ADVERTISEMENT

ಪೋಷಕರು ‘ಚೆನ್ನಾಗಿ ಓದು’ ಎಂದು ಬುದ್ಧಿಮಾತು ಹೇಳಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 13:15 IST
Last Updated 18 ಫೆಬ್ರುವರಿ 2026, 13:15 IST
   

ಕನಕಪುರ: ಮೊಬೈಲ್ ನೋಡುವುದನ್ನು ಬಿಟ್ಟು ಚನ್ನಾಗಿ ಓದು ಎಂದು ‍ಪೋಷಕರು ಬುದ್ಧಿಮಾತು ಹೇಳಿದ್ದಕ್ಕೆ ಬೇಸರಗೊಂಡ ದ್ವಿತೀಯ ಪಿಯು ವಿದ್ಯಾರ್ಥಿಯೊಬ್ಬ, ತನ್ನ ಕಾಲೇಜಿನ ಕಟ್ಟಡದ 2ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಆದಿತ್ಯ ಪಿಯು ಕಾಲೇಜಿನಲ್ಲಿ ಬುಧವಾರ ನಡೆದಿದೆ.

ಶ್ರೀನಿವಾಸ್ (18) ಮೃತ ವಿದ್ಯಾರ್ಥಿ. ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ಬೇಕರಿ ಹೊಂದಿರುವ ಮೂಲತಃ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ದಂಟಳ್ಳಿ ಗ್ರಾಮದ ಪ್ರಭು ಅವರ ಪುತ್ರನಾದ ಶ್ರೀನಿವಾಸ್, ಕಾಲೇಜಿನಲ್ಲಿ ವಾಣಿಜ್ಯ ‌ವಿಭಾಗದಲ್ಲಿ ಓದುತ್ತಿದ್ದ.

ದ್ವಿತೀಯ ಪಿಯು ಪರೀಕ್ಷೆ ಸಮೀಪಿಸಿದರೂ ಶ್ರೀನಿವಾಸ್ ಓದಿನ ಕಡೆಗೆ ಸರಿಯಾಗಿ ಗಮನ ಕೊಡದೆ, ಮೊಬೈಲ್‌ನಲ್ಲೇ ಹೆಚ್ಚು ಮುಳುಗಿರುತ್ತಿದ್ದ. ಮಗನ ನಿರ್ಲಕ್ಷ್ಯ ಕಂಡ ಪೋಷಕರು, ‘ಮೊಬೈಲ್ ನೋಡುವುದನ್ನು ಬಿಟ್ಟು ಚನ್ನಾಗಿ ಓದು’ ಎಂದು ಬುದ್ಧಿವಾದ ಹೇಳಿದ್ದರು. ‘ಚನ್ನಾಗಿ ಓದುವಂತೆ ಮಗನಿಗೆ ಹೇಳಿ’ ಎಂದು ಕಾಲೇಜಿನ ಪ್ರಾಂಶುಪಾಲರ ಗಮನಕ್ಕೂ ತಂದಿದ್ದರು ಎಂದು ಕನಕಪುರ ಟೌನ್ ಠಾಣೆ ಪೊಲೀಸರು ತಿಳಿಸಿದರು.

ಆತ್ಮಹತ್ಯೆ ಬೆದರಿಕೆ

ಓದುವಂತೆ ಪೋಷಕರು ಬುದ್ಧಿಮಾತು ಹೇಳಿದಾಗಲೆಲ್ಲಾ ಶ್ರೀನಿವಾಸ್, ‘ಓದು ಓದು ಎಂದು ನನಗೆ ಹೀಗೆ ಒತ್ತಡ ಹಾಕಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಶ್ರೀನಿವಾಸ್ ಬೆದರಿಸುತ್ತಿದ್ದ. ಆದರೂ, ಪರೀಕ್ಷೆ ಸಮೀಪಿಸಿದರೂ ಮಗ ಸರಿಯಾಗಿ ತಯಾರಿ ನಡೆಸದಿರುವುದನ್ನು ಕಂಡು ಚಿಂತಾಕ್ರಾಂತರಾಗಿದ್ದ ಪೋಷಕರು, ಆಗಾಗ ಓದುವಂತೆ ಹೇಳಿದ್ದರು ಪೊಲೀಸರು ಹೇಳಿದರು.

ಎಂದಿನಂತೆ ಮಂಗಳವಾರ ಕಾಲೇಜಿಗೆ ಬಂದಿದ್ದ ಶ್ರೀನಿವಾಸ್ ಎಲ್ಲಾ ತರಗತಿಗಳಲ್ಲಿ ಇದ್ದ. ಸಂಜೆ 4ರ ಸುಮಾರಿಗೆ ಕಾಲೇಜು ಮುಗಿಯುತ್ತಿದ್ದಂತೆ ಎರಡನೇ ಮಹಡಿಗೆ ಹೋಗಿ ಜಿಗಿದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಕಾಲೇಜಿನ ಸಿಬ್ಬಂದಿ ಕೂಡಲೇ ದಯಾನಂದ ಸಾಗರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ತಡರಾತ್ರಿ ನಿಧನ

ವಿದ್ಯಾರ್ಥಿ ಸ್ಥಿತಿ ಗಂಭೀರವಾಗಿದ್ದರಿಂದ, ದಯಾನಂದ ಸಾಗರ ಆಸ್ಪತ್ರೆಯಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ತಡರಾತ್ರಿ 2 ಗಂಟೆಗೆ ಕೊನೆಯುಸಿರೆಳೆದಿದ್ದಾನೆ. ಘಟನೆ ಕುರಿತು ಯುಡಿಆರ್‌ ಪ್ರಕರಣ ದಾಖಲಿಸಿಕೊಂಡು, ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು ಎಂದು ಪೊಲೀಸರು ತಿಳಿಸಿದರು.

ಬೇಕರಿ ಹೊಂದಿರುವ ಪ್ರಭು ಅವರ ಇಬ್ಬರಿಗೆ ಪುತ್ರ ಹಾಗೂ ಪುತ್ರಿ ಸೇರಿ ಇಬ್ಬರು ಮಕ್ಕಳಿದ್ದಾರೆ. ಇದೀಗ, ಏಕೈಕ ಪುತ್ರನಾದ ಶ್ರೀನಿವಾಸ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪುತ್ರನನ್ನು ಕಳೆದುಕೊಂಡ ತಂದೆ–ತಾಯಿ ಹಾಗೂ ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು. ಸ್ವಗ್ರಾಮ ದಂಟಳ್ಳಿಯಲ್ಲಿ ಅಂತ್ಯಕ್ರಿಯೆ ಜರುಗಿತು.