
ರಾಮನಗರ: ಐದು ವರ್ಷದ ಹಿಂದೆ ಚನ್ನಪಟ್ಟಣ ತಾಲ್ಲೂಕಿನ ಸೀಬನಹಳ್ಳಿಯಲ್ಲಿ ರಾಗಿ ವ್ಯಾಪಾರದ ವಿಷಯಕ್ಕೆ ವೆಂಕಟಸ್ವಾಮಯ್ಯ ಎಂಬುವರಿಗೆ ಜಾತಿ ನಿಂದನೆ ಮಾಡಿ ಕೊಲೆಗೈದಿದ್ದ ಇಬ್ಬರಿಗೆ ರಾಮನಗರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 7 ವರ್ಷ ಕಾರಾಗೃಹ ಶಿಕ್ಷೆ ಹಾಗೂ ₹21 ಸಾವಿರ ದಂಡ ವಿಧಿಸಿದೆ.
ಮಳೂರು ಹೋಬಳಿಯ ಸೀಬನಹಳ್ಳಿಯ ಶಿವರಾಜು ಮತ್ತು ಭೈರವ ಶಿಕ್ಷೆಗೊಳಗಾದ ಅಪರಾಧಿಗಳು. ಇಬ್ಬರೂ ಸೇರಿ ರಾಮನಗರದ ಚಾಮುಂಡಿಪುರ ಮೂಲದ ಬೋವಿ ಸಮುದಾಯದ ವೆಂಕಟಸ್ವಾಮಯ್ಯ (60) ಅವರನ್ನು ಕೊಲೆ ಮಾಡಿದ್ದರು.
ತೆಂಕನಹಳ್ಳಿಯಲ್ಲಿರುವ ತನ್ನ ಅಕ್ಕನ ಮನೆಯಲ್ಲಿ ವಾಸವಾಗಿದ್ದ ವೆಂಕಟಸ್ವಾಮಯ್ಯ, ಮನೆ ಬಳಕೆಗೆ ರಾಗಿ ಖರೀದಿಸುವುದಕ್ಕಾಗಿ 2021 ಫೆ. 1ರಂದು ತನ್ನ ಸಂಬಂಧಿಕರೊಂದಿಗೆ ಸೀಬನಹಳ್ಳಿಗೆ ಬಂದಿದ್ದರು. ಕುರುಬ ಸಮುದಾಯದ ಶಿವರಾಜು ಮತ್ತು ಭೈರವ ಅವರೊಂದಿಗೆ ವ್ಯಾಪಾರ ಮಾಡಿ ತಮ್ಮೂರಿಗೆ ಹಿಂದಿರುಗಿದ್ದರು.
ಮಾರನೇಯ ದಿನ ವೆಂಕಟಸ್ವಾಮಯ್ಯ ಅವರು ರಾಗಿ ತೆಗೆದುಕೊಂಡು ಹೋಗಲು ಬಂದಾಗ, ವ್ಯಾಪಾರದ ಬೆಲೆಯಲ್ಲಿ ಆರೋಪಿಗಳು ವ್ಯತ್ಯಾಸ ಮಾಡಿದ್ದರು. ಅವರೊಂದಿಗೆ ವ್ಯಾಪಾರ ನಿಲ್ಲಿಸಿದ್ದ ವೆಂಕಟಸ್ವಾಮಯ್ಯ, ಅದೇ ಗ್ರಾಮದ ಬೇರೊಬ್ಬರ ಬಳಿ ರಾಗಿ ಖರೀದಿ ಮಾಡಿ ಸಂಜೆ ಊರಿಗೆ ಹೊರಟ್ಟಿದ್ದರು.
ಗ್ರಾಮದ ರಸ್ತೆಯಲ್ಲಿ ವೆಂಕಟಸ್ವಾಮಯ್ಯ ಅವರನ್ನು ಅಡ್ಡಗಟ್ಟಿದ ಆರೋಪಿಗಳು ಅವಾಚ್ಯವಾಗಿ ಜಾತಿ ನಿಂದನೆ ಮಾಡಿದರು. ಈ ವೇಳೆ ಶಿವರಾಜ ಕೆನ್ನೆಗೆ ಹೊಡೆದಿದ್ದರಿಂದ ವೆಂಕಟಸ್ವಾಮಯ್ಯ ಅವರ ಕಿವಿಯಲ್ಲಿ ರಕ್ತ ಬಂದು ನೋವಿನಿಂದ ನೆಲಕ್ಕೆ ಕುಸಿದಿದ್ದರು. ಮತ್ತೊಬ್ಬ ಆರೋಪಿ ಭೈರವ, ಎದೆಗೆ ಒದ್ದು ಹಲ್ಲೆ ಮಾಡಿದ್ದ. ಇದರಿಂದಾಗಿ ವೆಂಕಟಸ್ವಾಮಯ್ಯ ಸ್ಥಳದಲ್ಲೇ ಮೃತಪಟ್ಟಿದ್ದರು.
ಈ ಕುರಿತು ಎಂ.ಕೆ. ದೊಡ್ಡಿ ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆ ಮತ್ತು ಕೊಲೆ ಆರೋಪದಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಚನ್ನಪಟ್ಟಣ ಉಪ ವಿಭಾಗದ ಅಂದಿನ ಡಿವೈಎಸ್ಪಿಗಳಾದ ಕೆ.ಎನ್. ರಮೇಶ್ ಹಾಗೂ ಪುರುಷೋತ್ತಮ್ ಅವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಎಂ. ಪಂಚಾಕ್ಷರಿ ಅವರು, ಆರೋಪಿಗಳ ವಿರುದ್ದದ ಆರೋಪ ಸಾಬೀತಾಗಿದ್ದರಿಂದ ಇಬ್ಬರಿಗೂ 7 ವರ್ಷ ಕಾರಾಗೃಹ ಶಿಕ್ಷೆ ಹಾಗೂ ₹21 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದರು. ಪ್ರಕರಣದ ಸರ್ಕಾರಿ ಅಭಿಯೋಜಕರಾಗಿ ವಿಮಲ ವಾದ ಮಂಡಿಸಿದ್ದರು.
ಕೋರ್ಟ್ ವಿಚಾರಣಾ ಪ್ರಕ್ರಿಯೆಯಲ್ಲಿ ಠಾಣೆ ಅಧಿಕಾರಿಗಳಾದ ಸದಾನಂದ, ಸಹನಾ ಪಾಟೀಲ ಹಾಗೂ ಕೋರ್ಟ್ ಸಿಬ್ಬಂದಿ ಸುನಂದಮ್ಮ ಅವರು ನಿಗಾ ವಹಿಸಿ, ಸಾಕ್ಷಿದಾರರನ್ನು ಕೋರ್ಟ್‌ಗೆ ಹಾಜರುಪಡಿಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.