ADVERTISEMENT

ರಾಮನಗರ | ‘ಕೈ ಕಡಿಸಿಕೊಳ್ಳಲು ಕಾಂಗ್ರೆಸ್‌ಗೆ ಮತ ಹಾಕಬೇಕಿತ್ತೆ...’

ಕನಕಪುರ ಘಟನೆಗೆ ದಲಿತ ಸಂಘಟನೆಗಳ ಆಕ್ರೋಶ: ಸಿಎಂ–ಡಿಸಿಎಂ ಮನೆಗೆ ಮುತ್ತಿಗೆ ಹಾಕುವ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 6:14 IST
Last Updated 30 ಜುಲೈ 2024, 6:14 IST
ಕನಕಪುರ ತಾಲ್ಲೂಕಿನಲ್ಲಿ ದಲಿತರ ಮೇಲೆ ನಡೆದ ಹಲ್ಲೆ ಪ್ರಕರಣ ಖಂಡಿಸಿ ಕರ್ನಾಟಕ ಭೀಮ ಸಂಘಟನೆಗಳ ಮಹಾ ಒಕ್ಕೂಟ, ಭಾರತೀಯ ಮೂಲ ನಿವಾಸಿ ಕಾವಲು ಪಡೆ ಹಾಗೂ ಇತರ ಸಂಘಟನೆಗಳು ರಾಮನಗರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದವು
ಕನಕಪುರ ತಾಲ್ಲೂಕಿನಲ್ಲಿ ದಲಿತರ ಮೇಲೆ ನಡೆದ ಹಲ್ಲೆ ಪ್ರಕರಣ ಖಂಡಿಸಿ ಕರ್ನಾಟಕ ಭೀಮ ಸಂಘಟನೆಗಳ ಮಹಾ ಒಕ್ಕೂಟ, ಭಾರತೀಯ ಮೂಲ ನಿವಾಸಿ ಕಾವಲು ಪಡೆ ಹಾಗೂ ಇತರ ಸಂಘಟನೆಗಳು ರಾಮನಗರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದವು   

ರಾಮನಗರ: ‘ತಮ್ಮ ಕೈ ಕಡಿಸಿಕೊಳ್ಳಲು ದಲಿತರು ಕಾಂಗ್ರೆಸ್‌ಗೆ ಮತ ಹಾಕಬೇಕಿತ್ತೆ? ಸಂವಿಧಾನ ಬದಲಾಯಿಸುತ್ತೇವೆ ಎಂದವರ ಸರ್ಕಾರ ಬದಲಿಸಿ, ಸಂವಿಧಾನ ರಕ್ಷಿಸುತ್ತೇವೆ ಎಂದ ಕಾಂಗ್ರೆಸ್‌ ಅಧಿಕಾರಕ್ಕೆ ತಂದ ದಲಿತರಿಗೆ ನಿಮ್ಮ ಕೊಡುಗೆ ಇದೇನಾ?’ ಎಂದು ಕರ್ನಾಟಕ ಭೀಮ ಸಂಘಟನೆಗಳ ಮಹಾ ಒಕ್ಕೂಟದ ಅಧ್ಯಕ್ಷ ಕೆ. ಮರಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಕನಕಪುರ ತಾಲ್ಲೂಕಿನ ಮಳಗಾಳು ಮತ್ತು ತಾಮಸಂದ್ರದಲ್ಲಿ ದಲಿತರ ಮೇಲೆ ನಡೆದ ಹಲ್ಲೆ ಖಂಡಿಸಿ ಕರ್ನಾಟಕ ಭೀಮ ಸಂಘಟನೆಗಳ ಮಹಾ ಒಕ್ಕೂಟ, ಭಾರತೀಯ ಮೂಲ ನಿವಾಸಿ ಕಾವಲು ಪಡೆ ಹಾಗೂ ಇತರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕ್ಷೇತ್ರದಲ್ಲಿ ಪುಡಿ ರೌಡಿಗಳು ದಲಿತರ ಕೊಲೆ, ಕೈ ಮತ್ತು ಕಾಲು ಕಡಿಯುವುದು ಸಾಮಾನ್ಯವಾಗಿದೆ. ಪ್ರಕರಣಗಳು ವರದಿಯಾದರೂ ಇದುವರೆಗೆ ಯಾರಿಗೂ ಶಿಕ್ಷೆಯಾಗಿಲ್ಲ. ಇವರ ಪಾಲಿಗೆ ದಲಿತರೆಂದರೆ ಪ್ರಾಣಿಗಳಾಂತಾಗಿದ್ದಾರೆ. ದಲಿತರ ಕೇರಿಗೆ ನುಗ್ಗಿ ಹಲ್ಲೆ ನಡೆಸುವ ಅಧಿಕಾರವನ್ನು ಇವರಿಗೆ ಕೊಟ್ಟವರಾರು?’ ಎಂದು ಪ್ರಶ್ನಿಸಿದರು.

ADVERTISEMENT

‘ಕನಕಪುರವಷ್ಟೇ ಅಲ್ಲದೆ ರಾಜ್ಯದ ಹಲವು ಭಾಗಗಳಲ್ಲಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದರೂ, ರಾಜ್ಯ ಸರ್ಕಾರ ಅವರಿಗೆ ಕಠಿಣ ಕಾನೂನು ಕ್ರಮ ಕೈಗೊಂಡು ರಕ್ಷಣೆ ನೀಡಲು ವಿಫಲವಾಗಿದೆ. ದಲಿತರ ಸಿಟ್ಟು ನೆತ್ತಿಗೇರಿದರೆ ಯಾವ ಪಕ್ಷ ಮತ್ತು ಸರ್ಕಾರಗಳು ಉಳಿಯುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಇದಕ್ಕೆ ತಕ್ಕ ಪ್ರತಿಫಲ ಅನಭವಿಸುತ್ತೀರಿ?’ ಎಂದು ಎಚ್ಚರಿಕೆ ನೀಡಿದರು.

ಒಕ್ಕೂಟದ ಗೌರವಾಧ್ಯಕ್ಷ ಹೆಬ್ಬಾಳ ವೆಂಕಟೇಶ್ ಮಾತನಾಡಿ, ‘ಪೊಲೀಸರು ದಲಿತ ಯುವಕನ ಕೈ ಕಡಿದ ರೌಡಿಗಳ ಕಾಲಿಗೆ ಗುಂಡು ಹಾರಿಸುವ ಬದಲು, ಎದೆಗೆ ಗುಂಡು ಹಾರಿಸಬೇಕಿತ್ತು. ದಲಿತರನ್ನೇ ಗುರಿಯಾಗಿಸಿಕೊಂಡು ಹಲ್ಲೆ ಮತ್ತು ದೌರ್ಜನ್ಯ ಮಾಡುವವರ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಒತ್ತಡಕ್ಕೆ ಮಣಿಯದೆ ಪ್ರಕರಣದ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕು’ ಎಂದು ಆಗ್ರಹಿಸಿದರು.

ಕಾರ್ಯಾಧ್ಯಕ್ಷ ಮುನಿ ಆಂಜಿನಪ್ಪ, ‘ದಲಿತರ ಮೇಲಿನ ಹಲ್ಲೆಗಳ ಜೊತೆಗೆ, ಸತ್ತವರನ್ನು ಹೂಳಲು ಸ್ಮಶಾನವಿಲ್ಲದ ಸ್ಥಿತಿ ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿದೆ. ದಲಿತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು. ಈ ಹೋರಾಟ ಸಾಂಕೇತಿಕವಾಗಿದ್ದು, ಮುಂದೆ ರಾಜಧಾನಿಯಲ್ಲಿ ಜಮಾಯಿಸಿ ಸಿ.ಎಂ ಮತ್ತು ಡಿಸಿಎಂ ಮನೆಗೆ ಮುತ್ತಿಗೆ ಹಾಕುತ್ತೇವೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ರಾಜ್ಯಾಧ್ಯಕ್ಷ ಬೆಳತೂರು ವೆಂಕಟೇಶ್, ಕರ್ನಾಟಕ ದಲಿತ ಕ್ರಿಯಾ ವೇದಿಕೆಯ ಕಾಡುಗೋಡಿ ಸೊಣ್ಣಪ್ಪ, ಕರ್ನಾಟಕ ದಲಿತ ಹಿಂದುಳಿದವರ ಸಮಗ್ರ ಅಭಿವೃದ್ಧಿ ಸಂಘದ ಕೆ. ಸಂಪತ್, ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಎ. ರಾಜು, ಬರ್ತಲೋಮ್, ಗಂಗಣ್ಣ, ಶಕುಂತಲಮ್ಮ, ಎಂ. ಮುರುಗನ್, ಎ.ಜಿ. ಕೃಷ್ಣಮೂರ್ತಿ ಹಾಗೂ ಮುಖಂಡರು ಇದ್ದರು.

ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿರುವುದರಿಂದ ದಲಿತ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಸಭೆ ನಡೆಸಬೇಕು. ಅವರ ಕುಂದುಕೊರತೆ ಆಲಿಸಿ ಪರಿಹಾರ ಒದಗಿಸಬೇಕು
– ಕೆ.ಪಿ. ನಾಗರಾಜ್ ರಾಜ್ಯಾಧ್ಯಕ್ಷ ಭಾರತೀಯ ಮೂಲ ನಿವಾಸಿ ಕಾವಲುಪಡೆ

ಪ್ರತಿಭಟನಾ ಮೆರವಣಿಗೆ ಕನಕಪುರ ಸರ್ಕಲ್‌ನಲ್ಲಿ ಜಮಾಯಿಸಿದ ಎರಡೂ ಸಂಘಟನೆಗಳ ಕಾರ್ಯಕರ್ತರು ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ದೌರ್ಜನ್ಯ ಪ್ರಕರಣಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ರಾಜ್ಯ ಸರ್ಕಾರ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿದರು. ತಮಟೆ ಶಬ್ದದೊಂದಿಗೆ ನೀಲಿಬಾವುಟ ಮತ್ತು ಬ್ಯಾನರ್ ಹಿಡಿದು ಕಾರ್ಯಕರ್ತರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಪೊಲೀಸ್ ಬಂದೋಬಸ್ತ್ ಪ್ರತಿಭಟನೆ ಸಂದರ್ಭದಲ್ಲಿ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ಪೊಲೀಸರ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲಾಧಿಕಾರಿ ಕಚೇರಿ ಹೊರಗೆ ಮತ್ತು ಒಳಗೆ ಹಿರಿಯ ಮತ್ತು ಕಿರಿಯ ಪೊಲೀಸ್ ಅಧಿಕಾರಿಗಳ ದಂಡು ಸೇರಿತ್ತು. ಪ್ರವೇಶದ್ವಾರದ ಬಳಿ ಎರಡು ಪೊಲೀಸ್ ಬಸ್ಸುಗಳಲ್ಲಿ ಸಿಬ್ಬಂದಿ ಬೀಡು ಬಿಟ್ಟಿದ್ದರು. ಪ್ರತಿಭಟನಾಕಾರರು ಡಿ.ಸಿ ಕಚೇರಿ ಪ್ರವೇಶಿಸಲು ಅವಕಾಶ ನೀಡದಂತೆ ಗೇಟಿನ ಬಳಿಯೇ ಅಧಿಕಾರಿಗಳು ನಿಂತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.