ADVERTISEMENT

ಒಡೆಯುವವರ ವಿರುದ್ಧ ರೈತರು ಒಗ್ಗಟ್ಟಾಗಬೇಕು: ರಾಮಚಂದ್ರೇಗೌಡ

ಪ್ರೊ.ಎಂ.ಡಿ. ನಂಜುಂಡಸ್ವಾಮಿ ಜನ್ಮ ದಿನಾಚರಣೆ ಕಾರ್ಯಕ್ರಮ; ಎತ್ತಿನ ಬಂಡಿಯಲ್ಲಿ ಭಾವಚಿತ್ರ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 4:51 IST
Last Updated 16 ಫೆಬ್ರುವರಿ 2026, 4:51 IST
ನಾಯಕ ಪ್ರೊ.ಎಂ.ಡಿ. ನಂಜುಂಡ ಸ್ವಾಮಿ ಜನ್ಮದಿನದ ಪ್ರಯಕ್ತ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ರಾಮನಗರದ ಬಿ.ಎಂ. ರಸ್ತೆಯಲ್ಲಿ ನಂಜುಂಡಸ್ವಾಮಿ ಅವರ ಭಾವಚಿತ್ರವನ್ನು ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡಲಾಯಿತು
ನಾಯಕ ಪ್ರೊ.ಎಂ.ಡಿ. ನಂಜುಂಡ ಸ್ವಾಮಿ ಜನ್ಮದಿನದ ಪ್ರಯಕ್ತ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ರಾಮನಗರದ ಬಿ.ಎಂ. ರಸ್ತೆಯಲ್ಲಿ ನಂಜುಂಡಸ್ವಾಮಿ ಅವರ ಭಾವಚಿತ್ರವನ್ನು ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡಲಾಯಿತು   

ರಾಮನಗರ: ‘ರೈತರು ಒಗ್ಗಟ್ಟಾದರೆ ತಮಗೆ ಕಷ್ಟ ಎನ್ನುವುದನ್ನು ಅರಿತಿರುವ ರಾಜಕಾರಣಿಗಳು ಯಾವಾಗಲೂ ಒಡಕು ಮೂಡಿಸುವ ತಂತ್ರಗಾರಿಕೆ ನಡೆಸುತ್ತಿರುತ್ತಾರೆ. ಈ ರೀತಿ ಒಡೆಯುವವರ ವಿರುದ್ಧ ರೈತರು ಒಗ್ಗಟ್ಟಾಗಿ ತಮ್ಮ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳಬೇಕು’ ಎಂದು ಜಾನಪದ ವಿದ್ವಾಂಸ ಪ್ರೊ.ಹಿ.ಶಿ ರಾಮಚಂದ್ರೇಗೌಡ ಸಲಹೆ ನೀಡಿದರು.

ನಗರದ ಎಪಿಎಂಸಿಯಲ್ಲಿರುವ ರೈತ ಭವನದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಮ್ಮಿಕೊಂಡಿದ್ದ ಪ್ರೊ.ಎಂ.ಡಿ. ನಂಜುಂಡ ಸ್ವಾಮಿ ಜನ್ಮ ದಿನಾಚರಣೆ, ವಿಚಾರ ಸಂಕಿರಣ ಮತ್ತು ಹಕ್ಕೋತ್ತಾಯ ಸಭೆಯಲ್ಲಿ ಮಾತನಾಡಿದ ಅವರು, ‘ಶ್ರಮಿಕ ವರ್ಗವಾದ ರೈತರೇ ಈ ದೇಶದ ಬಹುಸಂಖ್ಯಾತರು. ಆದರೆ, ಅಲ್ಪಸಂಖ್ಯಾತ ಆಳುವ ವರ್ಗವನ್ನು ಎಲ್ಲಾ ಹಂತದಲ್ಲೂ ರೈತರನ್ನು ವಿಭಜಿಸುವ ಕೆಲಸ ಮಾಡುತ್ತಿದೆ’ ಎಂದು ಕಿಡಿಕಾರಿದರು.

‘ರೈತನಿಗೆ ತಾನು ಬೆಳೆದ ಬೆಳೆಗೆ ಬೆಲೆ ನಿಗದಿಪಡಿಸುವ ಶಕ್ತಿಯೂ ಇಲ್ಲದಂತೆ ಆಳುವ ವರ್ಗ ಮಾಡಿದೆ. ಈ ಹಿನ್ನೆಲೆಯಲ್ಲಿ ಕುವೆಂಪು ಅವರು ರೈತ ಮಕ್ಕಳನ್ನು ಗ್ರಾಮೀಣರನ್ನು ಮಾನಸಿಕವಾಗಿ ಬಲಗೊಳಿಸಿ, ಅಧಿಕಾರಿಗಳು ಮತ್ತು ಪುರೋಹಿತಷಾಹಿಗಳ ಒತ್ತಡಕ್ಕೆ ಸಿಲುಕದಂತೆ ಮಾಡಿ ಎಂದಿದ್ದರು. ಆದರೆ, ರೈತರು ಇಂದಿಗೂ ಸಂಘಟಿತರಾಗಿಲ್ಲ’ ಎಂದರು.

ADVERTISEMENT

‘ರೈತರು ಸಂಘಟಿಸಿ ಹೋರಾಟಕ್ಕೆ ಅಣಿಗೊಳಿಸುವಲ್ಲಿ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರು ಯಶಸ್ವಿಯಾಗಿದ್ದರು. ಸಾಮಾಜಿಕ ನ್ಯಾಯದ ಪರವಾಗಿದ್ ಅವರು ಬೆಳವಣಿಗೆ ಬಗ್ಗೆ, ಅವರ ತಂದೆ ಸೇರಿದಂತೆ ಇತರರಲ್ಲಿ ನಂಬಿಕೆ ಇರಲಿಲ್ಲ. ನೇರ ನುಡಿಗೆ ಹೆಸರಾಗಿದ್ದ ನಂಜುಂಡಸ್ವಾಮಿ, ರೈತರ ಬೃಹತ್ ಹೋರಾಟಗಳನ್ನು ರೂಪಿಸಿದರು. ಪ್ರಬಲ ನಾಯಕರಾಗಿದ್ದ ಅವರು ಅಧಿಕಾರಕ್ಕೆ ಆಸೆಪಟ್ಟವರಲ್ಲ’ ಎಂದು ನೆನೆದರು.

‘ಆಧುನಿಕ ಜಗತ್ತಿನಲ್ಲಿ ರೈತರನ್ನು ತೃತೀಯ ದರ್ಜೆಯ ನಾಗರಿಕರಂತೆ ನೋಡಲಾಗುತ್ತಿದೆ. ಅದೇ ಕಾರಣಕ್ಕೆ ಆಳುವ ವರ್ಗಗಳು ರೈತ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿವೆ. ಈ ಕುರಿತು ರೈತರು ಜ್ಞಾನಿಗಳಾಗಿ ಜಾಗೃತರಾಗಬೇಕು. ಜಗತ್ತನ್ನು ಆಳುವುದು ಜ್ಣಾನ ಎಂಬುದನ್ನು ಅರಿತಯಬೇಕು. ನಾವು ಚದುರಿದರಷ್ಟೇ ಆಳುವ ವರ್ಗದ ಬೇಳೆ ಬೇಯುತ್ತದೆ’ ಎಂದು ತಿಳಿಸಿದರು.

ಹಿರಿಯ ರೈತ ನಾಯಕಿ ಅನಸೂಯಮ್ಮ ಮಾತನಾಡಿ, ‘ರಾಜ್ಯ ಸರ್ಕಾರವು ಸ್ಮಾರ್ಟ್ ನಗರಗಳನ್ನು ನಿರ್ಮಾಣ ಮಾಡಲು ಹೊರಟಿದೆ. ಅದರಿಂದ ಮಾತ್ರ ಅಭಿವೃದ್ಧಿ ಎಂಬ ಧೋರಣೆ ಹೊಂದಿದೆ. ಆದರೆ ಸ್ಮಾರ್ಟ್ ಹಳ್ಳಿಗಳನ್ನು ನಿರ್ಮಾಣ ಮಾಡಿ, ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಭಾರತವು ಹಳ್ಳಿಗಳಿಂದ ಕೂಡಿದ ದೇಶ. ಇಲ್ಲಿ ಕೇವಲ ನಗರಗಳು ಬೆಳೆದ ಮಾತ್ರಕ್ಕೆ ಇಡೀ ದೇಶ ಅಭಿವೃದ್ಧಿಯಾಗಿದೆ ಎಂಬ ಕಲ್ಪನೆ ತಪ್ಪು. ಆಳುವ ವರ್ಗಗಳು ಕೃಷಿ ಕ್ಷೇತ್ರ ಮತ್ತು ರೈತ ಸಮೂಹದ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡಿದರೆ, ಗ್ರಾಮೀಣ ಭಾಗ ಅಭಿವೃದ್ಧಿಯಾದರೆ ಮಾತ್ರ ದೇಶವು ನಿಜಕ್ಕೂ ಅಭಿವೃದ್ಧಿ ಪಥದಲ್ಲಿದೆ ಎನ್ನಬಹುದು’ ಎಂದು ಹೇಳಿದರು.

ನಂತರ ಸಂಘದ ಪದಾಧಿಕಾರಿಗಳ ನಿಯೋಗವು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರನ್ನು ಭೇಟಿ ಮಾಡಿ, ತಮ್ಮ ಹಕ್ಕೋತ್ತಾಯಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿತು.

ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಕೆ.ಎನ್. ರಾಜು, ಶ್ರೀನಿವಾಸ್ ನಲ್ಲಹಳ್ಳಿ, ರಮೇಶ್, ಕೋದಂಡರಾಮ್, ಕೃಷ್ಣಪ್ಪ, ರಾಜು, ಶಿವರಾಜು, ಬೋರೇಗೌಡ, ಕೆ.ಟಿ. ಗುರುಲಿಂಗಯ್ಯ, ದೇವರಾಜು, ಕೃಷ್ಣಪ್ಪ, ಕೆ. ರಾಮಯ್ಯ, ಬಿ.ಎಂ. ಶ್ರೀನಿವಾಸ್, ಎಂ.ಸಿ. ವಿಶ್ವನಾಥ್ ಹಾಗೂ ಇತರರು ಇದ್ದರು.

‘ನಾಯಕರಾಗದ ರಾಜಕಾರಣಿಗಳು’

‘ಸಂಸತ್ ಮತ್ತು ವಿಧಾನಸೌಧದಲ್ಲಿ ನಮ್ಮನ್ನು ಪ್ರತಿನಿಧಿಸುವವರು ನಾಯಕರಾಗಿ ಉಳಿಯದೆ ಕೇವಲ ರಾಜಕಾರಣಿಗಳಾಗಿದ್ದಾರೆ. ಹಣ ಹೆಂಡ ಸೇರಿದಂತೆ ಇತರ ಆಮೀಷ ತೋರಿಸಿ ಚುನಾವಣೆಗಳನ್ನು ಗೆಲ್ಲುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ನೈಜ ಸಮಸ್ಯೆಗಳು ಹಾಗೂ ಅಭಿವೃದ್ಧಿ ವಿಷಯಗಳನ್ನು ಮುಂದಿಟ್ಟುಕೊಂಡು ಯಾರೂ ಮತ ಕೇಳುತ್ತಿಲ್ಲ. ರೈತರು ಇದಕ್ಕೆ ಸೊಪ್ಪು ಹಾಕದೆ ಸ್ವಾಭಿಮಾನಿ ಬೆಳೆಸಿಕೊಳ್ಳಬೇಕು. ತಮ್ಮ ಹಿತಾಸಕ್ತಿಗೆ ಸ್ಪಂದಿಸುವವರಿಗೆ ಮಾತ್ರ ಮತ ಹಾಕಬೇಕು’ ಎಂದು ರಾಮಚಂದ್ರೇಗೌಡ ಕಿವಿಮಾತು ಹೇಳಿದರು.

ಹಕ್ಕೊತ್ತಾಯಗಳು

* ರೈತರಿಗೆ ಮಾರಕವಾಗಿರುವ ಬೀಜ ಮಸೂದೆ– 2025 ಹಿಂಪಡೆಯಬೇಕು.

* ಕೃಷಿ ವಲಯಕ್ಕೆ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಪರಿಗಣಿಸದೆ ಸುಲಭವಾಗಿ ಸಾಲ ಸಿಗುವಂತಾಗಬೇಕು.

* ವಿವಿಧ ಕಾರಣಕ್ಕ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ತಡೆಯಬೇಕು.

* ಅಭಿವೃದ್ಧಿ ಹೆಸರಲ್ಲಿ ರೈತರ ಫಲವತ್ತಾದ ಜಮೀನನ್ನು ಸ್ವಾಧೀನ ಮಾಡಿಕೊಳ್ಳಬಾರದು.

* ಡಾ. ಎಂ.ಎಸ್. ಸ್ವಾಮಿನಾಥ್ ವರದಿ ಶಿಫಾರಸಿನಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು.

* ಮನರೇಗಾ ಯೋಜನೆಯನ್ನು ಹಿಂದಿನಂತೆಯೇ ಯಥಾವತ್ ಜಾರಿಗೆಗೊಳಿಸಬೇಕು.

* ರೈತರ ಹಿತಾಸಕ್ತಿ ವಿರುದ್ಧವಾದ ಸ್ಮಾರ್ಟ್ ಮೀಟರ್ ಯೋಜನೆ ವಿದ್ಯುತ್‌ ಶಕ್ತಿ ಮಸೂದೆಗಳನ್ನು ಕೈ ಬಿಡಬೇಕು.

ಯುವಜನರು ಕೃಷಿ ಕ್ಷೇತ್ರ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ದನಿ ಎತ್ತಬೇಕು. ರೈತ ಮತ್ತು ಕೃಷಿ ಕ್ಷೇತ್ರ ಚನ್ನಾಗಿದ್ದರೆ ಮಾತ್ರ ದೇಶ ಸುಭಿಕ್ಷವಾಗಿರಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರಗಳು ರೈತರ ಸಮಸ್ಯೆಗಳು ಸ್ಪಂದಿಸಬೇಕು
– ಶ್ರೀನಿವಾಸ್ ನಲ್ಲಹಳ್ಳಿ, ರೈತ ಮುಖಂಡ ಕನಕಪುರ
ವಿಚಾರ ಸಂಕಿರಣದಲ್ಲಿ ಹಿರಿಯ ರೈತ ನಾಯಕಿ ಅನಸೂಯಮ್ಮ ಮಾತನಾಡಿದರು. ಪ್ರೊ.ಹಿ.ಶಿ. ರಾಮಚಂದ್ರೇಗೌಡ ಹಾಗೂ ರೈತ ಸಂಘದ ಪದಾಧಿಕಾರಿಗಳು ಇದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.