ADVERTISEMENT

ಪತ್ರಿಕಾ ವೃತ್ತಿ ಪಾವಿತ್ರ್ಯತೆ ಕಾಪಾಡಬೇಕಿದೆ: ಸಂಸದ ಸಿ.ಎನ್. ಮಂಜನಾಥ್

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 2:34 IST
Last Updated 3 ಸೆಪ್ಟೆಂಬರ್ 2025, 2:34 IST
<div class="paragraphs"><p>ರಾಮನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ‌ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕ ಮಂಗಳವಾರ ಹಮ್ಮಿಕೊಂಡಿದ್ದ ‌ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಗಣ್ಯರು ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. </p></div>

ರಾಮನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ‌ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕ ಮಂಗಳವಾರ ಹಮ್ಮಿಕೊಂಡಿದ್ದ ‌ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಗಣ್ಯರು ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.

   

ರಾಮನಗರ: ‘ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮದ ಗೌರವ ಮತ್ತು ಪಾವಿತ್ರ್ಯತೆ ಕಾಪಾಡಿಕೊಂಡು ಹೋಗುವುದು ಪತ್ರಕರ್ತರ ಜವಾಬ್ದಾರಿ. ಆ ನಿಟ್ಟಿನಲ್ಲಿ ಎಲ್ಲರೂ ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು’ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಕಿವಿಮಾತು ಹೇಳಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ‌ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕ ಮಂಗಳವಾರ ಹಮ್ಮಿಕೊಂಡಿದ್ದ ‌ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ADVERTISEMENT

‘ಸುದ್ದಿ ಪ್ರಸಾರ ಅಥವಾ ಪ್ರಕಟಣೆಗೆ ಮುಂಚೆ ಸತ್ಯಾಸತ್ಯತೆ ಪರಿಶೀಲಿಸಬೇಕು. ಇತ್ತೀಚೆಗೆ ಅದು ಸರಿಯಾಗಿ ಆಗುತ್ತಿಲ್ಲ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತಿದೆ. ಮಾಧ್ಯಮ ಸಮಾಜದ ಸೇತುವೆಯಾಗಿ ಕೆಲಸ ಮಾಡಬೇಕೇ ಹೊರತು ಗೋಡೆಯಾಗಬಾರದು’ ಎಂದು ಅಭಿಪ್ರಾಯಪಟ್ಟರು.

‘ಸಾಮಾಜಿಕ ಜಾಲತಾಣವು ಪಿಡುಗಾಗಿ ಸಮಾಜವನ್ನು ಕಾಡುತ್ತಿದೆ. ಒಬ್ಬ ಭಯೋತ್ಪಾದಕ ಒಂದಿಷ್ಟು ಮಂದಿಯನ್ನು ಕೊಲ್ಲಬಹುದು. ಆದರೆ, ಸಾಮಾಜಿಕ ಭಯೋತ್ಪಾದಕ ಇಡೀ ವ್ಯವಸ್ಥೆಯನ್ನು ಬುಡಮೇಳು ಮಾಡಿ, ಸಮಾಜದ ದಿಕ್ಕು ತಪ್ಪಿಸುತ್ತಾನೆ’ ಎಂದು ತಿಳಿಸಿದ ಅವರು, ‘ಜಿಲ್ಲಾ ಪತ್ರಕರ್ತರ ಭವನ ನಿರ್ಮಾಣಕ್ಕೆ ಸಂಸದರ ‌ನಿಧಿಯಿಂದ ₹10 ಲಕ್ಷ ನೀಡುವೆ’ ಎಂದು ಭರವಸೆ ನೀಡಿದರು.

ಆಶಯ ನುಡಿಗಳನ್ನಾಡಿದ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ‘ಜಿಲ್ಲೆಯಲ್ಲಿ ಮಾಗಡಿ ಶಾಸಕ ಬಾಲಕೃಷ್ಣ ಅವರ ಸಹಕಾರದಿಂದ ಅಲ್ಲಿ ಪತ್ರಿಕಾ ಭವನಕ್ಕೆ ಭೂಮಿಪೂಜೆ ನೆರವೇರಿದೆ. ಜಿಲ್ಲಾ ಕೇಂದ್ರ ರಾಮನಗರ ಸೇರಿ ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿಯಲ್ಲೂ ಭವ‌ನಕ್ಕಾಗಿ ಸಂಘದ ಪದಾಧಿಕಾರಿಗಳು ಜನಪ್ರತಿನಿಧಿಗಳ ಸಹಕಾರದೊಂದಿಗೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ‘ಮಾಧ್ಯಮಗಳು ಒಳ್ಳೆಯ ವಿಷಯಗಳನ್ನು ವೈಭವೀಕರಿಸುವ ಮೂಲಕ ಸಾಮಾಜಿಕ ಮೌಲ್ಯಗಳನ್ನು ಬಿತ್ತಬೇಕು. ಜನರನ್ನು ಜಾಗೃತಗೊಳಿಸಬೇಕು. ದನಿ‌ ಇಲ್ಲದವರ ದನಿಯಾಗಬೇಕು. ಗಾಂಧೀಜಿ, ಅಂಬೇಡ್ಕರ್ ಸಹ ಪತ್ರಿಕೆಗಳನ್ನು ನಡೆಸುತ್ತಾ ಸಮಾಜದ ದನಿಯಾಗಿದ್ದರು. ವ್ಯವಸ್ಥೆ ಬದಲಿಸುವ ಶಕ್ತಿ ಪತ್ರಿಕೆಗಳಿಗೆ ಇದೆ’ ಎಂದು ಹೇಳಿದರು.

ಸನ್ಮಾನ:

ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ಉಪ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಪಿ. ತ್ಯಾಗರಾಜ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಎಚ್. ಮಂಜು, ಪರಿಸರ ಕಾರ್ಯಕರ್ತ ಮರಸಪ್ಪ ರವಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಅವರನ್ನು ಸನ್ಮಾನಿಸಲಾಯಿತು.

ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಸೂರ್ಯಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳು ಸಂಘದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.

ಮಾಜಿ ಶಾಸಕರಾದ ಸಿ.ಎಂ. ಲಿಂಗಪ್ಪ, ಎ. ಮಂಜುನಾಥ್, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ಬಿಡದಿ ಪುರಸಭೆ ಅಧ್ಯಕ್ಷ ಹರಿಪ್ರಸಾದ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಸತೀಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ಕೂಟಗಲ್ ವಿಎಸ್‌ಎಸ್‌ಎನ್ ಅಧ್ಯಕ್ಷ ಗಂಗಾಧರಗೌಡ, ಸಂಘದ ರಾಜ್ಯ ಪದಾಧಿಕಾರಿಗಳಾದ ಕೆರಗೋಡು ಸೋಮಶೇಖರ್, ಮತ್ತಿಕೆರೆ ಜಯರಾಮ್, ಚೆಲುವರಾಜ್, ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳು ಇದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್ ಸ್ವಾಗತಿಸಿದರು.

‘ಹೆಚ್ಚುತ್ತಿದೆ ಸಿಂಡಿಕೇಟ್ ಪತ್ರಿಕೋದ್ಯಮ’

‘ಸತ್ಯ ಮತ್ತು ವಾಸ್ತವಾಂಶ ಮರೆಮಾಚಿ ತಮಗೆ ಬೇಕಾದ್ದನ್ನು ಮತ್ತು ಬೇಕಾದವರನ್ನು ವೈಭವೀಕರಿಸುವುವ ಸಿಂಡಿಕೇಟ್ ಪತ್ರಿಕೋದ್ಯಮ ಈಗ ಹೆಚ್ಚು ಸಕ್ರಿಯವಾಗಿದೆ. ಸುದ್ದಿಮನೆಯಲ್ಲಿರುವವರು ಧರ್ಮ ಜಾತಿ ಹಾಗೂ ರಾಜಕೀಯ ಪಕ್ಷಗಳ ವಕ್ತಾರರಾಗಿದ್ದಾರೆ. ಮಾಧ್ಯಮ ಉದ್ಯಮವಾದಾಗಲೇ ಅವುಗಳ ಮೂಲ ಆಶಯ ಹಾದಿ ತಪ್ಪಿದೆ. ಪತ್ರಕರ್ತರು ಮುಕ್ತ ಸ್ವಾತಂತ್ರ್ಯವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಕಚೇರಿಗಳಲ್ಲಿ ತಿಂಗಳಿಗೆ ಎಷ್ಟು ಸುದ್ದಿ ಮತ್ತು ವಿಶೇಷ ವರದಿಗಳ ಬದಲು ಎಷ್ಟು ಆದಾಯ ತಂದಿದ್ದೀರಿ ಎಂದು ಕೇಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಬ್ಲ್ಯಾಕ್‌ಮೇಲ್ ಮಿತಿ ಮೀರಿದೆ. ವೃತ್ತಿಯ ಗುಣಮಟ್ಟ ಸುಧಾರಣೆಯಾಗದಿರುವುದೇ ಇದಕ್ಕೆ ಕಾರಣ. ಜನ ಪತ್ರಕರ್ತರನ್ನು ಅನುಮಾನದಿಂದ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಪತ್ರಕರ್ತರು ಆತ್ಮವಿಮರ್ಶೆ ಮಾಡಿಕೊಂಡು ಸುಧಾರಿಸಿಕೊಳ್ಳಬೇಕಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಸಲಹೆಗಾರ ಪಿ. ತ್ಯಾಗರಾಜ್ ಅಭಿಪ್ರಾಯಪಟ್ಟರು.

ಯಾವುದೇ ವಿವಾದಾತ್ಮಕ ವಿಚಾರವನ್ನು ವೈಭವೀಕರಣ ಮಾಡಬಾರದು. ಆ ನಿಟ್ಟಿನಲ್ಲಿ ಧರ್ಮಸ್ಥಳ ಪ್ರಕರಣವನ್ನು ಸರ್ವಧರ್ಮ ಸೌಹಾರ್ದ ಬಯಸುವ ಎಲ್ಲರೂ ಖಂಡಿಸಬೇಕು. ಕ್ಷೇತ್ರದ ವಿರುದ್ಧದ ಅಪಪ್ರಚಾರ ಸುಳ್ಳು ಆರೋಪ ನಿಲ್ಲಬೇಕು
– ಡಾ. ಸಿ.ಎನ್. ಮಂಜುನಾಥ್, ಸಂಸದ
ರಾಜಕಾರಣ ಮಾಧ್ಯಮ ಸೇರಿ ಎಲ್ಲಾ ರಂಗಗಳು‌ ಕಲುಷಿತವಾಗಿದ್ದು ಶುದ್ಧೀಕರಣದ ಕೆಲಸ ಆಗಬೇಕಿದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಪತ್ರಿಕೋದ್ಯಮದ ಪಾತ್ರ ಮಹತ್ವದ್ದು. ಅದರ ಮೌಲ್ಯಗಳು ಉಳಿಯಬೇಕು. ಇದರಲ್ಲಿ ಸಂಘದ ಜವಾಬ್ದಾರಿ ದೊಡ್ಡದು
– ಎಚ್.ಸಿ. ಬಾಲಕೃಷ್ಣ, ಮಾಗಡಿ ಶಾಸಕ
ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮಗಳು ತಮ್ಮದೇ ಆದ ಅಭಿಪ್ರಾಯ ಮತ್ತು ಅಜೆಂಡಾವನ್ನು ಜನರ ಮೇಲೆ ಹೇರುವ ಕೆಲಸವನ್ನು ಮಾಡುತ್ತಿವೆ. ಸಮಾಜದ ಸ್ವಾಸ್ಥ್ಯಕ್ಕೆ ಇದು ಅಪಾಯಕಾರಿ. ಮಾಧ್ಯಮದವರ ಬಗ್ಗೆ ಗೌರವದ ಜೊತೆಗೆ ಭಯಪಡಬೇಕಾದ ಸ್ಥಿತಿ ಇದೆ
– ಕೆ. ಶೇಷಾದ್ರಿ ಶಶಿ, ಅಧ್ಯಕ್ಷ, ರಾಮನಗರ ನಗರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.