ADVERTISEMENT

ರಾಮನಗರ | ಜೈನ್ ಕಂಪನಿಗೆ ಮಾವು ಮಾರಾಟಕ್ಕೆ ಒಡಂಬಡಿಕೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 4:45 IST
Last Updated 18 ಜನವರಿ 2026, 4:45 IST
ರಾಮನಗರದ ಎಪಿಎಂಸಿ ಆವರಣದಲ್ಲಿರುವ ಜಿಲ್ಲಾ ಮಾವು ಮತ್ತು ತೆಂಗು ಬೆಳೆ ರೈತ ಉತ್ಪಾದಕ ಕಂಪನಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಧರಣೀಶ್ ಕುಮಾರ್ ಆರ್.ವಿ ಮಾತನಾಡಿದರು. ತೋಟಗಾರಿಕೆ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಾ. ಬೆಳ್ಳೂರು ಕೃಷ್ಣ, ನಿರ್ದೇಶಕರು ಹಾಗೂ ಸದಸ್ಯರು ಇದ್ದಾರೆ
ರಾಮನಗರದ ಎಪಿಎಂಸಿ ಆವರಣದಲ್ಲಿರುವ ಜಿಲ್ಲಾ ಮಾವು ಮತ್ತು ತೆಂಗು ಬೆಳೆ ರೈತ ಉತ್ಪಾದಕ ಕಂಪನಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಧರಣೀಶ್ ಕುಮಾರ್ ಆರ್.ವಿ ಮಾತನಾಡಿದರು. ತೋಟಗಾರಿಕೆ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಾ. ಬೆಳ್ಳೂರು ಕೃಷ್ಣ, ನಿರ್ದೇಶಕರು ಹಾಗೂ ಸದಸ್ಯರು ಇದ್ದಾರೆ   

ರಾಮನಗರ: ‘ಮಹಾರಾಷ್ಟ್ರದ ಜಲಗಾಂವ್‌ನಲ್ಲಿರುವ ಜೈನ್ ಇರಿಗೇಷನ್ ಕಂಪನಿಗೆ ನಮ್ಮ ರಾಮನಗರ ಜಿಲ್ಲಾ ಮಾವು ಮತ್ತು ತೆಂಗು ಬೆಳೆ ರೈತ ಉತ್ಪಾದಕ ಕಂಪನಿ ಸದಸ್ಯರು ಮಾವು ಮಾರಾಟ ಮಾಡಲು ನಿರ್ಧರಿಸಿದ್ದು, ಈ ಕುರಿತು ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾ ಮಾವು ಮತ್ತು ತೆಂಗು ಬೆಳೆ ರೈತ ಉತ್ಪಾದಕ ಕಂಪನಿಯ ನಿರ್ದೇಶಕ ಧರಣೀಶ್ ಕುಮಾರ್ ಆರ್.ವಿ ಹೇಳಿದರು.

ನಗರದ ಎಪಿಎಂಸಿ ಆವರಣದಲ್ಲಿರುವ ಕಂಪನಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಮಾರು 300 ಎಕರೆಯಲ್ಲಿರುವ ಜೈನ್ ಕಂಪನಿ ಏಷ್ಯಾದ ಅತಿ ದೊಡ್ಡ ಮಾವು ಸಂಸ್ಕರಣ ಘಟಕವನ್ನು ಹೊಂದಿದೆ. ಇತ್ತೀಚೆಗೆ ನಮ್ಮ ಕಂಪನಿಯ ನಿಯೋಗ ಅಲ್ಲಿಗೆ ಅಧ್ಯಯನ ಪ್ರವಾಸ ಕೈಗೊಂಡಿದ್ದೆವು. ಇದರಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆ ಕ್ಷೇತ್ರದಲ್ಲಿ ನಡೆಯುತ್ತಿರುವ ಮಹತ್ತರ ಬದಲಾವಣೆಗಳ ಪರಿಚಯವಾಯಿತು’ ಎಂದರು.

‘ಅಂತರರಾಷ್ಟ್ರೀಯ ಗುಣಮಟ್ಟದ ಘಟಕದಲ್ಲಿ ನಿತ್ಯ 5 ಸಾವಿರ ಟನ್ ಮಾವನ್ನು ಕ್ರಷ್ ಮಾಡಿ ಪಲ್ಪಿಂಗ್ ಮಾಡುತ್ತಾರೆ. ಹಾಗಾಗಿ, ನಮ್ಮ ಜಿಲ್ಲೆಯಲ್ಲಿ ಬೆಳೆಯುವ ಮಾವನ್ನು ಕಂಪನಿಗೆ ಮಾರಾಟ ಮಾಡಿದರೆ ಉತ್ತಮ ಬೆಲೆ ಕೊಡುವ ಭರವಸೆ ನೀಡಿದ್ದಾರೆ. ಪ್ರಾಯೋಗಿಕವಾಗಿ ಈ ಸಲ ನಮ್ಮ ಕಂಪನಿಯ 1,430 ಸದಸ್ಯರ ಮಾವು ಮಾರಾಟ ಮಾಡಲಿದ್ದೇವೆ’ ಎಂದು ಹೇಳಿದರು.

ADVERTISEMENT

ತೋಟಗಾರಿಕೆ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಾ. ಬೆಳ್ಳೂರು ಕೃಷ್ಣ ಮಾತನಾಡಿ, ‘ಜೈನ್ ಇರಿಗೇಷನ್ ಕಂಪನಿಯು ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಮಾಡುತ್ತಿರುವ ಕ್ರಾಂತಿ ಇಸ್ರೇಲ್ ಮಾದರಿ ಕೃಷಿ ಮೀರಿಸುವಂತಿದೆ. ರಾಜ್ಯ ಸರ್ಕಾರ ಸಹ 300 ಎಕರೆಯಲ್ಲಿ ಅಂತಹ ಕೇಂದ್ರ ಸ್ಥಾಪಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ನಿರ್ದೇಶಕರಾದ ಎಂ.ಸಿ. ಸ್ವಾಮಿ, ‘ರೈತರಿಗೆ ಮಾವಿಗೆ ಇರುವ ಬೇಡಿಕೆ ಮತ್ತು ಪೂರೈಕೆ ಕುರಿತು ಸೂಕ್ತ ಮಾಹಿತಿ ಕೊರತೆ ಇದೆ. ಅದನ್ನು ಗಮನದಲ್ಲಿ ಇಟ್ಟುಕೊಂಡರೆ ನಷ್ಟ ಅನುಭವಿಸುವುದಿಲ್ಲ. ಜೈನ್ ಕೇಂದ್ರಕ್ಕೆ ಮಾವು ಮಾರಾಟ ಮಾಡುವುದರಿಂದ ಹೆಚ್ಚಿನ ಅನುಕೂಲವಾಗಲಿದೆ’ ಎಂದರು.

ಕಂಪನಿಯ ಸಿಇಒ ಅಂಜಲಿ, ಸದಸ್ಯರಾದ ಬಿ.ವಿ. ರಾಜಣ್ಣ, ಭರತ್, ಕೆ.ಆರ್. ಬಾಲಕೃಷ್ಣ, ರಮೇಶ್, ಸುಂದರ್, ಮಹೇಶ್ ಎಸ್., ಸೋಮಶಂಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.