಾಡುವುದಕ್ಕಲ್ಲ ಎಂದು ಜಗಳವಾಡಿ ತಾನೂ ಸಹ ಆತನ ಜೊತೆಗೆ ಹೋಗುತ್ತಾಳೆ’ ಎಂದು ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಜಾನಪದ ಮಹಾಕಾವ್ಯಗಳಲ್ಲಿರುವ ತಿರುಳನ್ನು ಬಿಚ್ಚಿಟ್ಟರು.
‘ಸೂಕ್ಷ್ಮ ಒಳನೋಟ ಒದಗಿಸುವ ಜಾನಪದ’
‘ರಾಮಯಣದ ಪಾತ್ರಗಳ ಕುರಿತು ನಮ್ಮಲ್ಲಿ ಹೆಚ್ಚಾಗಿರುವ ಏಕಮುಖ ನೋಟ ಮತ್ತು ಆಲೋಚನೆ ಬದಲಾಗಬೇಕಿದೆ. ಜಾನಪದವು ನೀಡುವ ಸೂಕ್ಷ್ಮ ನೋಟವನ್ನು ಅಳವಡಿಸಿಕೊಳ್ಳಬೇಕಿದೆ. ರಾಮಾಯಣದಲ್ಲಿ ಮೇಲ್ನೋಟಕ್ಕೆ ರಾಮನಷ್ಟೇ ಒಳ್ಳೆಯನವಾಗಿ ಕಾಣುತ್ತಾನೆ. ಆದರೆ, ಸೂಕ್ಷ್ಮವಾಗಿ ಅವಲೋಕಿಸಿದಾಗ ಮಾತ್ರ ರಾವಣನಲ್ಲಿರುವ ಒಳ್ಳೆಯತನ ಗೋಚರಿಸುತ್ತದೆ. ಸೀತೆಯನ್ನು ಅಪಹರಿಸಿ ಸೆರೆಯಲ್ಲಿಟ್ಟಿದ್ದ ಆತ ಆಕೆಯೊಂದಿಗೆ ದುರ್ವರ್ತನೆ ತೋರಲಿಲ್ಲ. ಚಿತ್ರಪಟ ರಾಮಾಯಣ ಸೇರಿದಂತೆ ಜನಪದರಿಂದ ಮೌಖಿಕವಾಗಿ ಹರಿದು ಬಂದಿರುವ ಮಹಾಕಾವ್ಯಗಳಲ್ಲಿ ಇಂತಹ ಹಲವು ಒಳನೋಟಗಳು ಸಿಗುತ್ತವೆ. ಅವುಗಳ ಅಧ್ಯಯನ, ವಿಶ್ಲೇಷಣೆ ಹಾಗೂ ವಿಮರ್ಶೆ ಆಗಬೇಕಿದೆ. ಪರಿಷತ್ತು ಆ ನಿಟ್ಟಿನಲ್ಲಿ ಕಾರ್ಯಾಗಾರ ಆಯೋಜಿಸಬೇಕು’ ಎಂದು ಜಾನಪದ ವಿದ್ವಾಂಸೆ ಡಾ. ಕೆ.ಆರ್. ಸಂಧ್ಯಾರೆಡ್ಡಿ ಸಲೆಹ ನೀಡಿದರು.
ಕಲಾ ಪ್ರದರ್ಶನಗಳ ರಸದೌತಣ
ಯುವಜನೋತ್ಸವದಲ್ಲಿ ಮೈಸೂರಿನ ರಮ್ಯ ನೇತೃತ್ವದ ನಗಾರಿ ಕುಣಿತ ತಂಡ, ರಾಮನಗರದ ಜೀವಿತಾ, ಕುಮಾರಿ ತಂಡದ ಪೂಜಾ ಕುಣಿತ, ಚಿಕ್ಕಮಗಳೂರಿನ ಶಿಲ್ಪಾ ನೇತೃತ್ವದ ವೀರಗಾಸೆ ಕುಣಿತ, ಹಾಸನದ ಯಶಸ್ವಿನಿ ತಂಡದ ಜಡೆ ಕುಣಿತ, ಮಂಡ್ಯದ ನಳಿನಾ ನೇತೃತ್ವದ ಕೊಂಬು–ಕಹಳೆ ವಾದನ, ದಾವಣೆಗೆರೆಯ ಸುಜಾತ ನೇತೃತ್ವದ ಕಂಸಾಳೆ, ಉತ್ತರ ಕನ್ನಡದ ಜೂಲಿಯಾನ ತಂಡದ ಡಮಾಮಿ ಕುಣಿತ, ಧಾರವಾಡದ ರುದ್ರಪ್ಪ ಮೇಲಿನಮನಿ ತಂಡದ ಜಗ್ಗಲಗಿ ಮೇಳ, ರಾಮನಗರದ ನಾಗು ತಂಡದ ಹುಲಿವೇಷದ ಕುಣಿತ, ಲಾವಣ್ಯ ನೇತೃತ್ವದ ಪಟಾ ಕುಣಿತ, ರಕ್ಷಿತ ತಂಡದ ಡೊಳ್ಳು ಕುಣಿತ ಪ್ರದರ್ಶನವು ನೋಡುಗರಿಗೆ ರಸದೌತಣ ಬಡಿಸಿತು. ಸಂಜೆ ನಾಡೋಜ ಎಚ್.ಎಲ್. ನಾಗೇಗೌಡ ಕಲಾಶಾಲೆಯ ಡಿಪ್ಲೊಮಾ ವಿದ್ಯಾರ್ಥಿಗಳಿಂದ ಜನಪದ ಗೀತಗಾಯನ, ಮಂಡ್ಯದ ಸವಿತಾ ಚಿರಕುನ್ನಯ್ಯ ತಂಡದ ಪೂಜಾ ಕುಣಿತ, ಬೆಂಗಳೂರಿನ ಮಲ್ಲೇಶ್ ತಂಡದ ಗೊರವರ ಕುಣಿತ, ರಾಮನಗರ ತಂಬೂರಿ ಶಿವಣ್ಣ ತಂಡದ ನೀಲಗಾರರ ಪದ ಹಾಗೂ ಕೋಲಾರದ ತೋಪಣ್ಣ ತಂಡ ಪ್ರದರ್ಶಿಸಿದ ಕೀಲು ಕುದುರೆ ಕಲಾ ಪ್ರದರ್ಶನ ಗಮನ ಸೆಳೆಯಿತು.
ಸಚಿವ, ಶಾಸಕ, ಅಧಿಕಾರಿಗಳು ಗೈರು
ಲೋಕೋತ್ಸವ ಉದ್ಘಾಟಿಸಬೇಕಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್. ತಂಗಡಗಿ ಹಾಗೂ ಅಧ್ಯಕ್ಷತೆ ವಹಿಸಬೇಕಿದ್ದ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಗೈರಾಗಿದ್ದರು. ಆಹ್ವಾನ ಪತ್ರಿಕೆಯ ಗೌರವ ಉಪಸ್ಥಿತಿ ಪಟ್ಟಿಯಲ್ಲಿದ್ದ ಇಲಾಖೆಯ ನಿರ್ದೇಶಕಿ ಡಾ. ಕೆ. ಧರಣಿದೇವಿ ಮಾಲಗತ್ತಿ, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಎಸ್ಪಿ ಆರ್. ಶ್ರೀನಿವಾಸ ಗೌಡ, ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ಸಹ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.