ADVERTISEMENT

ರಾಮನಗರ | ಮುಖ್ಯಾಧಿಕಾರಿ, ವಿಪಕ್ಷ ನಾಯಕ ವಿರುದ್ಧ ಲಂಚ ಆರೋಪ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 6:40 IST
Last Updated 21 ನವೆಂಬರ್ 2025, 6:40 IST
<div class="paragraphs"><p>ರಾಮನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿಡದಿ ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ ಹಾಗೂ ಜೆಡಿಎಸ್–ಕಾಂಗ್ರೆಸ್ ಸದಸ್ಯರು ಭಾಗವಹಿಸಿದ್ದರು</p></div>

ರಾಮನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿಡದಿ ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ ಹಾಗೂ ಜೆಡಿಎಸ್–ಕಾಂಗ್ರೆಸ್ ಸದಸ್ಯರು ಭಾಗವಹಿಸಿದ್ದರು

   

ರಾಮನಗರ: ಜಿಲ್ಲೆಯ ಬಿಡದಿ ಪುರಸಭೆ ವಾಟರ್‌ಮ್ಯಾನ್‌ಗಳಿಗೆ ಪಾವತಿಸಿರುವ ಬಾಕಿ ವೇತನ ₹1.64 ಕೋಟಿಯಲ್ಲಿ ಮುಖ್ಯಾಧಿಕಾರಿ ಮೀನಾಕ್ಷಿ ಎಂ. ಹಾಗೂ ವಿರೋಧ ಪಕ್ಷದ ನಾಯಕ ಕಾಂಗ್ರೆಸ್‌ನ ಸಿ. ಉಮೇಶ್ ಅವರು ನೌಕರರಿಂದ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ ಹಾಗೂ ಕಾಂಗ್ರೆಸ್‌–ಜೆಡಿಎಸ್‌ ಸದಸ್ಯರು ಆರೋಪಿಸಿದ್ದಾರೆ.

ಈ ಕುರಿತು ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾನುಪ್ರಿಯಾ, ‘ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಪಡೆದ ಬಳಿಕ ಬಾಕಿ ವೇತನ ಪಾವತಿಸೋಣ ಎಂದು ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದೆ. ಪತ್ರ ಲೆಕ್ಕಿಸದ ಮುಖ್ಯಾಧಿಕಾರಿ ವೇತನ ಪಾವತಿಸಿದ್ದಾರೆ. ಹೀಗಾದರೆ, ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಯಾಕಿರಬೇಕು? ಎಂದು ಪ್ರಶ್ನಿಸಿದರು.

ADVERTISEMENT

‘ಪುರಸಭೆಯ ನೌಕರರಾದ ಸಾವಿತ್ರಮ್ಮ ಮೇಲೆ ಮುಖ್ಯಾಧಿಕಾರಿ ಒತ್ತಡ ಹೇರಿ, ಅವರ ಲಾಗಿನ್‌ನಿಂದಲೇ ವೇತನ ಪಾವತಿ ಪ್ರಕ್ರಿಯೆ ನಡೆಸಲಾಗಿದೆ. ಈ ಬಗ್ಗೆ ಸಾವಿತ್ರಮ್ಮ ಅವರು ಯೋಜನಾ ನಿರ್ದೇಶಕರಿಗೆ ದೂರು ಕೊಟ್ಟರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಅವರೂ ಇದರಲ್ಲಿ ಶಾಮೀಲಾಗಿದ್ದಾರೆ’
ಎಂದರು.

ಸದಸ್ಯ ನಾಗಣ್ಣ ಮಾತನಾಡಿ, ‘ನೌಕರರ ವೇತನ ಪಾವತಿಗೆ ನಮ್ಮ ತಕರಾರಿಲ್ಲ. ಆದರೆ, ಸಭೆಯಲ್ಲಿ ಒಪ್ಪಿಗೆ ಪಡೆಯದೆ ಕಿಕ್‌ಬ್ಯಾಕ್‌ಗಾಗಿ ಅವಸರದಲ್ಲಿ ಪಾವತಿಸಿದ್ದಾರೆ. ಇದರಲ್ಲಿ ಮುಖ್ಯಾಧಿಕಾರಿ ಮತ್ತು ಸದಸ್ಯ ಸಿ. ಉಮೇಶ್ ಭಾಗಿಯಾಗಿದ್ದಾರೆ. ಇಬ್ಬರಿಗೂ ಆಪ್ತನಾದ ಮಾಯಣ್ಣ ಎಂಬಾತನ ಮೂಲಕ ನೌಕರರಿಂದ ಸುಮಾರು ₹25 ಲಕ್ಷ ಹಣ ಸಂಗ್ರಹಿಸಿದ್ದಾರೆ’ ಎಂದ ಆರೋಪಿಸಿದರು.

ಲೋಕಾಯುಕ್ತಕ್ಕೆ ದೂರು: ‘ಕಿಕ್‌ಬ್ಯಾಕ್ ಪಡೆದಿರುವ ಮುಖ್ಯಾಧಿಕಾರಿ ಮತ್ತು ಸದಸ್ಯ ಉಮೇಶ್ ವಿರುದ್ಧ ಬಿಡದಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೇವೆ. ಜಿಲ್ಲಾಧಿಕಾರಿ, ಪೌರಾಡಳಿತ ನಿರ್ದೇಶನಾಲಯ ಹಾಗೂ ಲೋಕಾಯುಕ್ತಕ್ಕೂ ದೂರು ನೀಡಲಾಗುವುದು. ಸರ್ಕಾರ ಉನ್ನತಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ನೌಕರರಿಗೆ ಮಾಯಣ್ಣ ಎಂಬಾತ ಕರೆ ಮಾಡಿ, ಹಣ ಕೇಳಿರುವ ಮೊಬೈಲ್ ಫೋನ್ ಸಂಭಾಷಣೆ ಹಾಗೂ ಹಣ ಪಡೆಯುತ್ತಿರುವ ಚಿತ್ರವನ್ನು ಪ್ರದರ್ಶಿಸಿದರು. ಸದಸ್ಯರ ಜೊತೆಗೆ ಬಂದಿದ್ದ ನಾಲ್ವರು ವಾಟರ್‌ಮ್ಯಾನ್‌ಗಳು, ವೇತನಕ್ಕಾಗಿ ಮಾಯಣ್ಣನಿಗೆ ನಾವು ಹಣ ಕೊಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಪುರಸಭೆಯ ಕಾಂಗ್ರೆಸ್ ಮತ್ತು ಜೆಡಿಎಸ್‌ ಸದಸ್ಯರು ಇದ್ದರು.

‘ನಿಯಮಾನುಸಾರ ಪಾವತಿ’
‘ಪುರಸಭೆಯ 71 ನೌಕರರ ಬಾಕಿ ವೇತನ ಪಾವತಿಗೆ ಕಾರ್ಮಿಕ ಕೋರ್ಟ್ ಆದೇಶದ ಜೊತೆಗೆ, ಪೌರಾಡಳಿತ ನಿರ್ದೇಶನಾಲಯ ಸಹ ಪುರಸಭೆ ನಿಧಿಯಿಂದ ಬಾಕಿ ಮೊತ್ತ ಪಾವತಿಸುವಂತೆ ಆದೇಶಿಸಿದೆ. ಅದರಂತೆ, ಯೋಜನಾ ನಿರ್ದೇಶಕರು ಹಾಗೂ ಪುರಸಭೆಯ ಹಿಂದಿನ ಅಧ್ಯಕ್ಷರ ಆದೇಶದ ಮೇರೆಗೆ, ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ 23 ವಾಟರ್‌ಮ್ಯಾನ್‌ಗಳಿಗೆ ನಿಯಮಾನುಸಾರ ಬಾಕಿ ಮೊತ್ತ ₹1.65 ಕೋಟಿ ಪಾವತಿಸಲಾಗಿದೆ. ಕೋರ್ಟ್ ಆದೇಶ ಪಾಲಿಸಿ ಅನುಪಾಲನ ವರದಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ. ನೌಕರರಿಂದ ನಾನು ಕಿಕ್‌ಬ್ಯಾಕ್‌ ಪಡೆದಿದ್ದೇನೆ ಎಂಬ ಆರೋಪ ಸುಳ್ಳು’ ಎಂದು ತಮ್ಮ ವಿರುದ್ಧದ ಆರೋಪಗಳ ಕುರಿತು ಪುರಸಭೆ ಮುಖ್ಯಾಧಿಕಾರಿ ಎಂ. ಮೀನಾಕ್ಷಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.