ರಾಮನಗರ ಗಾಂಧಿನಗರದಲ್ಲಿ ಸೋಮವಾರ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ, ನಾಗರಿಕರಿಗೆ ಉಚಿತವಾಗಿ ಬಟ್ಟೆ ಬ್ಯಾಗ್ ವಿತರಣಾ ಕಾರ್ಯಕ್ಕೆ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಚಾಲನೆ ನೀಡಿದರು.
ರಾಮನಗರ: ‘ಪ್ಲಾಸ್ಟಿಕ್ ಬಳಕೆಯು ಪರಿಸರಕ್ಕೆ ಮಾರಕವಾಗಿದೆ. ಮಣ್ಣಿನಲ್ಲಿ ಕರಗದ ಪ್ಲಾಸ್ಟಿಕ್ ಮನುಷ್ಯನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ, ಪ್ಲಾಸ್ಟಿಕ್ ಮುಕ್ತ ರಾಮನಗರ ನಿರ್ಮಿಸುವ ಮೂಲಕ ಪರಿಸರ ಸಂರಕ್ಷಣೆಗೆ ನಾಗರಿಕರು ನಗರಸಭೆ ಜೊತೆ ಕೈ ಜೋಡಿಸಬೇಕು’ ಎಂದು’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹೇಳಿದರು.
ನಗರದ ಗಾಂಧಿನಗರ ಬಡಾವಣೆಯಲ್ಲಿ ಸೋಮವಾರ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಬಟ್ಟೆ ಕೈಚೀಲ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ನಗರದಲ್ಲಿ ಪ್ಲಾಸ್ಟಿಕ್‌ಗೆ ಕಡಿವಾಣ ಹಾಕುವುದಕ್ಕಾಗಿ ಸುಮಾರು 25 ಸಾವಿರ ಬಟ್ಟೆ ಬ್ಯಾಗ್‌ಗಳನ್ನು ವಿತರಣೆ ಮಾಡಲಾಗುತ್ತಿದೆ’ ಎಂದರು.
‘ನಾಗರಿಕರು ಅಂಗಡಿಗೆ ಹೋಗುವಾಗ ಈ ಬ್ಯಾಗ್‌ಗಳನ್ನು ಒಯ್ಯುವ ಮೂಲಕ, ಪ್ಲಾಸ್ಟಿಕ್ ಬ್ಯಾಗ್ ಬಳಕೆ ನಿಲ್ಲಿಸಬೇಕು. ಅಂಗಡಿಯವರು ತರಕಾರಿ, ಹಣ್ಣು, ದಿನಸಿ ಪದಾರ್ಥಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಕೊಟ್ಟರೆ ತೆಗೆದುಕೊಳ್ಳದೆ, ಅವರಿಗೂ ಪ್ಲಾಸ್ಟಿಕ್ ಬಳಸದಂತೆ ತಿಳಿ ಹೇಳಬೇಕು’ ಎಂದು ಸಲಹೆ ನೀಡಿದರು.
‘ನಗರಸಭೆ ವ್ಯಾಪ್ತಿಯಲ್ಲಿ ನಿತ್ಯ ಉತ್ಪಾದನೆಯಾಗುತ್ತಿರುವ ತ್ಯಾಜ್ಯದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಕೈ ಚೀಲ ಮತ್ತು ವಸ್ತುಗಳ ಪ್ರಮಾಣ ಶೇ 50ರಷ್ಟಿದೆ. ಪ್ಲ್ಯಾಸ್ಟಿಕ್ ವಸ್ತು ಪರಿಸರದಲ್ಲಿ ಕೊಳೆಯುವುದಿಲ್ಲ. ಇದರಿಂದಾಗಿ ಹಲವು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಹಾಗಾಗಿ, ಪ್ಲ್ಯಾಸ್ಟಿಕ್ ಬಳಕೆಯನ್ನು ಕ್ರಮೇಣ ತಗ್ಗಿಸಿ ನಗರವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಸಾರ್ವಜನಿಕರು ಸಹಕರಿಸಬೇಕು’ ಎಂದು ಮನವಿ ಮಾಡಿದರು.
‘ಬಟ್ಟೆ ಬ್ಯಾಗ್‌ಗಳನ್ನು ನಗರದ ಪ್ರತಿ ಮನೆಗೆ ತಲುಪಿಸಲು ನಗರಸಭೆಯು ವಿಶೇಷ ವ್ಯವಸ್ಥೆ ಮಾಡಿದೆ. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ 16 ಸಮುದಾಯ ಸಂಘಟಕರನ್ನು ನೇಮಕ ಮಾಡಿಕೊಂಡು ಮನೆ ಮನೆಗೆ ಬ್ಯಾಗ್ ವಿತರಿಸಲಾಗುವುದು. ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಮಣ್ಣಿನಲ್ಲಿ ಕರಗುವ ಬಟ್ಟೆ, ಸೆಣಬು ಸೇರಿದಂತೆ ಇತರ ಬ್ಯಾಗ್‌ಗಳನ್ನು ಬಳಸಿದರೆ ನಮ್ಮ ಪ್ರಕೃತಿಯೂ ಉಳಿಯಲಿದೆ’ ಎಂದರು.
ನಗರಸಭೆ ಉಪಾಧ್ಯಕ್ಷೆ ಆಯಿಷಾಬಾನು, ಪೌರಾಯುಕ್ತ ಡಾ. ಜಯಣ್ಣ, ನಗರಸಭೆ ಸದಸ್ಯರಾದ ಬಿ.ಸಿ. ಪಾರ್ವತಮ್ಮ, ನಾಗಮ್ಮ, ಪದ್ಮಶ್ರೀ, ಗಿರಿಜಮ್ಮ, ಪರಿಸರ ಎಂಜಿನಿಯರ್ ಸುಬ್ರಮಣ್ಯ, ಆರೋಗ್ಯ ನಿರೀಕ್ಷಕ ವಿಜಯಕುಮಾರ್, ಕಂದಾಯ ನಿರೀಕ್ಷಕ ಆರ್. ನಾಗರಾಜು ಹಾಗೂ ಇತರರು ಇದ್ದರು.
ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ: ಸೆ. 10ಕ್ಕೆ ಚಾಲನೆ
‘ಎಂಜಿನಿಯರಿಂಗ್ ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್‌ಗಳಿಗೆ ನಡೆಯುವ ನೀಟ್ ಜೆಇಇ ಸಿಇಟಿ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ನಗರಸಭೆಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಲು ನಿರ್ಧರಿಸಿದೆ. ಸೆ. 10ರಂದು ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹೇಳಿದರು. ‘2025- 26ನೇ ಸಾಲಿನ ನಗರಸಭೆ ಬಜೆಟ್‍ನಲ್ಲಿ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗೆ ತರಬೇತಿ ನೀಡುವ ಕುರಿತು ಘೋಷಿಸಲಾಗಿತ್ತು. ಅದಕ್ಕಾಗಿ ಅಕ್ಕಾ ಐಎಎಸ್ ಅಕಾಡೆಮಿಯೊಂದಿಗೆ ಒಪ್ಪಂದ ಮಾಡಿಕೊಂಡು ತರಬೇತಿ ನೀಡಲಾಗುತ್ತಿದೆ. ಪ್ರಥಮ ಮತ್ತು ದ್ವಿತೀಯ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ನಿತ್ಯ ಸಂಜೆ 4ರಿಂದ 6 ಗಂಟೆಯವರೆಗೆ ತರಬೇತಿ ಸಿಗಲಿದೆ’ ಎಂದು ತಮ್ಮ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪೌರಾಯುಕ್ತ ಡಾ. ಜಯಣ್ಣ ಮಾತನಾಡಿ ‘ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿ ವರ್ಷ 10 ತಿಂಗಳು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ 8 ತಿಂಗಳ ಮಾತ್ರ ತರಬೇತಿ ನಡೆಯಲಿದೆ. ಕಾಲೇಜು ಸಮಯ ಮುಗಿದ ಬಳಿಕ ವಿದ್ಯಾರ್ಥಿಗಳು ತರಬೇತಿಗೆ ಹಾಜರಾಗಲಿದ್ದಾರೆ. ಸದ್ಯ 150 ವಿದ್ಯಾರ್ಥಿಗಳ ತರಬೇತಿಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮತ್ತಷ್ಟು ಮಂದಿ ಬಂದರೂ ತರಬೇತಿ ನೀಡಲಾಗುವುದು. ವಿಷಯವಾರು ಕಿರು ಪರೀಕ್ಷೆ ಹಾಗೂ ಸತತ ಮೌಲ್ಯಮಾಪನದ ಮೂಲಕ ವಿದ್ಯಾರ್ಥಿಗಳನ್ನು ಅಣಿಗೊಳಿಸಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.