ADVERTISEMENT

ರಾಜ್ಯವ್ಯಾಪಿ ‘ಮೊಬೈಲ್ ಬಿಡಿ ಪುಸ್ತಕ ಹಿಡಿ‘

ಸರ್ಕಾರಿ ಶಿಕ್ಷಕನ ಅಭಿಯಾನಕ್ಕೆ ವರ್ಷದ ಸಂಭ್ರಮದ ಬೆನ್ನಲ್ಲೇ ಶಾಲಾ ಶಿಕ್ಷಣ ಇಲಾಖೆಯಿಂದ ಸುತ್ತೋಲೆ  

ಓದೇಶ ಸಕಲೇಶಪುರ
Published 24 ಫೆಬ್ರುವರಿ 2026, 11:30 IST
Last Updated 24 ಫೆಬ್ರುವರಿ 2026, 11:30 IST
‘ಮೊಬೈಲ್ ಬಿಡಿ ಪುಸ್ತಕ ಹಿಡಿ’ ಅಭಿಯಾನದ ರೂವಾರಿ ಶಿಕ್ಷಕ ಟಿ.ಎನ್. ಚಿಕ್ಕವೀರಯ್ಯ 
‘ಮೊಬೈಲ್ ಬಿಡಿ ಪುಸ್ತಕ ಹಿಡಿ’ ಅಭಿಯಾನದ ರೂವಾರಿ ಶಿಕ್ಷಕ ಟಿ.ಎನ್. ಚಿಕ್ಕವೀರಯ್ಯ    

ರಾಮನಗರ: ಮಕ್ಕಳಲ್ಲಿ ಮೊಬೈಲ್ ಗೀಳು ತಗ್ಗಿಸಿ ಪುಸ್ತಕಗಳತ್ತ ಅವರ ಮನಸ್ಸು ಸೆಳೆಯುವ ನಿಟ್ಟಿನಲ್ಲಿ ಆರಂಭವಾದ ‘ಮೊಬೈಲ್ ಬಿಡಿ ಪುಸ್ತಕ ಹಿಡಿ’ ಅಭಿಯಾನಕ್ಕೆ ಇದೀಗ ವರ್ಷ ತುಂಬಿದೆ. ಶಾಲೆ ಮತ್ತು ಮನೆಗಳಲ್ಲಿ ಮಕ್ಕಳ ಮೊಬೈಲ್ ಬಳಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಗುತ್ತಿರುವ ಅಭಿಯಾನವನ್ನು ರಾಜ್ಯಕ್ಕೆ ವಿಸ್ತರಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ‌ ಇಲಾಖೆ ಮುಂದಾಗಿದೆ.

ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸುವ ಉದ್ದೇಶದ ಅಭಿಯಾನವನ್ನು ರಾಜ್ಯದಾದ್ಯಂತ ಅನುಷ್ಠಾನಗೊಳಿಸಲು ಇಲಾಖೆ ಜ. 28ರಂದೇ ಸುತ್ತೋಲೆ ಹೊರಡಿಸಿದೆ. ಇತರ ಇಲಾಖೆಗಳನ್ನು ಸಹ ಅಭಿಯಾನದಲ್ಲಿ ಒಳಗೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಮೊಬೈಲ್‌ ಬಳಕೆ ತಗ್ಗಿಸಲು ಪಣ ತೊಟ್ಟಿದೆ.

ಅಭಿಯಾನದ ಯಶಸ್ವಿ ಅನುಷ್ಠಾನಕ್ಕಾಗಿ ಪ್ರಾಥಮಿಕ ಶಾಲೆಗಳ ಮಟ್ಟದಿಂದಿಡಿದು ಪ್ರೌಢಶಾಲೆ, ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಮೇಲ್ವಿಚಾರಣೆ ಮತ್ತು ಉಸ್ತುವಾರಿಗೆ ಶಿಕ್ಷಕರು ಹಾಗೂ ಅಧಿಕಾರಿಗಳನ್ನು ನೇಮಿಸಿ ಜವಾಬ್ದಾರಿಗಳನ್ನು ಹಂಚಿದೆ. ಅಭಿಯಾನ ಅನುಷ್ಠಾನದ ವರದಿಯನ್ನು ಸಂಬಂಧಿಸಿದವರಿಗೆ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಿದೆ.

ADVERTISEMENT

ಸರ್ಕಾರಿ ಶಿಕ್ಷಕನ ಆವಿಷ್ಕಾರ: ರಾಜ್ಯದಾದ್ಯಂತ ಸದ್ದು ಮಾಡಿರುವ ಈ ಅಭಿಯಾನ ಆರಂಭಿಸಿದ್ದು ಸರ್ಕಾರಿ ಶಾಲೆ ಶಿಕ್ಷಕ ಟಿ.ಎನ್. ಚಿಕ್ಕವೀರಯ್ಯ ಎಂಬುದು ವಿಶೇಷ. ತಾಲ್ಲೂಕಿನ ಬಿಡದಿ ಹೋಬಳಿಯ ಬನ್ನಿಕುಪ್ಪೆ (ಬಿ) ಕ್ಲಸ್ಟರ್‌ ಸಮೂಹ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ) ಆಗಿರುವ ಅವರು, ತಮ್ಮ ಕ್ಲಸ್ಟರ್‌ ವ್ಯಾಪ್ತಿಯ 14 ಸರ್ಕಾರಿ ಶಾಲೆಯಲ್ಲಿ ಮೊದಲಿಗೆ ಅಭಿಯಾನ ಶುರು ಮಾಡಿದರು.

ಆರಂಭದಲ್ಲಿ ಶಾಲೆಗಳಿಗಷ್ಟೇ ಸೀಮಿತವಾಗಿದ್ದ ಅಭಿಯಾನ ನಂತರ ವಿದ್ಯಾರ್ಥಿಗಳ ಮನೆಗಳಿಗೂ ವಿಸ್ತರಿಸಿ ಪೋಷಕರನ್ನೂ ಒಳಗೊಂಡಿತು. ರಾಜ್ಯದ ವಿವಿಧ ಭಾಗಗಳಿಗೆ ಹಬ್ಬಿದ ಅಭಿಯಾನ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿ ಸಾರ್ವಜನಿಕರ ಗಮನ ಸೆಳೆಯಿತು.

ರಾಮನಗರ ತಾಲ್ಲೂಕಿನ ವಾಜರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದ ‘ಮೊಬೈಲ್ ಬಿಡಿ ಪುಸ್ತಕ ಹಿಡಿ’ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಮಕ್ಕಳು. ಅಭಿಯಾನದ ರೂವಾರಿ ಶಿಕ್ಷಕ ಟಿ.ಎನ್. ಚಿಕ್ಕವೀರಯ್ಯ ಇದ್ದಾರೆ

ಕಲಿಕಾ ಸಮಸ್ಯೆಯ ಮೂಲ: ‘ಕೋವಿಡ್ ಬಳಿಕ ಮಕ್ಕಳಲ್ಲಿ ಮೊಬೈಲ್ ಗೀಳು ಮತ್ತಷ್ಟು ಉಲ್ಭಣಿಸಿತ್ತು. ಸೃಜನಶೀಲತೆ ಕುಂದಿಸುವ ಮತ್ತು ಕಲಿಕಾ ಸಮಸ್ಯೆಗೂ ಕಾರಣವಾಗಿದ್ದ ಈ ಗೀಳು ತಗ್ಗಿಸುವ ಸಲುವಾಗಿ ನನ್ನ ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರು ಹಾಗೂ ಪೋಷಕರ ಸಹಕಾರದೊಂದಿಗೆ ಅಭಿಯಾನವನ್ನು ಕಳೆದ 2025 ಫೆ. 14ರಂದು ಚಾಲನೆ ನೀಡಲಾಯಿತು’ ಎಂದು ಚಿಕ್ಕವೀರಯ್ಯ ‘ಪ್ರಜಾವಾಣಿ’ಗೆ ನೆನೆದರು.

‘ಪ್ರತಿ ಶನಿವಾರ ಶಾಲಾವಧಿ ಮುಗಿಯುತ್ತಿದ್ದಂತೆ ವಿದ್ಯಾರ್ಥಿಗಳನ್ನು ಒಂದು ತಾಸು ಶಾಲೆಯ ಗ್ರಂಥಾಲಯದಲ್ಲಿ ಕೂರಿಸಿ ಪುಸ್ತಕಗಳನ್ನು ಓದಿಸಲಾರಂಭಿಸಿದೆ. ಅಭಿಯಾನಕ್ಕೆ ಉತ್ತಮ ಬೆಂಬಲ ವ್ಯಕ್ತಪಡಿಸಿದ ಪೋಷಕರು ಸಹ ಗ್ರಂಥಾಲಯಕ್ಕೆ ಬಂದು ತಮ್ಮ ಮಕ್ಕಳೊಂದಿಗೆ ಪುಸ್ತಕ ಹಿಡಿದರು. ದಿನೇ ದಿನೇ ಅಭಿಯಾನ ಜನಪ್ರಿಯಗೊಂಡಿತು’ ಎಂದು ಹೇಳಿದರು.

‘ಅಭಿಯಾನದ ವಿಡಿಯೊಗಳು ಲಕ್ಷಗಟ್ಟಲೆ ವೀಕ್ಷಣೆ ಪಡೆದು ಇಲಾಖೆಯ ಗಮನಕ್ಕೂ ಬಂದಿತು. ಅಧಿಕಾರಿಗಳು ಕರೆದು ನನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು. ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ರಾಜ್ಯದಾದ್ಯಂತ ವಿಸ್ತರಿಸುವಂತೆ ಇಲಾಖೆಗೆ ಪತ್ರ ಬರೆದಿದ್ದರು. ಇಲಾಖೆ ಸಚಿವರಾದ ಮಧು ಬಂಗಾರಪ್ಪ ಸರ್ ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ ಅವರ ಗಮನ ಸೆಳೆದಿದ್ದ ಅಭಿಯಾನವನ್ನು ಇಲಾಖೆಯು ರಾಜ್ಯದಾದ್ಯಂತ ವಿಸ್ತರಿಸಿರುವುದು ಖುಷಿ ತಂದಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಮಧು ಬಂಗಾರಪ್ಪ ಸಚಿವ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ
ವಿದ್ಯಾರ್ಥಿಗಳನ್ನು ಪುಸ್ತಕದತ್ತ ಸೆಳೆಯುವ ದೃಷ್ಟಿಯಿಂದ ‘ಮೊಬೈಲ್ ಬಿಡಿ ಪುಸ್ತಕ ಹಿಡಿ’ ಅಭಿಯಾನವು ಅತ್ಯಂತ ಪರಿಣಾಮಕಾರಿಯಾಗಿದೆ. ಇದರ ಮಹತ್ವ ಮನಗಂಡು ಸ್ವತಃ ಮುಖ್ಯಮಂತ್ರಿಯವರೇ ಅಭಿಯಾನವನ್ನು ರಾಜ್ಯಕ್ಕೆ ವಿಸ್ತರಿಸುವ ಘೋಷಣೆ ಮಾಡಿದ್ದು ಅನುಷ್ಠಾನಕ್ಕೆ ಸುತ್ತೋಲೆ ಹೊರಡಿಸಲಾಗಿದೆ –
ಮಧು ಬಂಗಾರಪ್ಪ ಸಚಿವ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ

4 ಹಂತದಲ್ಲಿ ಅನುಷ್ಠಾನ...

* ಎಸ್‌ಡಿಎಂಸಿ ಮತ್ತು ಪೋಷಕರೊಂದಿಗೆ ಸಭೆ: ಮಕ್ಕಳ ಮೊಬೈಲ್ ಬಳಕೆ ಉದ್ದೇಶ ಅರಿಯುವ ಜೊತೆಗೆ ದೈನಂದಿನ ಚಟುವಟಿಕೆ ಸಂದರ್ಭದಲ್ಲಿ ಮೊಬೈಲ್ ನೀಡುವುದನ್ನು ತಗ್ಗಿಸುವುದು. ಮಕ್ಕಳೆದುರು ಪೋಷಕರು ಮೊಬೈಲ್ ಬಳಕೆ ನಿಯಂತ್ರಿಸಿ ಅವರೊಂದಿಗೆ ಆಟ–ಪಾಠದಲ್ಲಿ ಪಾಲ್ಗೊಳ್ಳುವುದು.

* ಶಾಲಾ ಹಂತದಲ್ಲಿ ಜಾಗೃತಿ ಕಾರ್ಯಕ್ರಮ: ಪ್ರತಿಭಾ ಕಾರಂಜಿ ಕಲೋತ್ಸವ ಸೇರಿದಂತೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ಅಭಿಯಾನದ ಬಗ್ಗೆ ಅರಿವು ಮೂಡಿಸುವುದು. ಮೊಬೈಲ್ ಬಳಕೆ ಅಡ್ಡ ಪರಿಣಾಮಗಳ ಕುರಿತು ಆರೋಗ್ಯ ಇಲಾಖೆ ಮೂಲಕ ಜಾಗೃತಿ ಉಂಟುಮಾಡುವುದು. ಗ್ರಂಥಾಲಯ ಬಳಕೆಗೆ ಉತ್ತೇಜಿಸಿ ಸೃಜನಶೀಲ ಚಟುವಟಿಕೆಗಳನ್ನು ಆರಂಭಿಸುವುದು.

* ಶಿಕ್ಷಣ ಸಂವಹನ ಸಾಮಗ್ರಿ ಬಳಕೆ: ಗ್ಯಾಜೆಟ್ ಮತ್ತು ಅಂತರ್ಜಾಲ ಬಳಕೆ ಕುರಿತ ಪೋಸ್ಟರ್ ಅನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ವೀಕ್ಷಿಸುವಂತೆ ಶಾಲೆ ಫಲಕದಲ್ಲಿ ಅಳವಡಿಸುವುದು. ಸಂಭ್ರಮ ಶನಿವಾರ ಕಾರ್ಯಕ್ರಮದಡಿ ಮಾಧ್ಯಮ ಮತ್ತು ಅಂತರ್ಜಾಲದ ಸದ್ಭಳಕೆ ಕುರಿತ ಚಟುವಟಿಕೆಗಳನ್ನು ಶಾಲೆಗಳಲ್ಲಿ ಅನುಷ್ಠಾನಗೊಳಿಸುವುದು. ವಿದ್ಯಾರ್ಥಿಗಳಲ್ಲಿ ಜೀವನ ಕೌಶಲ ಅಭಿವೃದ್ಧಿ ಕುರಿತು ಡಿಎಸ್‌ಇಆರ್‌ಟಿ ಸಿದ್ದಪಡಿಸಿರುವ ವಿಡಿಯೊಗಳನ್ನು ತೋರಿಸುವುದು.

* ಇತರ ಇಲಾಖೆಗಳ ಜೊತೆ ಶಾಲೆ ಸಹಭಾಗಿತ್ವ: ಮಹಿಳಾ ಮತ್ತು ಮಕ್ಕಳ ಇಲಾಖೆ ಗ್ರಂಥಾಲಯ ಇಲಾಖೆಯು ಮಕ್ಕಳನ್ನು ಲೈಬ್ರರಿಯತ್ತ ಹೆಚ್ಚು ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳನ್ನು ಒಳಗೊಂಡು ಈ ವಿಷಯದಲ್ಲಿ ಜಾಗೃತಿ ಮೂಡಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.